ಮಂಡ್ಯ: ಬಿಜೆಪಿಯಿಂದ (BJP) ಸ್ಪರ್ಧಿಸಬೇಕಾ ಇಲ್ಲವೇ ನಿವೃತ್ತಿಯಾಗಬೇಕಾ (Retirement) ಅನ್ನೋದನ್ನ ತೀರ್ಮಾನ ಮಾಡಿ ಹೇಳುತ್ತೇನೆ ಎಂದು ಕೆ.ಆರ್ ಪೇಟೆ (K.R Pete) ಶಾಸಕ, ರೇಷ್ಮೆ ಹಾಗೂ ಕ್ರೀಡಾ ಸಚಿವ ಕೆ.ಸಿ ನಾರಾಯಣಗೌಡ (Narayana Gowda) ಹೇಳಿದ್ದಾರೆ. ಚುನಾವಣೆ ಹೊಸ್ತಿಲಲ್ಲೇ ನಾರಾಯಣಗೌಡರ ಬಾಯಲ್ಲಿ ಇಂತ ಮಾತು ಬಂದಿದ್ದೇಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅಷ್ಟಕ್ಕೆ ಸುಮ್ಮನಾಗದ ನಾರಾಯಣಗೌಡ, ಜೆಡಿಎಸ್ನಲ್ಲಿ (JDS) ನನಗೆ ತುಂಬಾ ಕಾಟ ಕೊಟ್ಟಿದ್ದರು. ಅದನ್ನ ತಡೆದುಕೊಳ್ಳಲಾರದೆ ಆಚೆ ಬಂದಿದ್ದೆ ಎಂದು ತಿಳಿಸಿದ್ದಾರೆ.
ನಾರಾಯಣ ಗೌಡರ ಮಾತಿನ ಹಿಂದಿನ ಮರ್ಮವೇನು?
ಕೆ.ಆರ್. ಪೇಟೆ ತಾಲೂಕಿನ ಸಂತೆಬಾಚಳ್ಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರಾ ಎಂಬ ಪ್ರಶ್ನೆಗೆ ಮಾಧ್ಯಮಗಳಿಗೆ ಉತ್ತರಿಸಿದ ಸಚಿವ ನಾರಾಯಣ ಗೌಡ ಅವರು, ಬಿಜೆಪಿಯಿಂದ ಸ್ಪರ್ಧೆ ಮಾಡಬೇಕಾ ಇಲ್ಲವೇ ನಿವೃತ್ತಿ ಆಗಬೇಕಾ ತೀರ್ಮಾನ ಮಾಡಿ ಸಂದರ್ಭ ಬಂದಾಗ ಹೇಳುತ್ತೇನೆ ಎಂದು ಹೇಳಿದರು. ಇದರೊಂದಿಗೆ ನಿಜಕ್ಕೂ ಬಿಜೆಪಿ ಮೇಲೆ ಮುನಿಸಿ ಕೊಂಡಿದ್ದಾರಾ? ಅವರ ಮಾತಿನ ಹಿಂದಿನ ಒಳ ಮರ್ಮವೇನು? ಚುನಾವಣಾ ಹೊಸ್ತಿಲಲ್ಲೇ ಸಚಿವರ ಬಾಯಲ್ಲಿ ನಿವೃತ್ತಿಯ ಮಾತು ಬಂದಿದ್ದೇಕೆ ಎಂದು ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ.
ನನಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಬೇಡ!
ಇದೇ ವೇಳೆ ಜೆಡಿಎಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಸಚಿವರು, ನಾನು ಎಂದೂ ಕಿತಾಪತಿ ರಾಜಕಾರಣ ಮಾಡಿಲ್ಲ ಮಾಡೋದು ಇಲ್ಲ. ಜೆಡಿಎಸ್ ಪಕ್ಷದಲ್ಲಿ ನನಗೆ ತುಂಬಾ ಕಾಟ ಕೊಟ್ಟಿದ್ದರು ಅದನ್ನ ತಡೆದು ಕೊಳ್ಳಲಾರದೆ ಆಚೆ ಬಂದಿದ್ದೆ ಎಂದು ಹೇಳಿದರು.
ಅಲ್ಲದೆ, ಮಂಡ್ಯಕ್ಕೆ ನೂತನ ಉಸ್ತುವಾರಿ ಸಚಿವರ ನೇಮಕ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಯಾರಾದರೂ ಬರಲಿ ನಾನಂತು ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳುವುದಿಲ್ಲ. ಮಂಡ್ಯ ಉಸ್ತುವಾರಿ ನನಗೆ ಬೇಡ ಎಂದರು. ಆದರೆ ಕಂದಾಯ ಸಚಿವ ಆರ್. ಅಶೋಕ್ ಅವರೆ ಮತ್ತೆ ಉಸ್ತುವಾರಿಯಾಗಿ ಬಂದರೆ ಸ್ವಾಗತ ಮಾಡುತ್ತೇನೆ. ಒಂದು ತಿಂಗಳಲ್ಲಿ ಕೋಡ್ ಆಫ್ ಕಂಡೆಕ್ಟ್ ಬರುತ್ತೆ. ಆ ಸಮಯದಲ್ಲಿ ಉಸ್ತುವಾಗಿ ತೆಗೆದುಕೊಂಡು ಏನು ಮಾಡಲು ಆಗುತ್ತೆ, ನಾನು ಚುನಾವಣೆ ಮಾಡಲೇಬೇಕು ಅಲ್ವಾ ಎಂದು ಹೇಳಿದರು.
ಇದನ್ನೂ ಓದಿ: Tumakuru: ಗಂಡನ ಕೊಲೆಗೆ ಪತ್ನಿಯಿಂದಲೇ ಸುಪಾರಿ; ಹುಟ್ಟುಹಬ್ಬದಂದೇ ಕೊಲೆಗೈದು ಕೆರೆಗೆ ಎಸೆದ್ರು!
ಹಾಸನದಲ್ಲಿ ರೇವಣ್ಣ ದಂಪತಿ ಫುಲ್ ಆ್ಯಕ್ಟಿವ್
ಹಾಸನದಲ್ಲಿ ಟಿಕೆಟ್ ಫೈಟ್ ಮುಂದುವರಿದಿರುವಾಗಲೇ ಆಕಾಂಕ್ಷಿಗಳು ಸಖತ್ ಆ್ಯಕ್ಟೀವ್ ಆಗಿದ್ದಾರೆ. ಒಂದೆಡೆ ಸ್ವರೂಪ್ ಸಂಘಟನೆ ಕಾರ್ಯ ಮುಂದುವರಿಸಿದ್ದರೆ. ಮತ್ತೊಂದೆಡೆ ಹೆಚ್.ಡಿ.ರೇವಣ್ಣ (HD Revanna) ಪಕ್ಷದ ಬಲವರ್ಧನೆ ಮುಂದುವರಿಸಿದ್ದಾರೆ. ಹಾಸನ (Hassan) ನಗರಸಭೆ ಮಾಜಿ ಸದಸ್ಯ ಹಾಗೂ ಬಿಜೆಪಿ (BJP) ಜೊತೆ ಗುರುತಿಸಿಕೊಂಡಿದ್ದ ಬಂಗಾರಿ ಮಂಜುರನ್ನು ರೇವಣ್ಣ ದಂಪತಿ ಜೆಡಿಎಸ್ ಸೇರ್ಪಡೆ ಮಾಡಿಸಿಕೊಂಡಿದ್ದಾರೆ.
ಹಾಸನದ ಸಂಸದರ ನಿವಾಸದಲ್ಲಿ ಬಿಜೆಪಿ ಮುಖಂಡ ಮಂಜು ಬಂಗಾರಿ ಅವರು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ರೇವಣ್ಣ ದಂಪತಿ ಮಂಜು ಅವರನ್ನು ಪಕ್ಷಕ್ಕೆ ಸ್ವಾಗತ ಮಾಡಿದ್ದಾರೆ. ಈ ವೇಳೆ ನಾನು ಅಥವಾ ರೇವಣ್ಣ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇವೆ ನಮಗೆ ಬೆಂಬಲಿಸಿ ಎಂದು ಭವಾನಿ ರೇವಣ್ಣ ಮನವಿ ಮಾಡಿದ್ದು, ರೇವಣ್ಣ ದಂಪತಿಗಳ ನಡೆ ತೀವ್ರ ಕುತೂಹಲ ಮೂಡಿಸಿದೆ. ಇದರೊಂದಿಗೆ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರವೂ ಮತ್ತಷ್ಟು ಕುತೂಹಲ ಉಂಟು ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ