ಮುಂಬರುವ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ಸೋಲು ; ಸಚಿವ ಶ್ರೀ ರಾಮುಲು ಭವಿಷ್ಯ

ಮುಖ್ಯಮಂತ್ರಿಯಾಗಿದ್ದಾಗಲೇ ಸಿದ್ದರಾಮಯ್ಯ ಅಸ್ತಿತ್ವ ಉಳಿಸಿಕೊಳ್ಳಲಿಲ್ಲ. ಚಾಮುಂಡೇಶ್ವರಿ, ಬಾದಾಮಿಯಂತ  ಕ್ಷೇತ್ರ ಹುಡುಕಾಡಿದರು. ಇನ್ನು ಈಗ ಹೇಗೆ ಕ್ಷೇತ್ರ ಉಳಿಸಿಕೊಳ್ಳುತ್ತಾರೆ.

ಸಚಿವ ಬಿ. ಶ್ರೀರಾಮುಲು

ಸಚಿವ ಬಿ. ಶ್ರೀರಾಮುಲು

  • Share this:
ಬಾಗಲಕೋಟೆ (ಡಿ. 24): ಸಿದ್ದರಾಮಯ್ಯ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿ ಜನರು ಸೋಲಿಸಲಿದ್ದಾರೆ ಎಂದು ಸಚಿವ ಬಿ ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ. ನಾನೀಗ ಬಾದಾಮಿ ಶಾಸಕನಾಗಿದ್ದು, ಮುಂದೆ ಕೂಡ ನನ್ನ ಕೈ ಹಿಡಿಯಬೇಕು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ  ಗುಳೇದಗುಡ್ಡದಲ್ಲಿ ಪ್ರತಿಕ್ರಿಯಿಸಿದ ಅವರು,  ಮುಖ್ಯಮಂತ್ರಿಯಾಗಿದ್ದಾಗಲೇ ಸಿದ್ದರಾಮಯ್ಯ ಅಸ್ತಿತ್ವ ಉಳಿಸಿಕೊಳ್ಳಲಿಲ್ಲ. ಚಾಮುಂಡೇಶ್ವರಿ, ಬಾದಾಮಿಯಂತ  ಕ್ಷೇತ್ರ ಹುಡುಕಾಡಿದರು. ಇನ್ನು ಈಗ ಹೇಗೆ ಕ್ಷೇತ್ರ ಉಳಿಸಿಕೊಳ್ಳುತ್ತಾರೆ. ಅವರು ಪ್ರವಾಸಿಗರಿದ್ದಂತೆ ಒಂದೇ ಕ್ಷೇತ್ರದಲ್ಲಿ ಗುರುತಿಸಿ ನಿಂತುಕೊಳ್ಳುವವರಲ್ಲ ಎಂದು ಲೇವಡಿ ಮಾಡಿದ್ದಾರೆ. ಜೆಡಿಎಸ್​ನಿಂದ ಉಪಮುಖ್ಯಮಂತ್ರಿಯಾದರೂ, ಪಕ್ಷವನ್ನು ಬೈದುಕೊಂಡು ದೊಡ್ಡವರಾದರು. ಈಗ ಕಾಂಗ್ರೆಸ್​ನಲ್ಲಿಯೂ ಅದೇ ಮಾಡುತ್ತಿದ್ದಾರೆ. ತಮ್ಮ ಸೋಲಿಗೆ ಕೆಲ ಸ್ವಪಕ್ಷೀಯರು ಕಾರಣ ಎನ್ನುತ್ತಾರೆ. ಹಾಗಾದರೆ, ಅವರು ಕಾಂಗ್ರೆಸ್​ ಬಿಟ್ಟು ಹೊರ ಬರಬೇಕಿತ್ತು. ಯಾಕೆ ಬರಲಿಲ್ಲ ಎಂದು ಪ್ರಶ್ನಿಸಿದರು.

ಗೋ ಸಂರಕ್ಷಣೆಗೆ ಕ್ರಮ

ವಯಸ್ಸಾದ ಗೋವುಗಳನ್ನ ಏನು ಮಾಡಬೇಕು ಎನ್ನುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ವಯಸ್ಸಾದ ಗೋವುಗಳ ಸಂರಕ್ಷಣೆಗೆ ಸರ್ಕಾರ ಮುಂದಾಗುತ್ತದೆ. ವಯಸ್ಸಾದ ಗೋವುಗಳ ಪಾಲನೆಗೆ ಹಣ ನಿಗದಿ ಮಾಡಲಾಗುವುದು. ವಯಸ್ಸಾದ ಗೋವುಗಳನ್ನು ಎಲ್ಲಿಡಬೇಕು, ಯಾರು ಪಾಲನೆ ಮಾಡಬೇಕು ಅನ್ನೋ ಚರ್ಚೆ ನಡೆಸಲಾಗುತ್ತಿದೆ. ಗೋಹತ್ಯೆ ನಿಷೇಧ ಕಾಯ್ದೆ ನಿಲುವಿಗೆ ಸರ್ಕಾರ ಬದ್ಧ ಎಂದರು.

ಇನ್ನು ಗೋಹತ್ಯೆ ನಿಷೇಧಕ್ಕೂ ಕೊಡಗಿನ ಜನರನ್ನು ತಳಕು ಹಾಕುವುದು ಸರಿಯಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೊಡುಗಿನ ಜನ ಗೋಮಾಂಸ ತಿನ್ನುತ್ತಾರೆ ಎಂಬ ಹೇಳಿಕೆಗೆ ಸಾಕಷ್ಟು ವಿರೋಧವಿದೆ. ಕೊಡಗಿನ ಜನ ಸಿದ್ದರಾಮಯ್ಯ ಅವರನ್ನು ತಮ್ಮ ಜಿಲ್ಲೆಗೆ ಆಗಮಿಸದಂತೆ ನಿಷೇಧ ಹೇರಿ, ಶಪಥ ಮಾಡಿದ್ದಾರೆ. ಸಿದ್ದರಾಮಯ್ಯ ಕೊಡಗಿನ ಜನರ ಕ್ಷಮೆ ಕೇಳಬೇಕು. ನಾನು ಕೂಡ ಸಿದ್ದರಾಮಯ್ಯ ಹೇಳಿಕೆ ಖಂಡಿಸುತ್ತೇನೆ ಎಂದರು.

ಹೊಸ ವರ್ಷಾಚರಣೆ ತಡೆಗಾಗಿ ನೈಟ್​ ಕರ್ಫ್ಯೂ

ಇಂದಿನಿಂದ ರಾಜ್ಯದಲ್ಲಿ ಜಾರಿಯಾಗಿರುವ ನೈಟ್ ಕರ್ಫ್ಯೂ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ವರ್ಷಾಂತ್ಯದಲ್ಲಿ ಹೊಸ ವರ್ಷಾಚರಣೆಗಾಗಿ ಮಕ್ಕಳು ಸೇರಿ ಸಾಕಷ್ಟು ಜನ ರಾತ್ರಿ ಸಮಯದಲ್ಲಿ ಹೊರ ಬರುತ್ತಾರೆ. ಈ ವೇಳೆ ಸಾಕಷ್ಟು ಜನ ಗುಂಪು ಸೇರುತ್ತಾರೆ. ರೂಪಾಂತರದ ವೈರಸ್​ ಸಮಯದಲ್ಲಿ ಈ ರೀತಿಯ ಗುಂಪು ಸೇರುವುದು ಅಪಾಯಕ್ಕೆ ದಾರಿ ಮಾಡಿಕೊಟ್ಟಂತೆ. ಈ ಹಿನ್ನಲೆ ಪರೋಕ್ಷವಾಗಿ ಹೊಸ ವರ್ಷಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಲಂಡನ್ ನಲ್ಲಿ ಪಬ್, ಡ್ಯಾನ್ಸ್ ಕ್ಲಬ್ ಗಳಲ್ಲಿ ಸಾಕಷ್ಟು ಜನರು ಸೇರಿರುವುದರಿಂದ ವೈರಸ್ ಸ್ಪ್ರೆಡ್ ಆಯಿತು. ಇದೇ ಉದ್ದೇಶದಿಂದ ಈಗ ಡಿಸೆಂಬರ್ 31 ಹೆಚ್ಚು ಜನರು ಸೇರಬಾರದು ಅಂತ ನೈಟ್ ಕರ್ಫ್ಯೂ ಜಾರಿಯ ನಿರ್ಧಾರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಟೆಕ್ನಿಕಲ್ ಆಗಿ ಹೇಗೆ ಸರಿಪಡಿಸಬೇಕು ಅದನ್ನು ಮಾಡುತ್ತೇವೆ ಎಂದರು.
Published by:Seema R
First published: