ಬೆಂಗಳೂರು: ರೌಡಿಶೀಟರ್ ಫೈಟರ್ ರವಿ (Fighter Ravi) ಎದುರು ಕೈ ಮುಗಿದು ನಿಂತ ಪ್ರಧಾನಿ ಮೋದಿ (PM Modi) ವಿರುದ್ಧ ರಾಜ್ಯ ಕಾಂಗ್ರೆಸ್ (Congress) ತೀವ್ರ ವಾಗ್ದಾಳಿ ನಡೆಸಿದೆ. ಇದರ ನಡುವೆಯೇ ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರು, ಫೈಟರ್ ರವಿ ಯಾರು ಅಂತ ಮೋದಿ ಅವರಿಗೆ ಗೊತ್ತಿರಲಿಲ್ಲ. ಇದಕ್ಕೆ ಪ್ರಧಾನಿಗಳು (Prime Minister) ಜವಾಬ್ದಾರರಲ್ಲ ಎಂದು ಹೇಳಿದ್ದಾರೆ. ಆದರೆ ಮೋದಿ, ಫೈಟರ್ ರವಿಗೆ ನಮಸ್ಕಾರ ಮಾಡುತ್ತಿರುವ ಫೋಟೋ ಹಂಚಿಕೊಂಡಿರುವ ಕಾಂಗ್ರೆಸ್, ಜಗತ್ತಿನಲ್ಲಿಯೇ ಬಿಜೆಪಿಯಂತಹ (BJP) ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವೇ ಇಲ್ಲ. ಫೈಟರ್ ರವಿ ಎಂಬ ರೌಡಿ ಶೀಟರ್ (Rowdy Sheeter) ಎದುರು ಕೈಮುಗಿದು ನಿಂತ ಮೋದಿ ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ ಎಂದು ಆರೋಪಿಸಿದೆ. ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೇವೆ
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ಬಿಜೆಪಿ ಚುನಾವಣಾ ತಯಾರಿ ಬಿರುಸಿನಿಂದ ನಡೆಯುತ್ತಿದೆ. ರಾಜ್ಯದಲ್ಲಿ ವಿವಿಧ ಮೋರ್ಚಾ ಸಮಾವೇಶ ನಡೆಯುತ್ತಿದೆ. ಬಿಜೆಪಿಯಲ್ಲಿ ಪದ್ಧತಿ ಇದೆ. ಪ್ರಣಾಳಿಕೆ ಜನರಿಂದ ಚರ್ಚೆ ಮಾಡಿ ಮಾಡುವ ಬಗ್ಗೆ ಬೇರೆ ಬೇರೆ ಜಿಲ್ಲೆಗಳಲ್ಲಿ, ಭಾಗದಲ್ಲಿ ಚಟುವಟಿಕೆ ನಡೆಯುತ್ತಿದೆ.
ಬೂತ್ ಸಮಿತಿ ಕಾರ್ಯಕ್ರಮ ನಡೆಯುತ್ತಿದೆ. ಜನಾಭಿಪ್ರಾಯ ಕೂಡ ನಮ್ಮ ಪರವಾಗಿದೆ. ಮಂಡ್ಯದಲ್ಲಿ ನಾವು ದುರ್ಬಲರಾಗಿದ್ದೆವು. ಆದರೆ ಪ್ರಧಾನಿ ಮೋದಿ ನಿನ್ನೆ ನಮಗೆ ಶಕ್ತಿ ತುಂಬಿದ್ದಾರೆ. ರಾಜ್ಯದಲ್ಲಿ ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ಫೈಟರ್ ರವಿ ಹೆಸರು ಹೇಗೆ ಬಂತು, ತಪ್ಪು ಎಲ್ಲಾಯ್ತು ಅಂತ ಪರಿಶೀಲಿಸುತ್ತೇವೆ
ಅಲ್ಲದೆ, ಪ್ರಧಾನಿ ಮೋದಿ ಅವರಿಗೆ ಫೈಟರ್ ರವಿ ಯಾರು ಅಂತ ಗೊತ್ತಿರಲಿಲ್ಲ. ಇದಕ್ಕೆ ಪ್ರಧಾನಿ ಅವರು ಜವಾಬ್ದಾರರಲ್ಲ. ಮೋದಿಯವರಿಗೆ ಸ್ವಾಗತ ಕೋರುವ ಪಟ್ಟಿಯಲ್ಲಿ ಅವರ ಹೆಸರು ಹೇಗೆ ಬಂತು ಅಂತ ಗೊತ್ತಿಲ್ಲ.
ಫೈಟರ್ ರವಿ ಸ್ವಾಗತ ಕೋರಿರುವುದರಲ್ಲಿ ಲೋಪವಾಗಿದೆ. ಫೈಟರ್ ರವಿ ಸ್ವಾಗತ ಅಲ್ಲಿನ ಸ್ಥಳೀಯರ ಕಣ್ತಪ್ಪಿನಿಂದ ಆಗಿದೆ. ಮೋದಿ ಸ್ವಾಗತ ಪಟ್ಟಿಯನ್ನು ಮೊದಲೇ ಗಮನಿಸಿಲ್ಲ. ಸ್ವಾಗತ ಪಟ್ಟಿಯಲ್ಲಿ ಫೈಟರ್ ರವಿ ಹೆಸರು ಹೇಗೆ ಬಂತು, ತಪ್ಪು ಎಲ್ಲಾಯ್ತು ಅಂತ ಪರಿಶೀಲಿಸುತ್ತೇವೆ. ಕಾಂಗ್ರೆಸ್ ನವರು ಇದರಲ್ಲಿ ಹುಳುಕು ನೋಡೋದು ಬೇಡ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ರೌಡಿ ಶೀಟರ್ ಗಳಿದ್ದಾರೆ
ಕಾಂಗ್ರೆಸ್ ಇದನ್ನು ಟ್ರೋಲ್ ಮಾಡುವ ಅಗತ್ಯ ಇಲ್ಲ. ಫೈಟರ್ ರವಿ ಸ್ವಾಗತದಲ್ಲಿ ಪ್ರಧಾನಿಯವರು ಜವಾಬ್ದಾರಿ ಅಲ್ಲ, ಅದರ ಜವಾಬ್ದಾರಿ ನಮ್ಮದು. ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರೇ ರೌಡಿ ಶೀಟರ್ ನಲ್ಲಿ ಇದ್ದಂಥವರು. ಅವರ ಪಕ್ಷದ ಹಲವು ಮುಖಂಡರು ರೌಡಿ ಶೀಟರ್ ಗಳಿದ್ದಾರೆ.
ಪ್ರಧಾನಿ ಭೇಟಿಗೆ ಅಥವಾ ಲೈನ್ ಅಪ್ಗೆ ಮಾತ್ರ ರೌಡಿ ಶೀಟರ್ ಬಂದಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿರುವವರೇ ರೌಡಿ ಶೀಟರ್ ಆಗಿದ್ದಾರೆ. ಇದರ ಬಗ್ಗೆ ಮಾತಾಡಲು ಕಾಂಗ್ರೆಸ್ ಗೆ ನೈತಿಕತೆ ಇಲ್ಲ. ಚುನಾವಣಾ ಗಿಮಿಕ್ಗಾಗಿ ಕಾಂಗ್ರೆಸ್‌ನವರು ಮಾತಾಡಿದರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ಮಾಡಿದರು.
ಇದನ್ನೂ ಓದಿ: Bengaluru: BMTC ಕಂಡಕ್ಟರ್ ಸಜೀವ ದಹನ ಕೇಸ್ಗೆ ಮತ್ತೆ ಟ್ವಿಸ್ಟ್; ಡ್ರೈವರ್ ಕೈವಾಡ ಶಂಕೆ! ತನಿಖೆ ಚುರುಕುಗೊಳಿಸಿದ ಪೊಲೀಸರು
ಇದೇ ವೇಳೆ ಸೋಮಣ್ಣ ಮುನಿಸಿನ ಬಗ್ಗೆ ಪ್ರತಿಕ್ರಿಯೆ ನೀಡಿ, ಸೋಮಣ್ಣ ಅವರು ನಮ್ಮ ಪಕ್ಷದ ನಾಯಕರು. ಅವರು ಪಕ್ಷ ಸಂಘಟನೆ, ಇಲಾಖಾ ಕೆಲಸಕ್ಕೆ ಒತ್ತು ಕೊಟ್ಟು ಕೆಲಸ ಮಾಡಿದ್ದಾರೆ. ಈಗ ಅವರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ನಮ್ಮ ಪಕ್ಷದ ಹಿರಿಯ ನಾಯಕರು ಎಂದು ಸ್ಪಷ್ಟಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ