HOME » NEWS » State » MINISTER SURESH KUMAR MET STUDENT WHO SELECTED TO PARIKSHA PE CHARCHA WITH PM MODI RHHSN SHTV

ಪ್ರಧಾನಿಯೊಂದಿಗೆ ಪರೀಕ್ಷಾ ಪೇ ಚರ್ಚಾಗೆ ಆಯ್ಕೆಯಾದ ವಿದ್ಯಾರ್ಥಿ ಭೇಟಿ ಮಾಡಿದ ಶಿಕ್ಷಣ ಸಚಿವ ಸುರೇಶ್‌ ಕುಮಾರ್

ರಾಜ್ಯದ ಇಬ್ಬರು ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರಧಾನಿ ಜೊತೆ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಭಾಗವಹಿಸಲು ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಉಡುಪಿ ವಿದ್ಯಾರ್ಥಿನಿಯ ತಂದೆ ಗಾರೆ ಕೆಲಸಗಾರರಾಗಿದ್ದರೆ, ಮನೋಜ್ ತಂದೆ ಹೂ ವ್ಯಾಪಾರಿಯಾಗಿದ್ದಾರೆ.

news18-kannada
Updated:March 19, 2021, 6:31 PM IST
ಪ್ರಧಾನಿಯೊಂದಿಗೆ ಪರೀಕ್ಷಾ ಪೇ ಚರ್ಚಾಗೆ ಆಯ್ಕೆಯಾದ ವಿದ್ಯಾರ್ಥಿ ಭೇಟಿ ಮಾಡಿದ ಶಿಕ್ಷಣ ಸಚಿವ ಸುರೇಶ್‌ ಕುಮಾರ್
ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಆಯ್ಕೆಯಾದ ವಿದ್ಯಾರ್ಥಿ ಭೇಟಿ ಮಾಡಿದ ಸಚಿವ ಸುರೇಶ್ ಕುಮಾರ್.
  • Share this:
ಬೆಂಗಳೂರು: ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜತೆ ನಡೆಯುವ ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಆಯ್ಕೆಯಾಗಿರುವ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯೊಂದಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಹೊಸಕೋಟೆ ತಾಲೂಕಿನ ತಾವರಕೆರೆ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿ ಮನೋಜ್​ನನ್ನು ಭೇಟಿ ಮಾಡಿ ಅಭಿನಂದಿಸಿದ ಸಚಿವರು, ಪ್ರಧಾನಿಯವರೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡಬೇಕೆಂದು ಸಲಹೆ ನೀಡಿದರು.

ಕೊನೆಯಲ್ಲಿ ಎಲ್ಲ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಚಿವರು, ಪರೀಕ್ಷೆ, ಶಾಲೆ, ತರಗತಿ, ಪಠ್ಯ, ಆರೋಗ್ಯ ರಕ್ಷಣೆ, ಸಾಂಕ್ರಾಮಿಕ ರೋಗಗಳಿಂದ ದೂರ ಇರುವುದು ಸೇರಿದಂತೆ ವಿವಿಧ  ವಿಷಯಗಳ ಕುರಿತು ಚರ್ಚೆ ನಡೆಸಿದ ಸಚಿವರು ಪರೀಕ್ಷೆಗೆ ಚೆನ್ನಾಗಿ ಅಭ್ಯಾಸ ಮಾಡಬೇಕು ಎಂದು ಮಾರ್ಗದರ್ಶನ ನೀಡಿದರು.

ಅನುಷಾಳೊಂದಿಗೆ ದೂರವಾಣಿಯಲ್ಲಿ ಸಂವಾದ

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಚಾರಮಕ್ಕಿ ನಾರಾಯಣಶೆಟ್ಟಿ ಸ್ಮಾರಕ ಆರ್​ಡಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಅನುಷಾ ಕೃಷ್ಣ ಕುಲಾಲ್ಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸಚಿವ ಸುರೇಶ್ ಕುಮಾರ್, ಪ್ರಧಾನಿಯೊಂದಿಗೆ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಭಾಗವಹಿಸಿಲು ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ವಿದ್ಯಾರ್ಥಿನಿಯ ಕುಟುಂಬ, ತಂದೆ-ತಾಯಿ ಕುರಿತು ವಿವರ ತಿಳಿದುಕೊಂಡ ಸಚಿವರು ಪ್ರಧಾನಿಯೊಂದಿಗೆ ಸಂವಾದಕ್ಕೆ ಆಯ್ಕೆಯಾಗಿರುವುದು ನಮ್ಮ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ನೀವು ಮುಂದೆಯೂ ಸಹ ಚೆನ್ನಾಗಿ ಓದಿ ಶಾಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತರಬೇಕು. ಇಡೀ ರಾಜ್ಯದ ಪರವಾಗಿ ತಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಇಬ್ಬರೊಂದಿಗೂ ಮಾತನಾಡುವಾಗ ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 98 ಅಂಕ ಪಡೆದ ಯಾದಗಿರಿ ಮೂಲದ ವಲಸೆ ವಿದ್ಯಾರ್ಥಿಯೊಬ್ಬನ ಗುಡಿಸಲಿಗೆ ಭೇಟಿ ನೀಡಿದ ಪ್ರಸಂಗವನ್ನು ವಿವರಿಸಿ ಕಟ್ಟಡ ಕಾರ್ಮಿಕನಾದ ವಿದ್ಯಾರ್ಥಿ ಆ ಸ್ಥಿತಿಯಲ್ಲೂ ಹತ್ತನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿರುವುದು ಆತನ ಛಲವನ್ನು ಬಿಂಬಿಸಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳೂ ತಾನು ಚೆನ್ನಾಗಿ ಓದಬೇಕು ಎಂಬ ಛಲ ಹೊಂದಬೇಕು ಎಂದರು.

ಇದನ್ನು ಓದಿ: ನಂಜನಗೂಡು ಪಂಚ ಮಹಾರಥೋತ್ಸವ ನಡೆಯದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ; ಪುರೋಹಿತರ ಎಚ್ಚರಿಕೆ!

ರಾಜ್ಯದ ಇಬ್ಬರು ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರಧಾನಿ ಜೊತೆ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಭಾಗವಹಿಸಲು ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಉಡುಪಿ ವಿದ್ಯಾರ್ಥಿನಿಯ ತಂದೆ ಗಾರೆ ಕೆಲಸಗಾರರಾಗಿದ್ದರೆ, ಮನೋಜ್ ತಂದೆ ಹೂ ವ್ಯಾಪಾರಿಯಾಗಿದ್ದಾರೆ. ಈ ಇಬ್ಬರೂ ವಿದ್ಯಾರ್ಥಿಗಳು ಬಡತನದ ಹಿನ್ನೆಲೆಯವರು. ಹಾಗೆಯೇ ಗ್ರಾಮೀಣ ಪರಿಸರದಿಂದ ಬಂದವರು. ಪ್ರತಿಭೆ ಎಲ್ಲಿದ್ದರೂ ಅರಳುತ್ತದೆ ಎಂಬುದಕ್ಕೆ ಈ ಮಕ್ಕಳೇ ಸಾಕ್ಷಿ. ಈ ಇಬ್ಬರೂ ವಿದ್ಯಾರ್ಥಿಗಳು ನಮ್ಮ ರಾಜ್ಯಕ್ಕೆ ಅಭಿಮಾನ ಮೂಡುವಂತೆ ಮಾಡಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದರು.

ಸಚಿವರ ಪತ್ನಿ ಸಹ ಅಭಿನಂದನೆ

ಉಡುಪಿಯ ಚಾರಮಕ್ಕಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಅನುಷಾಳನ್ನು ಸಚಿವ ಸುರೇಶ್ ಕುಮಾರ್ ಅವರ ಧರ್ಮಪತ್ನಿ ಕೆ.ಎಚ್. ಸಾವಿತ್ರಿ ಅವರೂ ಸಹ ದೂರವಾಣಿಯಲ್ಲಿ ಮಾತನಾಡಿ ಅಭಿನಂದಿಸಿದ್ದಾರೆ. ಪ್ರಧಾನಮಂತ್ರಿಯೊಂದಿಗೆ ಮಾತನಾಡುವ ಅವಕಾಶ ಸಿಕ್ಕಿದ್ದು ನಿನ್ನ ಜೀವನದ ಅಮೃತ ಘಳಿಗೆ. ಆ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ತನ್ನ ತಂದೆ ತಾಯಿ, ಶಾಲೆ ಮತ್ತು ರಾಜ್ಯಕ್ಕೆ ಕೀರ್ತಿ ತರುವಂತೆ ಚೆನ್ನಾಗಿ ಓದಿ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
Published by: HR Ramesh
First published: March 19, 2021, 6:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories