ಬೆಂಗಳೂರು (ಜೂ.29): ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದರಿಂದ ಸರ್ಕಾರಕ್ಕೆ ಆತಂಕ ಶುರುವಾಗಿದೆ. ಮುಂದಿನ ದಿನಗಳಲ್ಲಿ ಲಾಕ್ ಡೌನ್ ಇಲ್ಲ ಅನ್ನೋದನ್ನು ಸರ್ಕಾರ ಸ್ಪಷ್ಟಪಡಿಸಿದೆ. ಇದರ ಜೊತೆ ಸಚಿವರು ಇಂದು 11:30ಕ್ಕೆ ತುರ್ತು ಜಂಟಿ ಸುದ್ದಿಗೋಷ್ಠಿ ಕರೆದಿದ್ದಾರೆ.
ಈಗಾಗಲೇ ರಾತ್ರಿ ಅವಧಿಯಲ್ಲಿ ಕರ್ಫ್ಯೂ ಹೇರಿ ಸರ್ಕಾರ ಆದೇಶ ನೀಡಿದೆ. ಸರ್ಕಾರಿ ನೌಕರರಿಗೆ ಶನಿವಾರ ರಜೆ ನೀಡಿದೆ. ಪ್ರತಿ ಭಾನುವಾರ ಲಾಕ್ ಡೌನ್ ಘೋಷಣೆ ಮಾಡಿದೆ. ಆದರೂ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ನಿನ್ನೆ ಒಂದೇ ದಿನ ಬೆಂಗಳೂರು ನಗರ ಹಾಗೂ ಗ್ರಾಮೀಣ ಸೇರಿ 810 ಪ್ರಕಣಗಳು ಕಂಡು ಬಂದಿವೆ. ಕೋರೋನಾ ನಿಯಂತ್ರಣಕ್ಕೆ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಖುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ. ಹಾಗಾಗಿ ತುರ್ತು ಜಂಟಿ ಸುದ್ದಿಗೋಷ್ಠಿ ಕರೆಯಲಾಗಿದೆ ಎನ್ನಲಾಗಿದೆ.
ಬೆಂಗಳೂರು ಕೋವಿಡ್ ಉಸ್ತುವಾರಿ ಸಚಿವ ಆರ್ ಅಶೋಕ , ಆರೋಗ್ಯ ಸಚಿವ ಬಿ. ಶ್ರೀರಾಮುಲು ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇಂದು 11:30ಕ್ಕೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಯಲಿದೆ. ಈಗಾಗಲೇ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಹಾಗೂ ಮುಂದಿನ ದಿನದಲ್ಲಿ ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಇದನ್ನೂ ಓದಿ: 23 ದಿನಗಳಿಂದ ಏರುತ್ತಲೇ ಇದೆ ಪೆಟ್ರೋಲ್-ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು ಬೆಲೆ?
ಕರ್ಪ್ಯೂ ಬಿಗಿಗೊಳಿಸುವುದು, ಕ್ವಾರಂಟೈನ್ ಕಠಿಣಗೊಳಿಸುವುದು ಹಾಗೂ ಕೊರೋನಾ ಟೆಸ್ಟ್ ಹೆಚ್ಚುಗೊಳಿಸುವುದು ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಗೆ ಅವಕಾಶ ಮಾಡಿಕೊಡುವುದು ಸೇರಿ ಇನ್ನೂ ಇತರೆ ವಿಚಾರಗಳ ಬಗ್ಗೆ ಸಚಿವರುಗಳು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ