ಬೆಂಗಳೂರು (ಜನವರಿ 16); ರಾಜ್ಯದಲ್ಲಿ ಸಿಡಿ ರಾಜಕೀಯ ನಡೆಯುತ್ತಿದೆ. ಸಿಡಿಯನ್ನು ಮುಂದಿಟ್ಟು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬ್ಲ್ಯಾಕ್ಮೇಲ್ ಕೆಲವರು ಸಚಿವ ಸ್ಥಾನವನ್ನು ಪಡೆದಿದ್ದಾರೆ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದು ಸದ್ಯಕ್ಕೆ ದೂರವಾದ ಮಾತು ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ. ಗುರುವಾರ ಹೇಳಿಕೆ ನೀಡಿದ್ದ ಬಸನಗೌಡ ಪಾಟೀಲ್ ಯತ್ನಾಳ್, "ಕಣ್ಣಿನಿಂದ ನೋಡಲಾಗದಂತಹ ಸಿಡಿ ಇದೆ. ಬಿಎಸ್ ಯಡಿಯೂರಪ್ಪ ಮನೆಯಲ್ಲಿ ಆ ಸಿಡಿಯನ್ನು ಮಾಡಿದ್ದೇ ಅವರ ಮೊಮ್ಮಗ. ಹಿಂದೆ ಇದ್ದದ್ದೇ ಆ ಸಿಡಿ, ಯಾರೊಂದಿಗೆ ಇದೆ ಅಂತ ತಮಗೆಲ್ಲಾ ಅದು ಗೊತ್ತೇ ಇದೆ. ನಾನು ಆ ಬಗ್ಗೆ ಏನು ಹೇಳಬೇಕಿಲ್ಲ. ಈ ಸಿಡಿಯನ್ನು ಮುಂದಿಟ್ಟು ಯಡಿಯೂರಪ್ಪನವರನ್ನು ಬ್ಲ್ಯಾಕ್ಮೇಲ್ ಮಾಡಿ ಹಲವರು ಸಚಿವರಾಗುತ್ತಿದ್ದಾರೆ" ಎಂದು ಆರೋಪಿಸಿದ್ದರು.
ಅಲ್ಲದೆ, "ಸಿಡಿ ಇದ್ದ ಕಾರಣಕ್ಕೆ ಇಬ್ಬರು ಸಚಿವರಾಗಿದ್ದಾರೆ. ನನ್ನ ಬಳಿ ಆ ಸಿಡಿ ಇದ್ದಿದ್ದರೆ ನಾನೇ ಉಪ ಮುಖ್ಯಮಂತ್ರಿ ಆಗಿರುತ್ತಿದ್ದೆ. ಆದರೆ ಅಂತಹ ಕೆಳಮಟ್ಟಕ್ಕೆ ಹೋಗುವವನು ನಾನಲ್ಲ. ಮೌಲ್ಯಾಧಾರಿತ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಸಿಡಿಯನ್ನು ಇಟ್ಟುಕೊಂಡೇ ಕಾಂಗ್ರೆಸ್ಸಿಗರು ಅನುದಾನ ತೆಗೆದುಕೊಳ್ಳುತ್ತಿದ್ದಾರೆ. ಆ ಸಿಡಿ ಡಿಕೆಶಿ ಬಳಿಯೇ ಇದೆ. ನಿಜವಾಗಲೂ ರಾಜ್ಯದಲ್ಲಿ ವಿರೋಧ ಪಕ್ಷ ಆಗಿದ್ದರೆ ಸಿಡಿ ಬಿಡುಗಡೆ ಮಾಡಲಿ. ಡಿಕೆಶಿ ಮಾತನಾಡುವ ಧಾಟಿಯಲ್ಲೇ ಅವರ ಬಳಿ ಸಿಡಿ ಇದೆ ಅನ್ನೋದು ಗೊತ್ತಾಗುತ್ತೇ. ಸಿಡಿ ಕುರಿತು ಸಿಬಿಐ ತನಿಖೆ ಆಗಲಿ.
ಸಿದ್ದರಾಮಯ್ಯ, ಜಾಜ್೯, ಜಮೀರ್, ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರಕ್ಕೆ ಹೆಚ್ಚು ಅನುದಾನ ಹೋಗೋದೆ ಆ ಸಿಡಿ ಬ್ಲ್ಯಾಕ್ ಮೇಲ್ ನಿಂದ. ಸಿಡಿ ಬಗ್ಗೆ ತನಿಖೆಯಾಗಲಿ, ಸಿಬಿಐ ನನ್ನ ಬಳಿ ಬರುತ್ತಾರೋ ಆಗ ನನ್ನ ಬಳಿ ಸಿಡಿ ಬಗ್ಗೆ ಮಾತನಾಡಿದವರ ಬಗ್ಗೆ ತಿಳಿಸುತ್ತೇನೆ. ರಾಜ್ಯ ಪೊಲೀಸರಿಂದ ತನಿಖೆ ಸಾಧ್ಯವಿಲ್ಲ. ಯಡಿಯೂರಪ್ಪ ಪಾರದರ್ಶಕತೆ ಬಗ್ಗೆ ಮಾತನಾಡುತ್ತಾರೆ. ಸಿಡಿ ಬಗ್ಗೆ ತನಿಖೆ ಆಗಲಿ. ಅವರ ಮನೆಯಲ್ಲೇ ಸಿಡಿ ಆಗಿವೆ. ಹೊರಗಿನವರು ನಮ್ಮಂತಹವರು ನಿಮ್ಮಂತಹವರು ಮಾಡಿಲ್ಲ" ಎಂದು ಕಿಡಿಕಾರಿದ್ದರು.
ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಯತ್ನಾಳ್ ಸಿಡಿಸಿದ ಸಿಡಿ ಸ್ಫೋಟ; ಬಹಿರಂಗ ಹೇಳಿಕೆ ನೀಡದಂತೆ ಎಲ್ಲಾ ನಾಯಕರುಗಳಿಗೆ ಬಿಜೆಪಿ ಸೂಚನೆ
ಬಸನಗೌಡ ಪಾಟೀಲ್ ಯತ್ನಾಳ್ ಅವರ ಈ ಆರೋಪಕ್ಕೆ ಇಂದು ಉತ್ತರ ನೀಡಿರುವ ಸಚಿವ ಮುರುಗೇಶ್ ನಿರಾಣಿ, "ಯಾವ ಸಿಡಿನೂ ಇಲ್ಲ, ಇದು ನನಗೆ ಟಿವಿಯಿಂದ ಗೊತ್ತಾಗಿದ್ದು. ಇದು ಸತ್ಯಕ್ಕೆ ದೂರವಾಗಿರುವ ವಿಷಯ. ಶಾಸಕ ಬಸನಗೌಡ ಪಾಟೀಲ್ ದೊಡ್ಡವರು, ಅವರು ಏನು ಬೇಕಾದರೂ ಹೇಳಬಹುದು. ಆದರೆ ಅವರ ಹೇಳಿಕೆಗಳ ಬಗ್ಗೆ ನಾನು ಕಾಮೆಂಟ್ ಮಾಡಲ್ಲ. ಅವರು ಹಿರಿಯರು, ಅವರಿಗೆ ಬುದ್ದಿ ಹೇಳುವಷ್ಟು ದೊಡ್ಡವನಲ್ಲ.
ಆದರೆ ಅವರು ಹೇಳುವಂತೆ ಯಾರು ಕೂಡ ಸಿಡಿಯಿಂದ ಮಂತ್ರಿ ಆಗಿಲ್ಲ. ಸಿಡಿ ನೂರಕ್ಕೆ ನೂರರಷ್ಟು ಸುಳ್ಳು. ಯಾವುದೇ ರೀತಿಯ ಪೆನ್ ಡ್ರೈವ್ ಆಗಲಿ, ಸಿಡಿ ಆಗಲಿ ಇಲ್ಲ. ಆ ಪ್ರಸಂಗನೇ ಬರಲ್ಲ, ಯಾರು ಚರ್ಚೆ ಮಾಡ್ತಾರೆ ಅವರನ್ನೇ ಕೇಳಬೇಕು. ಶಾಸಕರು, ಶಾಸಕರ ಮನೆಗೆ ಹೋಗೋದು ಸಹಜ. ಆದರೆ ಯಡಿಯೂರಪ್ಪ ಕೆಳಗೆ ಇಳಿಸಲು ಯಾವ ಶಾಸಕರು ಕೂಡ ಹೋಗಿ ಮಾತಾಡಿಲ್ಲ" ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ