• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸರ್ಕಾರಿ ಶಿಕ್ಷಕರಿಗೆ ಗುಡ್ ನ್ಯೂಸ್: ಬುಧವಾರದಿಂದಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ

ಸರ್ಕಾರಿ ಶಿಕ್ಷಕರಿಗೆ ಗುಡ್ ನ್ಯೂಸ್: ಬುಧವಾರದಿಂದಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ

ಶಿಕ್ಷಕರೊಂದಿಗೆ ಸುರೇಶ್ ಕುಮಾರ್

ಶಿಕ್ಷಕರೊಂದಿಗೆ ಸುರೇಶ್ ಕುಮಾರ್

ಈ ಬಾರಿ ವರ್ಗಾವಣಾ‌ ಪ್ರಕ್ರಿಯೆಯೂ‌ ಅತ್ಯಂತ‌ ಪಾರದರ್ಶಕವಾಗಿರಲಿದೆ. ಶಿಕ್ಷಕ ಮಿತ್ರ ಆ್ಯಪ್​​ ಮೂಲಕ ಶಿಕ್ಷಕರು‌ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ‌ ಪಾಲ್ಗೊಳ್ಳಬಹುದು.

  • Share this:

ಬೆಂಗಳೂರು (ಜೂ. 28): ಕಳೆದ ಎರಡ್ಮೂರು ವರ್ಷಗಳಿಂದ ಕಾಯುತ್ತಿದ್ದ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಗೆ ಮಹೂರ್ತ ಕೂಡಿಬಂದಿದ್ದು, ಜೂ. 30ರಿಂದಲೇ ಪ್ರಾರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ವರ್ಗಾವಣೆ ಪ್ರಕ್ರಿಯೆ ವಿವರಗಳನ್ನು ಪ್ರಕಟಿಸಿದ ಅವರು, ಅಧಿಕೃತ ವೇಳಾಪಟ್ಟಿ ಹಾಗೂ ಅಧಿಸೂಚನೆ ಜೂ. 30ಕ್ಕೆ   ಪ್ರಕಟಗೊಳ್ಳಲಿದ್ದು, ಅಂದಿನಿಂದಲೇ ವರ್ಗಾವಣಾ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ.


2019-20ನೇ ಸಾಲಿನಲ್ಲಿ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣೆಗೆ ಒಳಗಾಗಿದ್ದ ಶಿಕ್ಷಕರಿಗೆ ನ್ಯಾಯ ದೊರಕಿಸುವುದು ನಮ್ಮ ಜವಾಬ್ದಾರಿಯಾಗಿತ್ತು. ಅವರ ಸಂಕಷ್ಟಗಳನ್ನು ನಾನು ಕಣ್ಣಾರೆ ನೋಡಿದ್ದೇನೆ. ವಿಧಾನ ಮಂಡಲದಲ್ಲಿ ನಾವು ಉಭಯ ಸದನಗಳಲ್ಲಿ ಅನುಮೋದನೆ ಪಡೆದು ಕಾಯ್ದೆ ಅಧಿಸೂಚಿಸಿದ ಸಂದರ್ಭದಲ್ಲಿ ಕೆಲವು ಶಿಕ್ಷಕರು ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದಿದ್ದರು. ಅದಕ್ಕಾಗಿ ನಾವು ಸುಗ್ರೀವಾಜ್ಞೆಯ ಮೂಲಕ ಕಾಯ್ದೆಗೆ ತಿದ್ದುಪಡಿ ತರಲು ಮುಂದಾದೆವು. ಸಚಿವ ಸಂಪುಟದ ಅನುಮೋದನೆಯನ್ನು ಪಡೆದು ರಾಜ್ಯಪಾಲರು ಒಪ್ಪಿದ ಬಳಿಕ ಸುಗ್ರೀವಾಜ್ಞೆಯನ್ನು‌ ನಾವು ಹೊರತಂದಿದ್ದೇವೆ. ಪೂರಕ‌ ನಿಯಮಗಳನ್ನು ಸಹ ಅಂತಿಮಗೊಳಿಸಿ, ವರ್ಗಾವಣಾ‌ ಪ್ರಕ್ರಿಯೆಗೆ ಚಾಲನೆ ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ವರ್ಗಾವಣೆ ಪ್ರಕ್ರಿಯೆ ಹಿಂದಿನ ಘಟನಾವಳಿಗಳನ್ನು ಸಚಿವರು ಮೆಲುಕು ಹಾಕಿದರು.


2019-2020ರಲ್ಲಿ ಕಡ್ಡಾಯ, ಹೆಚ್ಚುವರಿ ವರ್ಗಾವಣೆಗೊಂಡ ಶಿಕ್ಷಕರಿಗೆ ಮೊದಲ ಆದ್ಯತೆ ದೊರೆಯಲಿದೆ. ಈ ಬಾರಿಗೆ ಸಂಬಂಧಿಸಿದಂತೆ ವಲಯ ಅಥವಾ ಹೆಚ್ಚುವರಿ ವರ್ಗಾವಣೆ ಯಾವುದೂ ಇರುವುದಿಲ್ಲ. 2019-20ರಲ್ಲಿ ಕಡ್ಡಾಯ ಅಥವಾ  ಹೆಚ್ಚುವರಿ ವರ್ಗಾವಣೆಗೊಳಗಾಗಿದ್ದ ಶಿಕ್ಷಕರಿಗೆ ಮೊದಲ ಆದ್ಯತೆಯ ಕೌನ್ಸೆಲಿಂಗ್ ಇರಲಿದೆ.  ಈಗಾಗಲೇ ಸ್ವೀಕೃತಗೊಂಡಿರುವ 75000 ಅರ್ಜಿಗಳಿಗೆ ಸಂಬಂಧಿಸಿದಂತೆ ಕೌನ್ಸೆಲಿಂಗ್ ಪ್ರಕ್ರಿಯೆ ಪ್ರಾರಂಭ ಮಾಡಲಾಗುತ್ತದೆ. ಈ ಶಿಕ್ಷಕರನ್ನು‌ ಹೊರತುಪಡಿಸಿ‌ ಹೆಚ್ಚುವರಿಯಾಗಿ ಅರ್ಹರಾಗುವ ಶಿಕ್ಷಕರಿಗೂ ಸಹ ಎರಡನೇ ಹಂತದ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.


ಶಿಕ್ಷಕರು ಜವಾಬ್ದಾರಿ ಮೆರೆಯಬೇಕಿದೆ:


ಸಾವಿರಾರು ಶಿಕ್ಷಕರು ಚಾತಕಪಕ್ಷಿಗಳ ಹಾಗೆ ಕಾಯುತ್ತಿದ್ದಾರೆ. ಇದು ಸರ್ಕಾರ ಅವರಿಗಾಗಿ ಕಷ್ಟಪಟ್ಟು ಹೊರತಂದಿರುವ ಅತ್ಯಂತ ಶಿಕ್ಷಕ‌ಸ್ನೇಹಿ‌‌ ಕಾಯ್ದೆಯಾಗಿದೆ. ಇದನ್ನು ಅನುಷ್ಠಾನಗೊಳಿಸಿಕೊಂಡು ಅದರ‌ ಪ್ರಯೋಜನವನ್ನು ಪಡೆಯುವುದು, ತಮ್ಮ‌ ಸಮುದಾಯದ ಹಿತಕ್ಕೆ ಮಿಡಿಯುವುದೂ‌ ಅವರ ಕರ್ತವ್ಯವಾಗಿದೆ. ಎಲ್ಲ‌ ಶಿಕ್ಷಕರೂ ಇದನ್ನು ಸ್ವಾಗತಿಸುವ ಜವಾಬ್ದಾರಿ ಹೊಂದಿದ್ದಾರೆ. ಯಾವುದೇ ಅಡೆತಡೆಗಳಿಲ್ಲದೇ ಇದನ್ನು ಅನುಷ್ಠಾನ ಮಾಡಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ ಎಂದು  ವಿವರಿಸಿದರು.


ಇದನ್ನು ಓದಿ: ರಾಜ್ಯದಲ್ಲಿ ಮತ್ತಷ್ಟು ಇಳಿಕೆ ಕಂಡ ಸೋಂಕು; 2ಕ್ಕಿಂತಲೂ ಕಡಿಮೆ ಇದೆ ಪಾಸಿಟಿವಿಟಿ ದರ


ಈ ಬಾರಿ ವರ್ಗಾವಣಾ‌ ಪ್ರಕ್ರಿಯೆಯೂ‌ ಅತ್ಯಂತ‌ ಪಾರದರ್ಶಕವಾಗಿರಲಿದೆ. ಶಿಕ್ಷಕ ಮಿತ್ರ ಆ್ಯಪ್​​ ಮೂಲಕ ಶಿಕ್ಷಕರು‌ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ‌ ಪಾಲ್ಗೊಳ್ಳಬಹುದು. ಸ್ಥಳ ಆಯ್ಕೆಯನ್ನೂ ಮಾಡಿಕೊಳ್ಳಬಹುದು.  ಹಾಗಾಗಿ ಇಂತಹುದೊಂದು ಶಿಕ್ಷಕರ‌ ಪರವಾದ‌ ಸಂಪೂರ್ಣ ಪಾರದರ್ಶಕವಾದ ವ್ಯವಸ್ಥೆಯನ್ನು ಪ್ರತಿಯೊಬ್ಬರೂ ಸ್ವಾಗತಿಸಿ, ಬಳಸಿ ಪ್ರಯೋಜನ ಪಡೆಯಬೇಕೆಂದು  ಮನವಿ ಮಾಡಿದರು.


ಭೌತಿಕ ಶಾಲಾರಂಭಕ್ಕೆ ಕ್ರಿಯಾ ಯೋಜನೆ : 


ಜುಲೈ1ರಿಂದ 2021-22ನೇ ಸಾಲಿನ    ಶೈಕ್ಷಣಿಕ ವರ್ಷ ಆರಂಭವಾಗಲಿದ್ದರೂ ಹಿನ್ನೆಲೆಯಲ್ಲಿ ಭೌತಿಕ ತರಗತಿಗಳು ಆರಂಭವಾಗಿಲ್ಲ. ನಮ್ಮ‌ ಮಕ್ಕಳು ಕಲಿಕೆಯಿಂದ ವಂಚಿತರಾಗದಿರಲು ಕ್ರಿಯಾಯೋಜನೆಯನ್ನು ರೂಪಿಸಬೇಕೆನ್ನುವುದು ಎಲ್ಲರ ಒಲವಾಗಿದ್ದು, ಆ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕ್ರಮಕ್ಕೆ ಮುಂದಾಗಿದೆ ಈ ಕುರಿತು  ಶಿಕ್ಷಣ ತಜ್ಞರ ಜೊತೆ  ಸುದೀರ್ಘ ಸಭೆ‌ ನಡೆಸಲಾಗಿದೆ.  ಡಾ.ದೇವಿಶೆಟ್ಟಿ ಅವರ ವರದಿಯನ್ನು ಸಹ ಸಭೆಯಲ್ಲಿ‌ ಅವಲೋಕಿಸಿದ್ದು, ವಿಶೇಷವಾಗಿ ಗ್ರಾಮೀಣ ಭಾಗದ ನಮ್ಮ‌ ಮಕ್ಕಳು ಕಲಿಕೆಯಿಂದ ವಂಚಿತರಾಗದಿರಲು ಕ್ರಿಯಾಯೋಜನೆಯನ್ನು ರೂಪಿಸಬೇಕೆನ್ನುವುದು ಎಲ್ಲರ ಒಲವಾಗಿದೆ ಎಂದು   ತಿಳಿಸಿದರು.


ಕಳೆದ ಸಾಲಿನಲ್ಲಿ ನಾವು ಜಾರಿಗೆ ತಂದ ಯಶಸ್ವಿ ಉಪಕ್ರಮವಾದ  ವಿದ್ಯಾಗಮ  2.0 ಅನುಷ್ಠಾನ ಮಾಡಬೇಕೆನ್ನುವುದು ಎಲ್ಲರ‌ ಅಪೇಕ್ಷೆಯಾಗಿದೆ.  ಆರೋಗ್ಯ ಇಲಾಖೆ ಹಲವಾರು ಆಯಾಮಗಳನ್ನು ಅವಲೋಕಿಸಿ ಶಾಲೆ ತೆರೆಯಲು ಅನುಮತಿಯನ್ನು ನೀಡಬೇಕಾಗುತ್ತದೆ.  ಅದಕ್ಕಾಗಿಯೇ, ವಿಷಯ ಪರಿಣಿತರು, ಸರ್ಕಾರದ ತಾಂತ್ರಿಕ‌‌ಸಲಹಾ‌ ಸಮಿತಿ ಸದಸ್ಯರು, ಮಕ್ಕಳ ತಜ್ಞರು ಸೇರಿದಂತೆ ಈ‌ ಬಗ್ಗೆ ನಿರಂತರವಾದ ಸಲಹೆಗಳನ್ನು ನೀಡುವ ಶಿಕ್ಷಣ ಟಾಸ್ಕ್ ಫೋರ್ಸ್ ರಚನೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇನ್ನೆರಡು ಮೂರು ದಿನಗಳಲ್ಲಿ ಈ ಕುರಿತಂತೆ ಅಧಿಕೃತ ಆದೇಶ ಹೊರಬೀಳಲಿದೆ ಎಂದರು.

Published by:Seema R
First published: