news18-kannada Updated:June 26, 2020, 1:43 PM IST
ರಮೇಶ್ ಜಾರಕಿಹೊಳಿ
ಕೊಪ್ಪಳ(ಜೂ.26): ರಾಜಕಾರಣವೇ ಬೇರೆ, ಕುಟುಂಬದ ವಿಷಯವೇ ಬೇರೆ. ಕುಟುಂಬದ ವಿಷಯ ಬಂದರೆ ಜಾರಕಿಹೊಳಿ ಸಹೋದರರು ಎಲ್ಲರೂ ಒಂದೇ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಕೊಪ್ಪಳ ತಾಲೂಕಿನ ಹುಲಗಿಯಲ್ಲಿ ವಿಜಯನಗರ ಕಾಲುವೆಗಳ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಖನ್ ಜಾರಕಿಹೊಳಿ ಗೃಹಪ್ರವೇಶದಲ್ಲಿ ಭಾಗಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ರಾಜಕೀಯವೇ ಬೇರೆ, ಕುಟುಂಬದ ವಿಷಯವೇ ಬೇರೆ. ರಾಜಕೀಯದ ಹೊರತಾಗಿ ನಾವೆಲ್ಲರೂ ಅಣ್ಣ-ತಮ್ಮಂದಿರು ಎಂದರು.
ಅಗತ್ಯ ಇರುವ ಕಡೆ ಮತ್ತೆ ಲಾಕ್ಡೌನ್ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಿಎಂ ಬಿಎಸ್ವೈ ನೇತೃತ್ವದಲ್ಲಿ ಕೊರೋನಾ ನಿಯಂತ್ರಣ ಕುರಿತು ಉತ್ತಮ ಕೆಲಸಗಳು ಆಗುತ್ತಿವೆ. ವಲಸೆ ಕಾರ್ಮಿಕರು ರಾಜ್ಯಕ್ಕೆ ಮರಳಿದ ನಂತರ ಸೋಂಕು ಸಮುದಾಯದಲ್ಲಿ ಹರಡುವ ಭೀತಿ ಹೆಚ್ಚಾಗಿದೆ. ಈ ನಿಟ್ಟಿನಲ್ಲೂ ಸರಕಾರ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುತ್ತಿದೆ. ಮತ್ತೆ ಲಾಕ್ಡೌನ್ ಮಾಡುವ ಅಗತ್ಯ ಸದ್ಯಕ್ಕಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.
ರಾಜ್ಯದಲ್ಲಿ ಅತಿಥಿ ಶಿಕ್ಷಕರು, ಉಪನ್ಯಾಸಕರ ಬದುಕು ಅತಂತ್ರ: ಬಾಕಿ ಗೌರವಧನಕ್ಕಾಗಿ ಸಿಎಂಗೆ ಮೊರೆ
ಖಾಸಗಿ ಆಸ್ಪತ್ರೆಯಿಂದ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಕುರಿತು ಡಿಕೆಶಿ ವಿರೋಧ ವ್ಯಕ್ತಪಡಿಸುವ ಬದಲು ರಾಜ್ಯ ಸರಕಾರಕ್ಕೆ ಸಹಕಾರ ನೀಡಲಿ. ಈ ನಿಟ್ಟಿನಲ್ಲಿ ವಿರೋಧ ಪಕ್ಷದ ನಾಯಕರು ಸರಕಾರಕ್ಕೆ ಸಲಹೆ-ಸೂಚನೆ ನೀಡಲಿ ಎಂದರು.
ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಮನೆ ಪಕ್ಕದಲ್ಲೇ ಮನೆ ಖರೀದಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ನೋ ಕಾಮೆಂಟ್ಸ್. ಆ ಕುರಿತು ನಾನೇನೂ ಹೇಳಲಾರೆ ಎಂದಷ್ಟೇ ಪ್ರತಿಕ್ರಿಯೆ ನೀಡಿದರು.
ಒಂದೇ ಕಾಮಗಾರಿಯನ್ನು ಎರಡೆರಡು ಬಾರಿ ಉದ್ಘಾಟನೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವನಾಗಿ ಉದ್ಘಾಟನೆ ಮಾಡಿದ್ದೇನೆ. ಈ ಮುಂಚೆ ಉದ್ಘಾಟನೆ ಮಾಡಿದರು ಎನ್ನುತ್ತಿರುವ ರಾಘವೇಂದ್ರ ಹಿಟ್ನಾಳ ಪಕ್ಕದಲ್ಲೇ ಇದ್ದಾರೆ. ಅವರನ್ನೇ ಕೇಳಿ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದರು.
ಈ ವೇಳೆ ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು ಇತರರು ಇದ್ದರು.
First published:
June 26, 2020, 1:43 PM IST