• Home
  • »
  • News
  • »
  • state
  • »
  • ಆನ್-ಲೈನ್ ಬೋಧನೆ ಅವಧಿ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕ್ರಮ: ಸುರೇಶ್ ಕುಮಾರ್

ಆನ್-ಲೈನ್ ಬೋಧನೆ ಅವಧಿ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕ್ರಮ: ಸುರೇಶ್ ಕುಮಾರ್

ಬಸ್​ ನಿಲ್ದಾಣದಲ್ಲಿ ಕಲಿಕೆಯಲ್ಲಿ ತೊಡಗಿರುವ ಮಕ್ಕಳು

ಬಸ್​ ನಿಲ್ದಾಣದಲ್ಲಿ ಕಲಿಕೆಯಲ್ಲಿ ತೊಡಗಿರುವ ಮಕ್ಕಳು

ಆನ್-ಲೈನ್ ಬೋಧನೆ ಮಾರ್ಗಸೂಚಿ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ-1983 (1995)ರ ಸೆಕ್ಷನ್ 124(5) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು

  • Share this:

ಬೆಂಗಳೂರು (ಅ.28): ಕೋವಿಡ್ ಸೋಂಕಿನ ಪ್ರಸರಣದ ಹಿನ್ನೆಲೆಯಲ್ಲಿ  ಇನ್ನೂ ಶಾಲೆಗಳು ತೆರೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ  ತಂತ್ರಜ್ಞಾನಾಧಾರಿತ ಶಿಕ್ಷಣ ಕುರಿತು  ತಜ್ಞರ ಸಮಿತಿಯ ಶಿಫಾರಸ್ಸಿನನ್ವಯ ಆನ್‍ಲೈನ್ ಬೋಧನಾ ತರಗತಿಗಳನ್ನು ನಡೆಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಶಾಲೆಗಳು ಸರ್ಕಾರದ ಆನ್-ಲೈನ್ ಮಾರ್ಗಸೂಚಿ ಪಾಲಿಸದೇ ಹೆಚ್ಚಿನ ಅವಧಿ ಆನ್-ಲೈನ್ ತರಗತಿಗಳನ್ನು ನಡೆಸುತ್ತಿರುವುದರಿಂದ ಮಕ್ಕಳ ಆರೋಗ್ಯ ಮತ್ತು ದೃಷ್ಟಿಯ ಮೇಲೆ ಪರಿಣಾಮಗಳುಂಟಾಗುತ್ತಿವೆ. ಈ ಹಿನ್ನಲೆ ತಜ್ಞರ ವರದಿಯ ಶಿಫಾರಸಿನ ಅವಧಿಯನ್ವಯ ಆನ್-ಲೈನ್ ಬೋಧನೆ ಮಾಡಬೇಕು. ಈ ಮಾರ್ಗಸೂಚಿ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ-1983 (1995)ರ ಸೆಕ್ಷನ್ 124(5) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.  


ರಾಜ್ಯದ ಖಾಸಗಿ ಶಾಲೆಗಳು ಆನ್-ಲೈನ್ ಬೋಧನೆ ಆರಂಭಿಸಿ ಹೆಚ್ಚುವರಿ ಶುಲ್ಕ ಪಾವತಿಸಲು ಒತ್ತಡ ತರುತ್ತಿದ್ದ ಹಿನ್ನೆಲೆಯಲ್ಲಿ ಪೋಷಕರ ದೂರಿನನ್ವಯ ಕ್ರಮ ಕೈಗೊಂಡು ಹೆಚ್ಚುವರಿ ಶುಲ್ಕ ಪಡೆಯದೇ ಆನ್-ಲೈನ್ ತರಗತಿಗಳನ್ನು ನಡೆಸುವಂತೆ ಏಪ್ರಿಲ್ 2020ರಲ್ಲಿ ಆದೇಶ ನೀಡಲಾಗಿತ್ತು. ಪೋಷಕರಿಗೆ ಮಕ್ಕಳ ಆನ್-ಲೈನ್ ತರಗತಿಗಳಿಗೆ ಮೊಬೈಲ್‍ನಂತಹ ಸಾಧನಗಳನ್ನು ಕೊಳ್ಳಲು ಸಾಮರ್ಥ್ಯ ಇಲ್ಲದಿರುವ ಮತ್ತು ಎಲ್‍ಕೆಜಿಯಿಂದ ಐದನೇ ತರಗತಿ ಮಕ್ಕಳು ಆನ್-ಲೈನ್ ಶಿಕ್ಷಣದಲ್ಲಿ ಭಾಗವಹಿಸಲು ತೊಂದರೆಗಳಾಗುತ್ತಿವೆ ಎಂಬ ಪೋಷಕರ ದೂರಿನ ಹಿನ್ನೆಲೆಯಲ್ಲಿ ಜೂ.15ರಂದು ತಜ್ಞರ ಸಮಿತಿ ರಚಿಸಿ ಆನ್-ಲೈನ್ ಶಿಕ್ಷಣ ಕುರಿತು ವರದಿ ನೀಡಲು ಕೇಳಲಾಗಿತ್ತು.


ಜೂ. 17ರಂದು ಎಲ್‍ಕೆಜಿಯಿಂದ ಐದನೇ ತರಗತಿವರೆಗೆ ಆನ್-ಲೈನ್ ಶಿಕ್ಷಣ ರದ್ದುಪಡಿಸಲು ಆದೇಶ ಹೊರಡಿಸಲಾಗಿತ್ತು. ತಜ್ಞರ ಸಮಿತಿ ವರದಿ ಬರುವತನಕ ಪ್ರಾಥಮಿಕ ತರಗತಿಗಳಿಂದ 10ನೇ ತರಗತಿವರೆಗೆ ಆನ್‍ಲೈನ್ ಶಿಕ್ಷಣಕ್ಕೆ ತರಗತಿವಾರು ಆವಧಿ ನಿಗದಿಪಡಿಸಿ ಜೂ. 27ರಂದು ಸುತ್ತೋಲೆ ಹೊರಡಿಸಲಾಗಿತ್ತು.


ಇದನ್ನು ಓದಿ: ಆನ್​​ಲೈನ್ ಶಿಕ್ಷಣಕ್ಕೆ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ


ಇಲಾಖೆಯ ಜೂ. 17ರಂದು ಹೊರಡಿಸಿದ ಕ್ರಮದ  ವಿರುದ್ಧ ಖಾಸಗಿ ಶಿಕ್ಷಣಸಂಸ್ಥೆಗಳು ಉಚ್ಚ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದು, ಘನ ನ್ಯಾಯಾಲಯವು ಜೂ. 17 ಮತ್ತು ಜೂ. 27ರ ಆದೇಶಗಳಿಗೆ ತಡೆಯಾಜ್ಞೆ ನೀಡಿದೆ. ಆನ್-ಲೈನ್ ಶಿಕ್ಷಣವನ್ನು ಯಥಾವತ್ತಾಗಿ ಮುಂದುವರೆಸಿಕೊಂಡು ಹೋಗಲು ಅವಕಾಶವಾಗಿತ್ತು.  ತಜ್ಞರ ಸಮಿತಿ ಶಿಫಾರಸ್ಸಿನನ್ವಯ ಆನ್-ಲೈನ್ ಬೋಧನಾ ತರಗತಿಗಳ ಅವಧಿಯನ್ನು ವಿವರಿಸಲಾಗಿದೆ.


3-6 ವರ್ಷಗಳ ವಿದ್ಯಾರ್ಥಿಗಳಿಗೆ ವಾರದಲ್ಲಿ ಪರ್ಯಾಯ ದಿನದಂತೆ 30 ನಿಮಿಷ ತರಗತಿ ತೆಗೆದುಕೊಳ್ಳಬಹುದು.  2ನೇ ತರಗತಿವರೆಗೆ ಆನ್ ಲೈನ್ ತರಗತಿಯಲ್ಲಿ ಪೋಷಕರ ಹಾಜರಿ ಕಡ್ಡಾಯ ಅಥವಾ ಪೋಷಕರು ಒಪ್ಪಿದ್ದಲ್ಲಿ ವಯಸ್ಕರರ ಉಪಸ್ಥಿತಿಗೆ ಅವಕಾಶ ನೀಡಲಾಗಿದೆ. 3ನೇ ತರಗತಿಂದ 5ನೇ ತರಗತಿವರೆಗೆ ದಿನಕ್ಕೆ 30 ನಿಮಿಷಗಳ 2 ಕ್ಲಾಸ್ ತೆಗೆದುಕೊಳ್ಳಬಹುದು. 6ರಿಂದ 8ನೇ ತರಗತಿವರೆಗೆ ದಿನಕ್ಕೆ 30-45 ನಿಮಿಷಗಳವರೆಗೆ ಗರಿಷ್ಠ 3 ಕ್ಲಾಸ್ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. 9 ಮತ್ತು 10ನೆ ತರಗತಿ 30 ರಿಂದ 45 ನಿಮಿಷಗಳ  ವಾರಕ್ಕೆ 5 ದಿನ - ದಿನಕ್ಕೆ 4 ಕ್ಲಾಸ್​​ಗಳನ್ನು ತೆಗೆದುಕೊಳ್ಳಬಹುದು.

Published by:G Hareeshkumar
First published: