ಕೊಡಗು : ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಭೂಕುಸಿತ (LandSlide) ಮತ್ತು ಪ್ರವಾಹದ (Flood) ಸ್ಥಿತಿಗಳು ಮುಂದುವರಿಯುತ್ತಿರುವುದರಿಂದ ಭೂಕುಸಿತದಂತಹ ಎತ್ತರದ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ಭೂ ಪರಿರ್ತನೆಗೆ ಅವಕಾಶ ನೀಡುವುದಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ (Minister R Ashok) ಸ್ಪಷ್ಟಪಡಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ (Kodagu Rains) ಕಳೆದ ಒಂದು ವಾರದಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರ ತಾಲ್ಲೂಕಿನ ಕಣಿವೆ, ಹಾರಂಗಿ ಜಲಾಶಯಗಳಿಗೆ (Harangi Dam) ಭೇಟಿ ನೀಡಿದ ಆರ್ ಅಶೋಕ್ ಅವರು ಕಾವೇರಿ ನದಿ ಭೋರ್ಗರೆದು ಸಾಗುತ್ತಿರುವುದನ್ನು ವೀಕ್ಷಿಸಿದರು.
ಬಳಿಕ ಹಾರಂಗಿ ಜಲಾಶಯದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಮಳೆಯಿಂದ ಹಾನಿಯಾಗಿರುವ ಬಗ್ಗೆ ಮತ್ತು ಜಿಲ್ಲೆಯಲ್ಲಿ ಮಳೆಯಿಂದ ಎಂತಹ ಪರಿಸ್ಥಿತಿ ಇದೆ ಎನ್ನುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಧರೆಗುರುಳಿದ 1 ಸಾವಿರಕ್ಕೂ ಅಧಿಕ ವಿದ್ಯುತ್ ಕಂಬ
ಜಿಲ್ಲೆಯಲ್ಲಿ ಈಗಾಗಲೇ ಗಾಳಿ ಮಳೆಗೆ 1 ಸಾವಿರ ವಿದ್ಯುತ್ ಕಂಬಗಳು ಧರೆಗುರುಳಿ ಹಾಳಾಗಿವೆ. ಹೀಗಾಗಿ ಇಂಧನ ಸಚಿವ ಸುನಿಲ್ ಕುಮಾರ್ ಅವರು ಗುರುವಾರ ಕೊಡಗಿಗೆ ಆಗಮಿಸಲಿದ್ದಾರೆ. ಈ ವೇಳೆ ಜಿಲ್ಲೆಗೆ ಹೆಚ್ಚಿನ ಅನುದಾನ ಕೊಡಲು ಮಾತನಾಡುತ್ತೇನೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಮಳೆಯಿಂದ ಈಗಾಗಲೇ 43 ಮನೆಗಳು ಭಾಗಶಃ ಹಾನಿಯಾಗಿವೆ. ಒಂದು ಮನೆ ಮಾತ್ರ ಸಂಪೂರ್ಣ ಹಾನಿಯಾಗಿದೆ. ಎನ್ಡಿಆರ್ಎಫ್ ನಿಯಮದಂತೆ 96 ಸಾವಿರ ಪರಿಹಾರ ಮತ್ತು ರಾಜ್ಯ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಆರ್. ಅಶೋಕ್ ತಿಳಿಸಿದರು.
ಇದನ್ನೂ ಓದಿ: Chikkamagaluru: ಮುಂದುವರಿದ ಮಳೆಯ ಅಬ್ಬರ, ವರುಣನ ರೌದ್ರನರ್ತನಕ್ಕೆ ಮಲೆನಾಡಿಗರು ಕಂಗಾಲು
ಹಾರಂಗಿ ಜಲಾಶಯ ವೀಕ್ಷಣೆ
ಇದಕ್ಕೂ ಮೊದಲು ಕುಶಾಲನಗರ ಸಮೀಪದ ಕಣಿವೆ ಶ್ರೀ ರಾಮಲಿಂಗೇಶ್ವರ ಧಾರ್ಮಿಕ ಕ್ಷೇತ್ರದಲ್ಲಿ ಕಾವೇರಿ ಹಾಗೂ ಹಾರಂಗಿ ನದಿಗಳ ಸಂಗಮ ಗೊಂಡು ಹರಿಯುತ್ತಿರುವ ಸ್ಥಳಕ್ಕೆ ಬುಧವಾರ ಸಂಜೆ ಕಂದಾಯ ಸಚಿವ ಆರ್.ಅಶೋಕ್ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ ಸಚಿವ ಆರ್ ಅಶೋಕ್ ಹಾರಂಗಿ ಜಲಾಶಯದಲ್ಲಿ ನೀರು ಸಂಗ್ರಹವಾಗಿರುವುದನ್ನು ಪರಿಶೀಲಿಸಿದರು.
ಐದು ಅಡಿ ಬಾಕಿ ಇರುವಾಗಲೇ ನದಿಗೆ ನೀರನ್ನು ಹರಿಸಿ
ಜಲಾಶಯದಿಂದ ನದಿಗೆ ನೀರು ಹರಿಸುತ್ತಿರುವ ಬಗೆಗೆ ಮಾಹಿತಿ ಪಡೆದುಕೊಂಡರು. ಅಲ್ಲದೆ ಸಾಕಷ್ಟು ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಅಪಾರ ನೀರು ಹರಿದು ಬರುತ್ತಿದೆ. 2018 ರಲ್ಲಿ ಜಲಾಶಯದಲ್ಲಿ ಅಪಾರ ನೀರು ಸಂಗ್ರಹಿಸಿದ ಪರಿಣಾಮ ತುಂಬಾ ಸಮಸ್ಯೆಗಳು ಎದುರಾಗಿದ್ದವು. ಹೀಗಾಗಿ ಯಾವುದೇ ಕಾರಣಕ್ಕೂ ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹಿಸದೆ ಭರ್ತಿಯಾಗುವುದಕ್ಕೆ ಇನ್ನೂ ಐದು ಅಡಿ ಬಾಕಿ ಇರುವಾಗಲೇ ನದಿಗೆ ನೀರನ್ನು ಹರಿಸುವಂತೆ ಸೂಚಿಸಿದರು.
ಶ್ರೀರಾಮಲಿಂಗೇಶ್ಚರ ದೇವಸ್ಥಾನಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿ ಪ್ರವಾಹ ಅಥವಾ ಇನ್ಯಾವುದೇ ಅವಘಡಗಳು ಸಂಭವಿಸದಿರಲಿ ಎಂದು ದೇವರಲ್ಲಿ ಸಚಿವ ಆರ್ ಅಶೋಕ್ ಅವರು ಪೂಜೆ ಸಲ್ಲಿಸಿದರು. ನಂತರ ತೂಗು ಸೇತುವೆ ಮೇಲೆ ತೆರಳಿದ ಸಚಿವರು ಭೋರ್ಗರೆದು ಹರಿಯುವ ಕಾವೇರಿ ನದಿಯನ್ನು ವೀಕ್ಷಣೆ ಮಾಡಿದರು.
ಸದ್ಯದ ಪರಿಸ್ಥಿತಿಯ ಅವಲೋಕನ
ಕಳೆದ ಎರಡು ವರ್ಷಗಳ ಹಿಂದೆ ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿದ ಪರಿಣಾಮ ತೂಗು ಸೇತುವೆ ಸಂಪೂರ್ಣ ಹಾನಿಯಾಗಿತ್ತು. ಇದರಿಂದ ಮೈಸೂರು ಹಾಗೂ ಕೊಡಗು ಗಡಿ ಗ್ರಾಮಗಳ ಜನರು ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಎದುರಾಗಿತ್ತು. ಜೊತೆಗೆ ಕಣಿವೆ ಸೇರಿದಂತೆ ವಿವಿಧ ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿದ್ದವು. ಹೀಗಾಗಿ ಅಂತಹ ಸ್ಥಿತಿ ಮತ್ತೆ ಎದುರಾಗುತ್ತದೆಯೇ ಎಂದು ಪರಿಶೀಲನೆ ನಡೆಸಿದರು.
ಈ ಸಂದರ್ಭ ಶಾಸಕ ಅಪ್ಪಚ್ಚುರಂಜನ್ ಸೇತುವೆ ದುರಸ್ತಿ ಮಾಡಿಸಿದ್ದರು. ಆದರೆ ನದಿಯ ರಭಸಕ್ಕೆ ಸಿಲುಕಿ ಸೇತುವೆ ಸಣ್ಣ ಪುಟ್ಟದಾಗಿ ಹಾನಿಯಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಸುರೇಶ್ ಅವರು ಸಚಿವರ ಗಮನಕ್ಕೆ ತಂದರು.
ಇದನ್ನೂ ಓದಿ: BBMP: ರಾಜ್ಯ, ಕೇಂದ್ರ ಸರ್ಕಾರಕ್ಕೆ GST ಉಂಡೇನಾಮ ಹಾಕಿದ ಬಿಬಿಎಂಪಿ & ಗುತ್ತಿಗೆದಾರರು!
ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೇತುವೆಯನ್ನು ದುರಸ್ಥಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭ ಜಿಲ್ಲಾಧಿಕಾರಿ ಡಾ ಬಿ ಸಿ ಸತೀಶ್ ಇದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ