ಬೆಂಗಳೂರು (ಅ.25): ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ರಾಜಕಾಲುವೆ ಒಡೆದ ಪರಿಣಾಮ ಹೊಸಕೆರೆಹಳ್ಳಿಯ ದತ್ತಾತ್ರೇಯ ನಗರ ಸಂಪೂರ್ಣವಾಗಿ ಮುಳುಗಿತ್ತು. ಅಷ್ಟೇ ಅಲ್ಲದೇ ಬೆಂಗಳೂರು ದಕ್ಷಿಣ ಸೇರಿದಂತೆ ಅನೇಕ ಕಡೆ ಮಳೆ ಅವಾಂತರ ಸೃಷ್ಟಿಸಿತ್ತು. ಈ ಮಳೆ ಪ್ರವಾಹದಿಂದ ತೀವ್ರ ಹಾನಿಗೊಳಗಾದ ಕುಟುಂಬಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆಯಂತೆ ತಲಾ 25 ಸಾವಿರದ ಪರಿಹಾರ ಮೊತ್ತವನ್ನು ಕಂದಾಯ ಸಚಿವ ಆರ್ ಅಶೋಕ್ ನೀಡಿದ್ದಾರೆ. ಬಿಬಿಎಂಪಿ ಪಾಲಿಕೆ ಆಡಳಿತಾಧಿಕಾರಿ ಗೌರವ ಗುಪ್ತ ಅವರು ಈ ವೇಳೆ ಉಪಸ್ಥಿತರಿದ್ದರು. ರಾಜಧಾನಿಯಲ್ಲಿ ಸುರಿದ ಮಳೆಯಿಂದಾಗಿ ಭಾರೀ ಅನಾಹುತ ಸೃಷ್ಟಿಯಾಗಿತ್ತು. ದತ್ತಾತ್ರೇಯ ಬಡಾವಣೆಯ 304 ಮನೆಗಳು ಸಂಪೂರ್ಣವಾಗಿ ಹಾನಿಗೆ ಒಳಗಾಗಿದ್ದವು. ಸಂತ್ರಸ್ತರಿಗೆ ನೆರವು ಒದಗಿಸುವ ಕುರಿತು ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಅಲ್ಲದೇ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ಅವರಿಗೆ ಆಹಾರ, ಸಾಮಾಗ್ರಿ ವ್ಯವಸ್ಥೆ ಮಾಡುವ ಕುರಿತು ಕೂಡ ನಿರ್ಧರಿಸಲಾಗಿತ್ತು. ಅದರಂತೆ ಕಂದಾಯ ಸಚಿವರ ಆರ್ ಅಶೋಕ್ ಪರಿಹಾರ ಚೆಕ್ ವಿತರಿಸಿದ್ದಾರೆ.
ಮಳೆಯಿಂದ ಹಾನಿಗೊಳಗಾದ ಪ್ರತೀ ಕುಟುಂಬಕ್ಕೆ ತಲಾ 25 ಸಾವಿರ ನೀಡುವುದಾಗಿ ಸಿಎಂ ಘೋಷಿಸಿದಂತೆ ಚೆಕ್ ವಿತರಿಸಲಾಗಿದೆ. ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡವರಿಗೆ, ಸಣ್ಣಪುಟ್ಟ ಹಾನಿಯಾದವರಿಗೆ 10 ಸಾವಿರ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಒಟ್ಟಾರೆ ಇಂದು 86 ಲಕ್ಷ ಮೌಲ್ಯದ ಚೆಕ್ ವಿತರಿಸಲಾಗಿದೆ. ದತ್ತಾತ್ರೇಯ ಬಡಾವಣೇಯ 304 ಮತ್ತು ಕುಮಾರಸ್ವಾಮಿ ಬಡಾವಣೆಯ 40 ಕುಟುಂಬಗಳಿಗೆ ಚೆಕ್ ವಿತರಿಸಲಾಗಿದೆ. ಇದೇ ವೇಳೆ ಮಳೆಯಿಂದ ಅನಾಹುತಕ್ಕೆ ಒಳಗಾದ ದಕ್ಷಿಣ ಬೆಂಗಳೂರು, ಬೊಮ್ಮನಹಳ್ಳಿಯಲ್ಲಿಯೂ ಚೆಕ್ ವಿತರಿಸಲಾಗಿದೆ.
ರಾಜಧಾನಿಯಲ್ಲಿ ಮಳೆಹಾನಿಗೆ ಒಳಗಾದ ಪ್ರತಿ ರಸ್ತೆಯಲ್ಲಿನ ಮನೆಗಳ ಸಮೀಕ್ಷೆ ಮಾಡಲಾಗಿದೆ, ಮಳೆ ನೀರು ನುಗ್ಗಿದ ಮನೆಗಳಿಗೆ ಪರಿಹಾರ ನೀಡಲಾಗುವುದು. ಮೊದಲ ಮತ್ತು ಎರಡನೇ ಮಹಡಿ ಮನೆಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಇದೇ ವೇಳೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಮಳೆ ಪ್ರವಾಹ ಸಂತ್ರಸ್ತರ ಪರಿಸ್ಥಿತಿ ಮೊದಲಿನಂತಾಗುವವರೆಗೂ ಸರ್ಕಾರ ಇವರಿಗೆ ಸಹಾಯ ಮಾಡಲಿದೆ ಎಂಬ ಭರವಸೆಯನ್ನು ಇದೇ ವೇಳೆ ಆರ್ ಅಶೋಕ್ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ