ಕನ್ನಡಾಭಿಮಾನದ ಬಗ್ಗೆ ಮಾತನಾಡಿದ್ದು ಬಿಟ್ಟು, ಮಹಾರಾಷ್ಟ್ರ ಕುರಿತದ್ದನ್ನು ಮಾತ್ರ ವೈರಲ್​ ಮಾಡಿದ್ದಾರೆ; ನಾರಾಯಣ ಗೌಡ

ಇತ್ತೀಚೆಗೆ ಮಹಾರಾಷ್ಟ್ರ ಮತ್ತು ಮರಾಠಿ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿ ಹೊಸ ವಿವಾದಕ್ಕೆ ಸಚಿವ ನಾರಾಯಣಗೌಡ ಆಹಾರವಾಗಿದ್ದರು. ಇದೀಗ ಅದರ ಬಗ್ಗೆ ಸ್ಪಷ್ಟನೆ ನೀಡಿರುವ ಗೌಡ, ಭಾಷಣದ ಆಯ್ದ ಭಾಗಗಳನ್ನು ಮಾತ್ರ ವೈರಲ್​ ಮಾಡಲಾಗಿದೆ ಎಂದು ದೂರಿದ್ಧಾರೆ

ಸಚಿವ ನಾರಾಯಣ ಗೌಡ.

ಸಚಿವ ನಾರಾಯಣ ಗೌಡ.

  • Share this:
ಬಾಗಲಕೋಟೆ (ಫೆ.28): ಜೈ ಮಹಾರಾಷ್ಟ್ರ ಎಂದು ಕೂಗುವ ಮೂಲಕ ಮರಾಠಿ ಪ್ರೇಮ ಮೆರೆದಿದ್ದ ಕೆಆರ್​ ಪೇಟೆ ಶಾಸಕ, ಬಿಜೆಪಿ ಸಚಿವ ನಾರಾಯಣ ಗೌಡ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ನಾನು ಕನ್ನಡಿಗ. ನನ್ನ ರಕ್ತದಲ್ಲೇ ಕರ್ನಾಟಕ, ಕನ್ನಡ ಇದೆ.  ಮಹಾರಾಷ್ಟ್ರದಲ್ಲಿ ವ್ಯವಹಾರ ಮಾಡುತ್ತಿದ್ದೆ ಎಂಬ ಕುರಿತು ಮಾತನಾಡಿ ಹೊಗಳಿದ್ದೆ. ಆದರೆ ಯಾರೋ ಕಿಡಿಗೇಡಿಗಳು ನನ್ನ ಕನ್ನಡಾಭಿಮಾನದ ಮಾತು ಬಿಟ್ಟು, ಕೇವಲ ಮಹಾರಾಷ್ಟ್ರದ ಬಗೆಗಿನ ನನ್ನ ಮಾತನ್ನು ಮಾತ್ರ ವಿಡಿಯೋ ಮಾಡಿ ವೈರಲ್​ ಮಾಡಿದ್ದಾರೆ ಎಂದು ಕಿಡಿಕಾರಿದರು. 

ಈ ಕುರಿತು ಮಾತನಾಡಿದ ಅವರು, ನಾನೊಬ್ಬ ಬಡತನದಲ್ಲಿ ಹುಟ್ಟಿ, ಬೆಳೆದವನು. ಹೊಟ್ಟೆ ಬಟ್ಟೆಗಾಗಿ ಮಹಾರಾಷ್ಟ್ರಕ್ಕೆ ಹೋದವನು. ಮಹಾರಾಷ್ಟ್ರ ನನಗೆ ಅನ್ನ ಕೊಟ್ಟಿದೆ. ನಾನೊಬ್ಬನೇ ಅಲ್ಲ ಬಾಂಬೆನಲ್ಲೇ 27 ಜನ ಇದ್ದೇವೆ. ಬೆಳಗ್ಗೆ ಸಾಯಂಕಾಲ ಕನ್ನಡದಲ್ಲೇ ಮಾತಾಡುತ್ತೇವೆ. ಕನ್ನಡವನ್ನೇ ಹೊಗಳುತ್ತೇವೆ. ನಾವು ಕನ್ನಡಿಗರೇ ಎಂದರು.

ಕಾರ್ಯಕ್ರಮಕ್ಕೆ 17 ರಾಜ್ಯಗಳಿಂದ ಡೆಲಿಗೇಟ್ಸ್ ಬಂದಿದ್ದರು. ಸಾಂಸ್ಕೃತಿಕ ಕಾರ್ಯಕ್ರಮ ಆಗಿದ್ದರಿಂದ ಕಲ್ಕತ್ತಾ, ಕೇರಳ, ರಾಜಸ್ಥಾನ ಎಲ್ಲ ಕಡೆಯಿಂದ ಬಂದಿದ್ದರು. ಈ ವೇಳೆ ಎಲ್ಲರನ್ನೂ ಹೊಗಳಿ ಮಾತಾಡಿದ್ದೇನೆ. ಮಹಾರಾಷ್ಟ್ರದಲ್ಲಿ ವ್ಯವಹಾರ ಇದ್ದ ಹಿನ್ನೆಲೆ ಹೊಗಳಿ ಮಾತನಾಡಿದೆ ಅಷ್ಟೇ. ಈ ವೇಳೆ ಕನ್ನಡದಲ್ಲಿ ಮಾತನಾಡಿದ್ದನ್ನು ಬಿಟ್ಟು ಕೇವಲ ಮಹಾರಾಷ್ಟ್ರದ ಬಗ್ಗೆ ಮಾತನಾಡಿದ್ದನ್ನು ಎಡಿಟ್​ ಮಾಡಿ ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಎಂದು ಕಿಡಿಕಾರಿದರು.

ಇದನ್ನು ಓದಿ: ನನ್ನ ತಾಕತ್ತು ಮಹಾರಾಷ್ಟ್ರ; ‘ಜೈ ಮಹಾರಾಷ್ಟ್ರ, ಜೈ ಶಿವಾಜಿ ಎಂದ ಕೆ.ಆರ್​ ಪೇಟೆ ಬಿಜೆಪಿ ಶಾಸಕ ನಾರಾಯಣಗೌಡ

ಇದೇ ವೇಳೆ ತೋಟಗಾರಿಕೆ ವಿವಿಗೆ  ಶಾಶ್ವತ ಕುಲಪತಿ ನೇಮಕ ಮಾಡದೇ ಇರುವ ವಿಚಾರ ಕುರಿತು ಮಾತನಾಡಿದ ಅವರು, ನಾನು ಚಾರ್ಜ್​ ತೆಗೆದುಕೊಂಡು ಒಂದು ವಾರ ಆಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ಶೀಘ್ರದಲ್ಲೇ ತೀರ್ಮಾನ ಪ್ರಕಟಿಸಲಾಗುವುದು ಎಂದರು.

(ವರದಿ: ರಾಚಪ್ಪ ಬನ್ನಿದಿನ್ನಿ)
First published: