news18-kannada Updated:December 29, 2020, 10:59 AM IST
ಸಚಿವ ರಮೇಶ್ ಜಾರಕಿಹೊಳಿ
ಬೆಂಗಳೂರು(ಡಿ.29): ಕರ್ನಾಟಕ ವಿಧಾನಪರಿಷತ್ತಿನ ಉಪಸಭಾಪತಿಯಾಗಿದ್ದ ಎಸ್ ಎಲ್ ಧರ್ಮೇಗೌಡ ರ ಹಠಾತ್ ನಿಧನಕ್ಕೆ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಜ್ಜನ ವ್ಯಕ್ತಿಯಾಗಿದ್ದ ಧರ್ಮೇಗೌಡ ರು ಬೀರೂರು ಕ್ಷೇತ್ರದ ಶಾಸಕರಾಗಿಯೂ ಈ ಹಿಂದೆ ಕಾರ್ಯನಿರ್ವಹಿಸಿದ್ದರು. ಸಹಕಾರಿ ರಂಗದ ಹಿರಿಯ ಧುರೀಣರಾಗಿದ್ದರು. ಇತ್ತೀಚಿಗೆ ವಿಧಾನ ಪರಿಷತ್ ಗೆ ಆಯ್ಕೆಯಾಗಿ ಉಪ ಸಭಾಪತಿಗಳಾಗಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೂಕ್ಷ್ಮ ಮನಸ್ಸಿನ ರಾಜಕಾರಿಣಿಯನ್ನು ಕಳೆದುಕೊಂಡ ನಾಡು ಬಡವಾಗಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ.
ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ನಿಧನಕ್ಕೆ ಎಚ್.ಡಿ.ದೇವೇಗೌಡ, ಸಿಎಂ ಬಿಎಸ್ವೈ ಸೇರಿ ಹಲವು ಗಣ್ಯರ ಸಂತಾಪಎಸ್.ಎಲ್. ಧರ್ಮೇಗೌಡರ ನಿಧನದಿಂದ ಮನಸ್ಸಿಗೆ ತೀವ್ರ ನೋವುಂಟಾಗಿದ್ದು, ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಹಾಗೂ ನನ್ನ ಆತ್ಮೀಯ ಸ್ನೇಹಿತರೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಕರುಣಿಸಲಿ ಮತ್ತು ಅವರ ಕುಟುಂಬದವರಿಗೆ, ಕಾರ್ಯಕರ್ತರಿಗೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಉಪಸಭಾಪತಿ ನಿಧನಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ರಾಜಕೀಯ ವ್ಯಕ್ತಿಗಳು ಸಂತಾಪ ಸೂಚಿಸಿದ್ದಾರೆ. ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡರು ನಿನ್ನೆ ತಡರಾತ್ರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಆದರೆ ಇತ್ತೀಚೆಗೆ ವಿಧಾನಪರಿಷತ್ನಲ್ಲಿ ನಡೆದ ಎಳೆದಾಟ ತಳ್ಳಾಟ ಘಟನೆಯಿಂದ ಧರ್ಮೇಗೌಡರು ನೊಂದಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೇ ಮಾನಸಿಕವಾಗಿಯೂ ಕುಗ್ಗಿದ್ದರು ಎಂದು ತಿಳಿದು ಬಂದಿದೆ.
Published by:
Latha CG
First published:
December 29, 2020, 10:59 AM IST