ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳಿಗೆ (Basava Jaya Mruthyunjaya Swamiji) ಸಚಿವ ಮುರುಗೇಶ್ ನಿರಾಣಿ (Minister Murugesh Nirani) ಬಹಿರಂಗವಾಗಿ ಸವಾಲು ಹಾಕಿ ಕಟು ಪದಗಳಲ್ಲಿ ಟೀಕಿಸಿದ್ದಾರೆ. ನನ್ನ ಮೇಲೆ ಮಾಡಿರುವ ಆರೋಪ ಸಾಬೀತು ಮಾಡಿದ್ರೆ ಇವತ್ತೇ ಸಚಿವ ಸ್ಥಾನಕ್ಕೆ (Minister Post) ರಾಜೀನಾಮೆ ಕೊಡುವೆ ಎಂದು ಸವಾಲು ಹಾಕಿದರು. ಸಾಬೀತು ಮಾಡದೇ ಇದ್ರೆ ನೀವು ಸನ್ಯಾಸತ್ವ ತೊರೆದು ರಾಜಕೀಯಕ್ಕೆ ಬನ್ನಿ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿಗಳಿಗೆ ಆಹ್ವಾನ ನೀಡಿದರು. ನಿನ್ನೆ ಸಂದರ್ಶನದಲ್ಲಿ ಪಂಚಮಸಾಲಿ 2ಎ ಮೀಸಲಾತಿ (Panchamasali 2A Reservation) ಘೋಷಣೆ ಆಗದೇ ಇರಲು ಬಾಗಲಕೋಟೆ (Bagalkot) ಜಿಲ್ಲೆಯ ನಮ್ಮ ಸಮಾಜದ ಸಚಿವರು ಕಾರಣ ಎಂದು ಸ್ವಾಮೀಜಿ ಆರೋಪಿಸಿದ್ದಕ್ಕೆ ಮುರುಗೇಶ್ ನಿರಾಣಿ ಆಕ್ರೋಶ ಹೊರ ಹಾಕಿದರು.
ಇಂದು ಬಾಗಲಕೋಟೆಯಲ್ಲಿ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, ಸ್ವಾಮೀಜಿಗಳ ಬಗ್ಗೆ ಗೌರವ ಇದೆ. ನನ್ನ ಬಗ್ಗೆ ಎಷ್ಟೇ ಮಾತಾಡಿದ್ರೂ, ಇವತ್ತು ಎಲ್ಲೇ ಭೇಟಿ ಮಾಡಿದ್ರೂ ನಿಮ್ಮ ಕಾಲಿಗೆ ನಮಸ್ಕಾರ ಮಾಡುತ್ತೇನೆ ಎಂದರು.
ಸನ್ಯಾಸತ್ವ ಬಿಟ್ಟು ರಾಜಕೀಯಕ್ಕೆ ಬನ್ನಿ
ನಾನು ಮೊನ್ನೆ ಪಂಚಮಸಾಲಿ ಮೀಸಲಾತಿ ಕೊಡಲು ಅಡ್ಡಿ ಮಾಡಿದೆ ಎನ್ನಲು ಸಾಕ್ಷಿ ಕೊಟ್ಟರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವೆ. ಇಲ್ಲವಾದರೆ ನೀವು ಸನ್ಯಾಸತ್ವ ಬಿಟ್ಟು ರಾಜಕೀಯಕ್ಕೆ ಬನ್ನಿ ಎಂದು ಆರೋಪಕ್ಕೆ ತಿರುಗೇಟು ನೀಡಿದರು.
ನಾವು ಮನಸ್ಸು ಮಾಡಿದ್ರೆ ಇಡೀ ರಾಜ್ಯದಲ್ಲಿ ಅವರನ್ನ ಸೋಲಿಸುತ್ತೇವೆ ಇವರನ್ನು ಸೋಲಿಸುತ್ತೇವೆ ಎನ್ನುವ ಸ್ವಾಮೀಜಿ ಹೇಳಿಕೆಗೆ ಕಿಡಿಕಿರಿಯಾದ ಮುರುಗೇಶ್ ನಿರಾಣಿ, ಮಾಜಿ ಸಿಎಂ ಯಡಿಯೂರಪ್ಪ ನಮ್ಮ ತಂದೆ ಸಮಾನರು. ನಮ್ಮ ಪಕ್ಷದಲ್ಲಿ ಐದಾರು ದಶಕದಿಂದ ಕೆಲಸ ಮಾಡಿದ್ದಾರೆ. ಅವರ ಆಶೀರ್ವಾದ ಹಾಗೂ ಅನಂತಕುಮಾರ್ ಅಂತಹ ಹಿರಿಯರಿಂದಾಗಿ ಅವರಿಂದ ದಕ್ಷಿಣ ಭಾರತದಲ್ಲಿ ಸರ್ಕಾರ ಬಂದಿದೆ ಎಂದು ತಿಳಿಸಿದರು.
ಯಡಿಯೂರಪ್ಪ ಬಗ್ಗೆ ಟೀಕೆಗೆ ಕಿಡಿ
ಇವತ್ತು ಯಡಿಯೂರಪ್ಪ ಅವರ ಬಗ್ಗೆ ಮಾತಾಡೋರು ಅವರ ಆಶೀರ್ವಾದದಿಂದ ಮಂತ್ರಿ ಆಗಿದ್ದನ್ನು ಮರೆಯಬಾರದು. 2013 ರಲ್ಲಿ ನಿಮ್ಮ ಪೀಠದ ಇರುವ ಕ್ಷೇತ್ರದಲ್ಲೇ (ಹುನಗುಂದದಲ್ಲಿ ಕಾಂಗ್ರೆಸ್ ನಾಯಕ ವಿಜಯಾನಂದ ಕಾಶಪ್ಪನವರ) ನಿಮ್ಮ ಎಂಎಲ್ಎ ಗೆಲ್ಲಿಸಲು ಆಗಲಿಲ್ಲ. ಆಗ ನಿಮ್ಮ ಶಕ್ತಿ ಎಷ್ಟು ಅಂತ ಗೊತ್ತಾಗುತ್ತೆ ಎಂದು ಹೇಳುವ ಮೂಲಕ ಸ್ವಾಮೀಜಿಗಳಿಗೆ ಟಕ್ಕರ್ ನೀಡಿದರು.
2014ರಲ್ಲಿ ನಿಮ್ಮ ಲೋಕಸಭೆ ಕ್ಷೇತ್ರದಲ್ಲಿ (ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ) ಗೆಲ್ಲಿಸಲು ಆಗಲಿಲ್ಲ. ಧಾರವಾಡದಲ್ಲಿ ನಮ್ಮ ಸಮಾಜದ ವಿನಯ್ ಕುಲಕರ್ಣಿ ಗೆಲ್ಲಿಸಲು ಹಗಲು ರಾತ್ರಿ ಅಡ್ಡಾಡಿದಿರಿ. ಆದರೆ ಫಲಿತಾಂಶ ಏನಾಯ್ತು ಎಂಬವುದು ಎಲ್ಲರಿಗೂ ಗೊತ್ತಿದೆ ಎಂದು ಟಾಂಗ್ ನೀಡಿದರು.
ಸ್ವಾಮೀಜಿ ಬಗ್ಗೆ ವೈಯಕ್ತಿಕ ಟೀಕೆ
2014ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್, ಪ್ರಕಾಶ್ ಹುಕ್ಕೇರಿ ಪರ ಮತಯಾಚನೆ ಮಾಡಿದಿರಿ. ಆದ್ರೆ ಏನಾಯ್ತು ಸ್ವಾಮಿಗಳೇ ಎಂದು ಪ್ರಶ್ನೆ ಮಾಡಿದ ಮುರುಗೇಶ್ ನಿರಾಣಿ, ನಾವು ಸೋಲೋದು ಗೆಲ್ಲೋದು ಮತದಾರರ ಕೈಯಲ್ಲಿದೆ. ಇವತ್ತು ಲಕ್ಷಾಂತರ ಜನರು ನಮಗೆ 2ಎ ಮೀಸಲಾತಿ ಸಿಗಬೇಕು ಅಂತ ಬಂದಿದ್ದಾರೆ. ನಿಮ್ಮ ನಡತೆ, ನಡವಳಿಕೆ ನೋಡಿ ಅಲ್ಲ ಎಂದು ವೈಯಕ್ತಿಕ ಟೀಕೆಗೆ ಮುಂದಾದರು.
ದೊಡ್ಡ ಸ್ಥಾನದಲ್ಲಿ ಇದ್ದೀರಿ. ಬಾಯಿ ಚಪಲಕ್ಕೆ ಯಾರ ಬಗ್ಗೆಯೂ ಮಾತನಾಡಬಾರದು. ದೊಡ್ಡ ಸ್ಥಾನದಲ್ಲಿ ಇದ್ದೀರಿ. ಒಬ್ಬರ ಮನಸ್ಸಿಗೆ ಎಷ್ಟು ನೋವು ಆಗುತ್ತೆ ತಿಳಿದುಕೊಳ್ಳಬೇಕು ಎಂದು ಗುಡುಗಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ