• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಜಿಎಸ್‌ಟಿ ವಿಚಾರದಲ್ಲಿ ಬಿಜೆಪಿ ನಾಯಕರು ರಾಜ್ಯಕ್ಕೆ ಬಗೆದಿರುವ ದ್ರೋಹವನ್ನು ಸಹಿಸಲು ಸಾಧ್ಯವಿಲ್ಲ; ಸಿದ್ದರಾಮಯ್ಯ

ಜಿಎಸ್‌ಟಿ ವಿಚಾರದಲ್ಲಿ ಬಿಜೆಪಿ ನಾಯಕರು ರಾಜ್ಯಕ್ಕೆ ಬಗೆದಿರುವ ದ್ರೋಹವನ್ನು ಸಹಿಸಲು ಸಾಧ್ಯವಿಲ್ಲ; ಸಿದ್ದರಾಮಯ್ಯ

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಪ್ರವಾಹ ಪೀಡಿತ ಜನರಿಗೆ ಪರಿಹಾರ ನೀಡಲು ದುಡ್ಡಿಲ್ಲ ಎಂದು ಒಂದು ಕಡೆ ಕರ್ನಾಟಕದ ಮುಖ್ಯಮಂತ್ರಿ  ಕಣ್ಣೀರು ಹಾಕುತ್ತಿದ್ದಾರೆ. ಇನ್ನೊಂದೆಡೆ ನಮಗೆ ನೀಡಬೇಕಾಗಿರುವ ನ್ಯಾಯಬದ್ಧ ಜಿಎಸ್ ಟಿ ಪರಿಹಾರವನ್ನು ಕೊಡಲಾಗುವುದಿಲ್ಲ ಎಂದು ಪ್ರಧಾನ ಮಂತ್ರಿ ಹೇಳುತ್ತಿದ್ದಾರೆ. ಹಾಗಾದರೆ ಕರ್ನಾಟಕದ ಜನ ಏನು ಮಾಡಬೇಕು? ಮಣ್ಣು ತಿನ್ನಬೇಕಾ? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು (ಆಗಸ್ಟ್‌ 28); ಜಿಎಸ್‌ಟಿ ಪರಿಹಾರವನ್ನು ನೀಡುವುದಿಲ್ಲ ಎಂಬ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ನಿಲುವು ರಾಜ್ಯಕ್ಕೆ ಮಾಡಿರುವ ಘೋರ ಅನ್ಯಾಯ. ಈ ಅನ್ಯಾಯವನ್ನು ಪ್ರತಿಭಟಿಸದೆ ಬಾಯಿ ಮುಚ್ಚಿ ಒಪ್ಪಿಕೊಂಡ ಸರ್ಕಾರ ರಾಜ್ಯದ ಜನತೆಗೆ ದ್ರೋಹ ಎಸಗಿದೆ. ಇದನ್ನು ಸಹಿಸಲು ಸಾಧ್ಯ ಇಲ್ಲ. ತೆರಿಗೆ ಹಣ ಇಲ್ಲದೆ ಈಗ ಕರ್ನಾಟಕದ ಜನ ಏನು ಮಾಡಬೇಕು? ಮಣ್ಣು ತಿನ್ನಬೇಕಾ? ಎಂದು ಸಿದ್ದರಾಮಯ್ಯ ಕಟುವಾಗಿ ಟೀಕಿಸಿದ್ದಾರೆ.


ಗುರುವಾರ ನಡೆದ ಹಣಕಾಸು ಜಿಎಸ್‌ಟಿ ಸಭೆಯಲ್ಲಿ ಮಾತನಾಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ "ಖಜಾನೆಯಲ್ಲಿ ಹಣವಿಲ್ಲ. ಹೀಗಾಗಿ ರಾಜ್ಯಗಳಿಗೆ ಹೆಚ್ಚುವರಿ ಜಿಎಸ್‌ಟಿ ತೆರಿಗೆ ಹಣವನ್ನು ನೀಡುವುದು ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದ್ದರು. ಇದರಿಂದ ಎಲ್ಲಾ ರಾಜ್ಯಗಳಿಗೂ ಸಾಕಷ್ಟು ನಷ್ಟವಾಗಿದೆ. ಈ ಕುರಿತು ಸರಣಿ ಟ್ವೀಟ್‌ ಮಾಡುವ ಮೂಲಕ ಖಾರವಾಗಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ,



"ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಭಾಗ್ಯದ ಬಾಗಿಲು ತೆರೆಯಲಿದೆ ಎಂದು ಬಿಜೆಪಿ ಹೇಳಿತ್ತು. ಇದನ್ನು ನಂಬಿದ ಜನತೆ 25 ಸಂಸದರನ್ನು ಆರಿಸಿಕಳಿಸಿತ್ತು. ಇವರೆಲ್ಲ ಪ್ರಧಾನಿ ಎದುರು ಮಾತು ಬಾರದ ಕೀಲಿ ಗೊಂಬೆಗಳಂತೆ ವರ್ತಿಸುತ್ತಾ ರಾಜ್ಯದ ಹಿತಶತ್ರುಗಳಾಗಿ ಹೋಗಿದ್ದಾರೆ.


ಜಿಎಸ್ ಟಿ ಮಂಡಳಿ ಸಭೆಯಲ್ಲಿ ಭಾಗವಹಿಸಿದ್ದ ಗೃಹಸಚಿವ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಜಿಎಸ್ ಟಿ ಸಂಗ್ರಹ ಶೇಕಡಾ 71ರಷ್ಟಾಗಿದೆ ಎಂದು ಹೇಳಿದ್ದಾರೆ. ಹೀಗಿದ್ದರೂ ನಮ್ಮ ತೆರಿಗೆ ಹಣವನ್ನು ನಮಗೆ ನೀಡಲು ನಿರಾಕರಿಸುತ್ತಿರುವುದು ರಾಜ್ಯದ ಜನರಿಗೆ ಮಾಡುತ್ತಿರುವ ಮೋಸ ಅಲ್ಲವೇ?" ಎಂದು ಕಿಡಿಕಾರಿದ್ದಾರೆ.


ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಕಿಡಿಕಾರಿರುವ ಅವರು, "ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯಕ್ಕೆ ಬರಬೇಕಾಗಿರುವ ಅನುದಾನಗಳು‌ ಕಡಿತಗೊಳ್ಳುತ್ತಲೇ ಬಂದಿದೆ. 14ನೇ ಹಣಕಾಸು ಆಯೋಗದಡಿ ಕೇಂದ್ರ ತೆರಿಗೆಯಲ್ಲಿ ಶೇಕಡಾ 4.7ರಷ್ಟು ಪಾಲು ಕರ್ನಾಟಕಕ್ಕೆ ಸಿಗುತ್ತಿದ್ದರೆ, 15ನೇ ಹಣಕಾಸು ಆಯೋಗ ಅದನ್ನು ಶೇಕಡಾ 3.6ಕ್ಕೆ ಇಳಿಸಿದೆ. ಈಗ ಇನ್ನೊಂದು ಅನ್ಯಾಯ.


ನಾಲ್ಕು ತಿಂಗಳ ಒಟ್ಟು ಜಿಎಸ್‌ಟಿ ಪರಿಹಾರ ರೂ.13,764 ಕೋಟಿ ರಾಜ್ಯಕ್ಕೆ ಬರಬೇಕಾಗಿದೆ. ಇದು ಕೇಂದ್ರ ಮತ್ತು ರಾಜ್ಯಗಳು ಮಾಡಿಕೊಂಡ ಒಡಂಬಡಿಕೆ. ಈಗ ನಮ್ಮ ಖಜಾನೆಯಲ್ಲಿ ದುಡ್ಡಿಲ್ಲ, ನೀವು ಬೇಕಿದ್ದರೆ ಆರ್ ಬಿಐ ನಲ್ಲಿ ಸಾಲ ಮಾಡಿ ತೀರಿಸಿಕೊಳ್ಳಿ ಎಂದರೆ ಇದು ಯಾವೂರ ನ್ಯಾಯ ಮೋದಿಯವರೇ?" ಎಂದು ಪ್ರಶ್ನಿಸಿದ್ದಾರೆ.


"ಸಂವಿಧಾನದ 101ನೇ ತಿದ್ದುಪಡಿ ಮೂಲಕ ಜಾರಿಗೆ ಬಂದಿರುವ ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 18ರ ಪ್ರಕಾರ ಜಿಎಸ್ ಟಿ ಯಿಂದ ಆಗುವ ನಷ್ಟಕ್ಕೆ ಐದು ವರ್ಷಗಳ ಕಾಲ ಪರಿಹಾರ ನೀಡಬೇಕಾಗಿರುವುದು ಕೇಂದ್ರ ಸಂವಿಧಾನಾತ್ಮಕ ಕರ್ತವ್ಯ. ಈ ಪರಿಹಾರದ ನಿರಾಕರಣೆಯೆಂದರೆ ರಾಜ್ಯದ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ.


ಪ್ರವಾಹ ಪೀಡಿತ ಜನರಿಗೆ ಪರಿಹಾರ ನೀಡಲು ದುಡ್ಡಿಲ್ಲ ಎಂದು ಒಂದು ಕಡೆ ಕರ್ನಾಟಕದ ಮುಖ್ಯಮಂತ್ರಿ  ಕಣ್ಣೀರು ಹಾಕುತ್ತಿದ್ದಾರೆ. ಇನ್ನೊಂದೆಡೆ ನಮಗೆ ನೀಡಬೇಕಾಗಿರುವ ನ್ಯಾಯಬದ್ಧ ಜಿಎಸ್ ಟಿ ಪರಿಹಾರವನ್ನು ಕೊಡಲಾಗುವುದಿಲ್ಲ ಎಂದು ಪ್ರಧಾನ ಮಂತ್ರಿ ಹೇಳುತ್ತಿದ್ದಾರೆ. ಹಾಗಾದರೆ ಕರ್ನಾಟಕದ ಜನ ಏನು ಮಾಡಬೇಕು? ಮಣ್ಣು ತಿನ್ನಬೇಕಾ?" ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಮತ್ತೊಂದು ಟ್ವೀಟ್‌ನಲ್ಲಿ, "ಜಿಎಸ್ ಟಿ ಪರಿಹಾರವನ್ನು ನೀಡುವುದಿಲ್ಲ ಎಂಬ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ನಿಲುವು ರಾಜ್ಯಕ್ಕೆ ಮಾಡಿರುವ ಘೋರ ಅನ್ಯಾಯ. ಈ ಅನ್ಯಾಯವನ್ನು ಪ್ರತಿಭಟಿಸದೆ ಬಾಯಿ ಮುಚ್ಚಿಕೊಂಡು ಒಪ್ಪಿಕೊಂಡ ಕರ್ನಾಟಕದ ಬಿಜೆಪಿ  ಸರ್ಕಾರ ರಾಜ್ಯದ ಜನತೆಗೆ ದ್ರೋಹ ಎಸಗಿದೆ. ಇದನ್ನು ಸಹಿಸಲು ಸಾಧ್ಯ ಇಲ್ಲ" ಎಂದು ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

top videos
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು