ಕೋಲಾರ (ಅ.14): ಸಾಮಾನ್ಯ ಅಧಿಕಾರಿಯೊಬ್ಬರು ಮುಂಬರುವ ಚುನಾವಣೆಯಲ್ಲಿ ಸಚಿವ ಎಚ್ ನಾಗೇಶ್ ವಿರುದ್ಧ ಸ್ಪರ್ಧಿಸಲು ಕ್ಷೇತ್ರದಲ್ಲಿ ಚುನಾವಣಾ ತಯಾರಿ ನಡೆಸುತ್ತಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವ ಗಿರಿಜೇಶ್ವರಿ ದೇವಿ ರಾಜಕೀಯಕ್ಕೆ ಧುಮುಕಲು ತಯಾರಿ ನಡೆಸಿದ್ದಾರೆ ಎಂಬ ಮಾತು ಕೇಳಿಬಂದಿದೆ. ಅಧಿಕಾರಿ ಸಚಿವರ ಕ್ಷೇತ್ರವಾದ ಮುಳಬಾಗಿಲಿನಲ್ಲಿ ಸಮಾಜಮುಖಿ ಕೆಲಸದ ಮೂಲಕ ತೊಡಗಿಸಿಕೊಂಡಿದ್ದು, ಇದು ರಾಜಕೀಯಕ್ಕೆ ನಡೆಸುತ್ತಿರುವ ಅಡಿಪಾಯ ಎಂಬ ಗುಸುಗುಸು ಇದೆ. ಈ ವಿಷಯ ತಿಳಿಯುತ್ತಿದ್ದಂತೆ ಸಚಿವ ನಾಗೇಶ್ ಕೆಂಡಾಮಂಡಲರಾಗಿದ್ದಾರೆ . ಈ ವಿಷಯ ತಿಳಿಯುತ್ತಿದ್ದಂತೆ ಸಚಿವರು ಇಲ್ಲಿನ ಬಿಇಒ ವರ್ಗಾವಣೆ ಮಾಡಿಸಲು ಮುಂದಾಗಿದ್ದಾರೆ. ಈ ಕುರಿತು ಶಿಕ್ಷಣಸಚಿವರಿಗೂ ಕೂಡ ಪತ್ರ ಬರೆದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಸಚಿವರು, ಕ್ಷೇತ್ರದ ಶಿಕ್ಷಣಾಧಿಕಾರಿ ವಿರುದ್ಧ ಲಿಖಿತ ದೂರು ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ. ಅವರು ಅಶಿಸ್ತು ತೋರುತ್ತಿರುವ ಹಿನ್ನಲೆ ಈ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ. ಒಬ್ಬ ರಾಜ್ಯ ಮಟ್ಟದ ಅಧಿಕಾರಿಯಾಗಿ ಕೆಲಸ ಮಾಡಿದವನು ನಾನು. ಆದರೆ, ಎಂದು ನನ್ನ ವೃತ್ತಿ ಜೀವನದಲ್ಲಿ ರಾಜಕೀಯ ಮಾಡಿಲ್ಲ. ಆದರೆ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ, ಅವರ ಕರ್ತವ್ಯ ಮರೆತು ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಅವರು ಸಂಘ ಸಂಸ್ಥೆಗಳಿಗೆ ದಿನಸಿ ಪದಾರ್ಥ ನೀಡಿ, ಜನರ ವಿಶ್ವಾಸ ಗಳಿಸುವ ಪ್ರಯತ್ನ ನಡೆಸಿದ್ದಾರೆ. ಒಬ್ಬ ಅಧಿಕಾರಿಯಾದವರು ದಿಢೀರ್ ಎಂದು ಸಮಾಜ ಸೇವೆ ಮಾಡುತ್ತಿರುವುದು ಏಕೆ. ಅದನ್ನೆಲ್ಲಾ ಮಾಡಲು ನಾವಿದ್ದೇವೆ. ಅವರು ಯಾವ ಉದ್ದೇಶದಿಂದ ಇದನ್ನೆಲ್ಲಾ ಮಾಡುತ್ತಿದ್ದಾರೆ. ತಮ್ಮ ಕರ್ತವ್ಯ ನಿರ್ವಹಿಸುವ ಬದಲು ಈ ರೀತಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಹಿನ್ನಲೆ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವರ್ಗಾವಣೆಗೆ ಶಿಫಾರಸು ಮಾಡಿರುವುದಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ, ನಾನು ರಾಜಕೀಯ ಮಾಡಲು ಬಂದವಳಲ್ಲ. ಬೇರೆಲ್ಲೂ ಕಾರ್ಯನಿರ್ವಹಿಸುವ ಸ್ಥಳಾವಕಾಶ ಸಿಗದೇ, ಕೌನ್ಸಿಲಿಂಗ್ ಪ್ರಕ್ರಿಯೆ ಮೂಲಕ ಇಲ್ಲಿಗೆ ಬಂದಿರುವೆ. ಲಾಕ್ಡೌನ್ ವೇಳೆ ಸಂಬಳ ವಿಲ್ಲದೆ ಕೆಲ ದಿನಗೂಲಿ ನೌಕರರು ಸಮಸ್ಯೆಯಲ್ಲಿ ಇದ್ದರು. ಈ ಹಿನ್ನಲೆ ಮಾನವೀಯತೆ ದೃಷ್ಠಿಯಿಂದ ಸಂಘ ಸಂಸ್ಥೆಗಳಿಗೆ ಆಹಾರ ಕಿಟ್ ನೀಡುವ ಮೂಲಕ, ಅವರಿಗೆ ಸಹಾಯ ಮಾಡಿದೆ.
ಇದನ್ನು ಓದಿ: ಸರಳ, ವರ್ಚುಯಲ್ ದಸರಾ; ಮನೆಯಲ್ಲೇ ಕುಳಿತು ವೀಕ್ಷಿಸಿ - ಜನರಿಗೆ ಮೈಸೂರು ಜಿಲ್ಲಾಧಿಕಾರಿ ಮನವಿ
ನಾನು ದಲಿತ ಸಮುದಾಯಕ್ಕೆ ಸೇರಿದ್ದಕ್ಕೆ, ಕೆಲವರು ನನ್ನ ವಿರುದ್ದ ರಾಜಕೀಯಕ್ಕೆ ಬರುವರೆಂದು ಪ್ರಸ್ತಾಪ ಮಾಡಿ, ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಆ ಉದ್ದೇಶ ನನಗೆ ಇಲ್ಲ. ದುರುದ್ಧೇಶಪೂರ್ವಕವಾಗಿ ನನ್ನನ್ನು ಇಲ್ಲಿಂದ ವರ್ಗಾವಣೆ ಮಾಡಿದರೆ ನ್ಯಾಯಾಂಗ ಹೋರಾಟ ಮಾಡುವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಗಿರಿಜೇಶ್ವರಿ ದೇವಿ ಅವರು ಬಿಇಒ ಆಗಿ ಮುಳಬಾಗಿಲಿಗೆ ಬಂದ ಬಳಿಕ ಸಾಕಷ್ಟು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆವಣಿ, ದೇವರಾಯಸಮುದ್ರ ಪಂಚಾಯಿತಿಗಳಿಗೆ ಪ್ರಭಾರಿ ಆಡಳಿತ ಅಧಿಕಾರಿಯಾಗಿರುವ ಅವರು ಉತ್ತಮ ಹೆಸರು ಗಳಿಸಿದ್ದಾರೆ. ಕೆಲ ಸಂಘ ಸಂಸ್ಥೆ ಗಳನ್ನು ಕರೆತಂದು ಗ್ರಾಮದಲ್ಲಿ ಜನರಿಗೆ ಉಚಿತವಾಗಿ ಡಸ್ಟ್ ಬಿನ್, ಬೀದಿ ದೀಪದ ವ್ಯವಸ್ಥೆ, ಸ್ವಚ್ಚ ಭಾರತ ಮಿಷನ್ ಅಡಿ ಸ್ವಚ್ಚತಾ ಕಾರ್ಯಕ್ರಮ ನಡೆಸಿ ಜನರ ಮೆಚ್ಚುಗೆ ಗಳಿಸಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ