SSLC - ನೆರೆ ರಾಜ್ಯಗಳಿಂದ ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳು; ಗೋವಾದಲ್ಲಿ ಬರೆದ ರಾಜ್ಯದ ಮಕ್ಕಳು

ಎಸ್ಸೆಸ್ಸೆಲ್ಸಿ ಮೊದಲ ದಿನದಂದು ಮಹಾರಾಷ್ಟ್ರ, ತೆಲಂಗಾಣ, ಕೇರಳದಲ್ಲಿರುವ ರಾಜ್ಯದ ವಿದ್ಯಾರ್ಥಿಗಳು ಬಂದು ಪರೀಕ್ಷೆ ಬರೆದಿದ್ದಾರೆ. ಗೋವಾದಲ್ಲಿರುವ ಕನ್ನಡ ಶಾಲೆಗಳ ವಿದ್ಯಾರ್ಥಿಗಳು ಅಲ್ಲಿಯೇ ಪರೀಕ್ಷೆ ಬರೆದಿದ್ಧಾರೆ.

ಸುರೇಶ್ ಕುಮಾರ್

ಸುರೇಶ್ ಕುಮಾರ್

  • Share this:
ಬೆಂಗಳೂರು(ಜೂನ್ 25): ಕೊರೊನಾ‌ ಅಪಾಯದಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಗೊಂಡಿದೆ. ವಿಶೇಷವೆಂದರೆ ನೆರೆರಾಜ್ಯಗಳಿಂದಲೂ ವಿದ್ಯಾರ್ಥಿಗಳು ಬಂದು ಪರೀಕ್ಷೆ ಬರೆದಿದ್ಧಾರೆ. ರಾಜ್ಯದಿಂದ ಕೆಲ ಮಕ್ಕಳು ಗೋವಾಗೆ ಹೋಗಿ ಅಲ್ಲಿಯೇ ಪರೀಕ್ಷೆ ಬರೆದಿದದ್ದು ಮತ್ತೊಂದು ವಿಶೇಷ. ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮೊದಲ ದಿನದ ಹೈಲೈಟ್ಸ್ ಹಾಗೂ ಸೈಡ್ ಲೈಟ್ಸ್ ಅನ್ನ ಸ್ವತಃ ಪ್ರಾಥಮಿಕ‌ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬಿಡಿಸಿಟ್ಟಿದ್ದು ಮತ್ತೊಂದು ವಿಶೇಷ.

“ಕೇರಳ ಗಡಿಭಾಗ ತಾಲಪ್ಪಾಡಿಯಿಂದ ರಾಜ್ಯದ ಗಡಿಭಾಗಕ್ಕೆ ಬಂದು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೇರಳ‌ ಗಡಿಭಾಗದಲ್ಲಿ ನೆಲಸಿರುವ ದಕ್ಷಿಣ ಕನ್ನಡದ 367 ವಿದ್ಯಾರ್ಥಿಗಳೂ ಪರೀಕ್ಷೆಗೆ ಹಾಜರಾಗಿದ್ದಾರೆ. ಇವರನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ವಾಗತಿಸಿ ಪರೀಕ್ಷೆ ಬರೆಸಿದೆ. 92 ಬಸ್ ಗಳಲ್ಲಿ ಕರೆದುಕೊಂಡು ಬಂದು ಪರೀಕ್ಷೆ ಬರೆಸಿದ್ದಾರೆ. ಮಂಗಳೂರಿನಲ್ಲಿ ಕಸಬಾ ಬೇಂದ್ರ ಭಾಗದ 27 ವಿದ್ಯಾರ್ಥಿಗಳು ಬೋಟ್​ನಲ್ಲಿ ಆಗಮಿಸಿದ್ದರು. ಅವರಿಗೆ ಅಲ್ಲಿಯ ಮೂರು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಿಸಿ ಪರೀಕ್ಷೆ ಬರೆಸಲಾಗಿದೆ.

“ಮಹಾರಾಷ್ಟ ಬೆಳಗಾವಿ ಗಡಿಭಾಗದಲ್ಲಿ ಬೆಳಗ್ಗೆ 6ಕ್ಕೆ ಹೋಗಿ 51 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಗೋವಾ ಸರ್ಕಾರದಿಂದಲೂ ಸಹಕಾರ ದೊರೆತಿದೆ. ವಾಸ್ಕೊದ ಲಿಂಗೇಶ್ವರ ಶಾರದಾ ಪೀಠದ ಎರಡು ಶಾಲೆಯಲ್ಲಿ ನಮ್ಮ ರಾಜ್ಯದ 47 ವಿದ್ಯಾರ್ಥಿಗಳು ಅಲ್ಲಿ ಪರೀಕ್ಷೆಗೆ ಅವಕಾಶ ಪಡೆದಿದ್ದಾರೆ. ಗೋವಾ ಗಡಿಭಾಗಕ್ಕೆ ಆಗಮಿಸಿ ಅಲ್ಲಿಯ ಅಧಿಕಾರಿಗಳು ಪ್ರಶ್ನೆಪತ್ರಿಕೆ, ಉತ್ತರಪತ್ರಿಕೆ ತೆಗೆದುಕೊಂಡು ಹೋಗಿದ್ದರು. 47 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಹೊಂದಿದ್ದರು. ಇದರಲ್ಲಿ ಒಬ್ಬರಿಗೆ ಕೊರೊನೋ ಸೋಂಕು ಹಿನ್ನೆಲೆ ಪರೀಕ್ಷೆ ಬರೆಯಲಾಗಿಲ್ಲ. ಇಲ್ಲಿಯ ಪರೀಕ್ಷೆಗೆ ರಾಜ್ಯದ ಅಧಿಕಾರಿಗಳು ಮೇಲ್ವಿಚಾರಣೆ ಮಾಡಿದ್ದು, ಗೋವಾ ಸರ್ಕಾರ ಪರೀಕ್ಷೆ ನಡೆಸಿದ್ದು ವಿಶೇಷ. ತೆಲಂಗಾಣದ ಕೃಷ್ಣ ಗ್ರಾಮದ 4 ವಿದ್ಯಾರ್ಥಿಗಳು ರಾಯಚೂರಿನ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾರೆ.

ಇದನ್ನೂ ಓದಿ: ಪೊಲೀಸರ ಕಾರ್ಯನಿಷ್ಠೆ ಬಗ್ಗೆ ಮಾತನಾಡುತ್ತಾ ಗದ್ಗದಿತರಾದ ಗೃಹ ಸಚಿವ ಬಸವರಾಜ ಬೊಮ್ಮಾಯಿ

“ಕೊಪ್ಪಳದ ವಿವೇಕಾನಂದ ಶಾಲೆಯಲ್ಲಿ ಆವರಣವನ್ನು ತಳಿರು ತೋರಣದಿಂದ ಸಿಂಗರಿಸಿ ಗಾರ್ಡ್ ಆಫ್ ಆನರ್ ಮಾಡಿದ್ದು ಮತ್ತೊಂದು ವಿಶೇಷ. ಇದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ” ಎಂದು ಸುರೇಶ್ ಕುಮಾರ್ ಹೇಳಿದರು.

ಗದಗನಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಆಟೋ ಸೇವೆ ನೀಡಲಾಗಿದೆ. ಅದೇ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಪೊಲೀಸರು ವಿದ್ಯಾರ್ಥಿಗಳನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದಾರೆ. ತುಮಕೂರಿನ ಪಾವಗಡದಲ್ಲಿ ಶುದ್ದ ಕುಡಿಯುವ ನೀರು, ಮಾಸ್ಕ್, ಪರೀಕ್ಷಾ ಕೇಂದ್ರಗಳಿಗೆ ಸ್ಯಾನಿಟೈಸ್ ಹಾಗೂ ಆಹಾರ ಪಟ್ಟಣ ವ್ಯವಸ್ಥೆ ಮಾಡಿದ್ದಾರೆ.

ಪರೀಕ್ಷೆಗೆ ಕರೆತರುತ್ತಿದ್ದ ತಂದೆ ಸಾವು:

ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದ ವಿದ್ಯಾರ್ಥಿಯೊಬ್ಬರ ತಂದೆ ಅಪಘಾತದಲ್ಲಿ ಸಾವನ್ನಪ್ಪಿದ ದುರಂತ ವರದಿಯಾಗಿದೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನಲ್ಲಿ ವಿದ್ಯಾರ್ಥಿ ವಿಶ್ವನಾಥ ಗಟ್ಟಿಮನಿ ತಂದೆ ಜೊತೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. 53 ವರ್ಷದ ನಾಗಿರೆಡ್ಡಿ ಗಟ್ಟಿಮನಿ ಅಪಫಾತದಲ್ಲಿ ಸಾವನ್ನಪ್ಪಿದ್ದಾರೆ. ಮಧುಗಿರಿ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಅಭಿಜಿತ್ ಪರೀಕ್ಷೆ ಹಾಜರಾಗಬೇಕಿತ್ತು. ತಾಯಿಗೆ ಸಮಸ್ಯೆಯಿದ್ದರಿಂದ ಪರೀಕ್ಷೆ ನಿರಾಕರಣೆ ಮಾಡಲಾಗಿದೆ. ಮುಂದೆ ಪರೀಕ್ಷೆಗೆ ಅವಕಾಶ ನೀಡಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಲೀಕ್ ವದಂತಿ ವಿಚಾರವಾಗಿ ಮಾತನಾಡಿದ ಸಚಿವರು, ನಿನ್ನೆ ಫೇಸ್​ಬುಕ್​ನಲ್ಲಿ ಆ ಪೋಸ್ಟ್ ಹಾಕಿದ್ದ ವ್ಯಕ್ತಿಯ ವಿರುದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ದೂರು ದಾಖಲು ಮಾಡಲಾಗಿದೆ. ಮುಂದೆ ಇದೇ ರೀತಿ ಯಾರೇ ವದಂತಿ ಹಬ್ಬಿಸಿದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
First published: