ಚಿನ್ನದ ಪದಕ ಗೆದ್ದ ಕೂಲಿ ಕಾರ್ಮಿಕನ ಮಗಳ ಭವಿಷ್ಯಕ್ಕೆ ನೆರವಾದ ಮಾಜಿ ಸಚಿವ ಎಂ.ಬಿ.ಪಾಟೀಲ್

ಬಡ ಕೂಲಿಕಾರನ ಮಗಳಾಗಿರುವ ಸೋನಾಲಿ ನರ್ಸಿಂಗ್ ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ರಾಷ್ಟ್ರಪತಿಗಳಿಂದ ಘಟಿಕೋತ್ಸದವಲ್ಲಿ ಚಿನ್ನದ ಪದಕ ಪಡೆದಿದ್ದಕ್ಕೆ ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಎಂ. ಬಿ. ಪಾಟೀಲ ವಿದ್ಯಾರ್ಥಿ ಸೋನಾಲಿ ಹಾಗೂ ಪಾಲಕರನ್ನು ಅಭಿನಂದಿಸಿದ್ದರು.

ಮಾಜಿ ಸಚಿವ ಎಂ.ಬಿ.ಪಾಟೀಲ್- ಚಿನ್ನದ ಪದಕ ವಿಜೇತೆ

ಮಾಜಿ ಸಚಿವ ಎಂ.ಬಿ.ಪಾಟೀಲ್- ಚಿನ್ನದ ಪದಕ ವಿಜೇತೆ

  • Share this:
ವಿಜಯಪುರ(ಫೆ. 16): ಕಡು ಬಡತನದಲ್ಲಿಯೇ ಬೆಳೆದು, ಶಿಕ್ಷಣ ಪಡೆದು ನರ್ಸಿಂಗ್ ಕ್ಷೇತ್ರದಲ್ಲಿ ಇಡೀ ರಾಜ್ಯದಲ್ಲಿಯೇ ಅಪ್ರತಿಮ ಸಾಧನೆ ತೋರಿದ ವಿದ್ಯಾರ್ಥಿನಿಗೆ ಮಾಜಿ ಸಚಿವ ಎಂ. ಬಿ. ಪಾಟೀಲ ಆಕೆಯ ಭವಿಷ್ಯದ ಭರವಸೆ ನೀಡಿದ್ದಾರೆ. ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಬಿ. ಎಂ. ಪಾಟೀಲ್ ಇನಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿನಿ ಸೋನಾಲಿ ದೇವಾನಂದ ರಾಠೋಡ ಅವರನ್ನು ಪ್ರಶಂಸಿಸಿದ ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಮತ್ತು ಬಬಲೇಶ್ವರ ಹಾಲಿ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅವರು, ಸೋನಾಲಿ ದೇವಾನಂದ ರಾಠೋಡ ಕಳೆದ ನಾಲ್ಕು ವರ್ಷಗಳಲ್ಲಿ ಪಾವತಿಸಿದ ಕಾಲೇಜು ಶುಲ್ಕವನ್ನು ಮರು ಪಾವತಿಸಿದ್ದಾರೆ.  ಅಲ್ಲದೇ, ಆಕೆಗೆ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೂ ಉಚಿತ ಪ್ರವೇಶ ಒದಗಿಸಿದ್ದಾರೆ.

ಅಷ್ಟೇ ಅಲ್ಲ, ಈ ವಿದ್ಯಾರ್ಥಿನಿಗೆ ಆಕೆ ಓದಿದ ಕಾಲೇಜಿನಲ್ಲಿಯೇ ಉಪನ್ಯಾಸಕ ಹುದ್ದೆಯ ಆದೇಶ ಪ್ರತಿಯನ್ನೂ ನೀಡುವ ಮೂಲಕ ವಿದ್ಯಾರ್ಥಿನಿಯ ಭವಿಷ್ಯಕ್ಕೆ ನೆರವಾಗಿದ್ದಾರೆ.
ಈ ವಿದ್ಯಾರ್ಥಿನಿ ತನ್ನ ತಂದೆ, ತಾಯಿ ಮತ್ತು ತಂಗಿಯೊಂದಿಗೆ ವಿಜಯಪುರದಲ್ಲಿರುವ ಮಾಜಿ ಸಚಿವರ ನಿವಾಸಕ್ಕೆ ಆಗಮಿಸಿದ್ದರು.  ಆಗ ಸೋನಾಲಿ ದೇವಾನಂದ ರಾಠೋಡ ಮತ್ತು ಆಕೆಯ ಕುಟುಂಬಸ್ಥರನ್ನು ಅಭಿನಂದಿಸಿದ ಎಂ. ಬಿ. ಪಾಟೀಲ, ಬಿಎಸ್ಸಿ ನರ್ಸಿಂಗ್ ಕೋರ್ಸಿನ ನಾಲ್ಕು ವರ್ಷದ ಒಟ್ಟು ಶುಲ್ಕ ರೂ. 2.50 ಲಕ್ಷ ಹಣವನ್ನು ಆಕೆಗೆ ಮರಳಿಸುವಂತೆ ಪ್ರಾಚಾರ್ಯರಿಗೆ ತಿಳಿಸಿದರು.  ಅಲ್ಲದೆ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಉಚಿತ ಪ್ರವೇಶ ನೀಡಿದರು.  ಅಷ್ಟೇ ಅಲ್ಲ, ಆಕೆ ಓದಿದ ಕಾಲೇಜಿನಲ್ಲಿಯೇ ಉಪನ್ಯಾಸಕ ಹುದ್ದೆಯ ಆದೇಶ ಪ್ರತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಸೋನಾಲಿ ದೇವಾನಂದ ರಾಠೋಡ ಅವರ ತಂದೆ, ತಾಯಿ, ತಂಗಿ, ಬಿ ಎಲ್ ಡಿ ಇ ಸಂಸ್ಥೆಯ ಆಡಳಿತಾಧಿಕಾರಿ ಡಾ. ರಾಘವೇಂದ್ರ ಕುಲಕರ್ಣಿ, ಕಾಲೇಜು ಪ್ರಾಚಾರ್ಯ ಶೋಲ್ಮೋನ್ ಚೋಪಡೆ, ಉಪಪ್ರಾಚಾರ್ಯ ಸುಚಿತ್ರಾ ರಾಠಿ, ಉಪನ್ಯಾಸಕ ಸಂತೋಷ ಇಂಡಿ ಉಪಸ್ಥಿತರಿದ್ದರು.

ಮುಗಿಯದ ಕೆಜಿಎಫ್​​ನ ಶ್ರೀನಿವಾಸಸಂದ್ರ ಗ್ರಾ.ಪಂ. ಚುನಾವಣೆ ಬಿಕ್ಕಟ್ಟು; ಡಿಸಿ ಕಚೇರಿ ಎದುರು ಶಾಸಕಿ ರೂಪಾಶಶಿಧರ್ ಪ್ರತಿಭಟನೆ

ವಿದ್ಯಾರ್ಥಿನಿಯ ಹಿನ್ನೆಲೆ

ವಿಜಯಪುರ ಜಿಲ್ಲೆಯ ಭಾವಿಕಟ್ಟಿ ತಾಂಡಾದ ಬಡಕುಟುಂಬದ ದೇವಾನಂದ ರಾಠೋಡ ದಂಪತಿ ಕೂಲಿ ಕೆಲಸಕ್ಕಾಗಿ ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದಾರೆ.  ಅಲ್ಲಿ ಕಷ್ಟಪಟ್ಟು ಹಣ ಕೂಡಿಟ್ಟು ಮಗಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದರು.  ಪೋಷಕರ ದುಡಿಮೆಗೆ ತಕ್ಕ ಫಲ ಎಂಬಂತೆ ತಂದೆ, ತಾಯಿಯ ಆಸೆಗೆ ಪೂರಕವಾಗಿ ಅಧ್ಯಯನ ಮಾಡಿದ ವಿದ್ಯಾರ್ಥಿನಿ ಸೋನಾಲಿ ದೇವಾನಂದ ರಾಠೋಡ ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದ ಬಿಎಸ್ಸಿ ನರ್ಸಿಂಗ್ ಅಂತಿಮ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಳು.

ಈಕೆ ಬಿಎಸ್ಸಿ ನರ್ಸಿಂಗ್ ಕೋರ್ಸ್‍ನ ನಾಲ್ಕು ವರ್ಷಗಳ ಒಟ್ಟು ಸಾಧನೆಯನ್ನು ಗಮನಿಸಿದ ವಿಶ್ವವಿದ್ಯಾಲಯ ಚಿನ್ನದ ಪದಕ ಘೋಷಣೆ ಮಾಡಿತ್ತು.  ಅಲ್ಲದೇ ಈ ಕಾಲೇಜಿನ ಒಟ್ಟು 70 ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವಿಷಯವಾರು ಪರೀಕ್ಷೆಯಲ್ಲಿ ಟಾಪ್-10 ಪಟ್ಟಿಯಲ್ಲಿದ್ದರು.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸದವಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಸೋನಾಲಿ ದೇವಾನಂದ ರಾಠೋಡ ಅವಳಿ ಚಿನ್ನದ ಪದಕ ನೀಡಿ ಗೌರವಿಸಿದ್ದರು.

ಬೆಂಗಳೂರಿನ ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆದ ಘಟಿಕೋತ್ಸದಲ್ಲಿ ಸೋನಾಲಿ ಬಿ. ಎಸ್ಸಿ ನರ್ಸಿಂಗ್ ದ್ವಿತೀಯ ಹಾಗೂ ಬಿ. ಎಸ್ಸಿ ನರ್ಸಿಂಗ್ ತೃತೀಯ ವರ್ಷ ಎರಡು ಪರೀಕ್ಷೆಗಳಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಳು.  ಸ್ವತಃ ರಾಷ್ಟ್ರಪತಿಗಳಿಂದಲೇ ನೇರವಾಗಿ ಈ ಪದಕ ಪಡೆದುಕೊಂಡ ಈ ಘಟನೆ ಆಕೆ ಅಷ್ಟೇ ಅಲ್ಲ, ಆಕೆಯ ಕುಟುಂಬ ಹಾಗೂ ಕಾಲೇಜಿನ ಆಡಳಿತ ಮಂಡಳಿಗೂ ಸಂತಸ ತಂದಿತ್ತು.  ಈ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಚಾರ್ಯ ಶೋಲ್ಮೊನ್ ಚೋಪಡೆ ಸ್ವತಃ ಘಟಿಕೋತ್ಸವದಲ್ಲಿ ಪಾಲ್ಗೋಂಡು ಸಂತಸ ಪಟ್ಟಿದ್ದರು.
ಬಡ ಕೂಲಿಕಾರನ ಮಗಳಾಗಿರುವ ಸೋನಾಲಿ ನರ್ಸಿಂಗ್ ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ರಾಷ್ಟ್ರಪತಿಗಳಿಂದ ಘಟಿಕೋತ್ಸದವಲ್ಲಿ ಚಿನ್ನದ ಪದಕ ಪಡೆದಿದ್ದಕ್ಕೆ ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಎಂ. ಬಿ. ಪಾಟೀಲ ವಿದ್ಯಾರ್ಥಿ ಸೋನಾಲಿ ಹಾಗೂ ಪಾಲಕರನ್ನು ಅಭಿನಂದಿಸಿದ್ದರು.

ಘಟಿಕೋತ್ಸವದ ಬಳಿಕ ಎಂ. ಬಿ. ಪಾಟೀಲ ವಿದ್ಯಾರ್ಥಿನಿ ಹಾಗೂ ಆಕೆಯ ಪೋಷಕರಿಗೆ ಅಭಿನಂದಿಸಿದ್ದಷ್ಟೇ ಅಲ್ಲ ಆಕೆಯ ಭವಿಷ್ಯಕ್ಕೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.  ಅಲ್ಲದೇ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸದಾ ತಮ್ಮ ಬೆಂಬಲ ಇರುತ್ತದೆ ಎಂಬುದನ್ನು ಮತ್ತೋಮ್ಮೆ ತೋರಿಸಿ ಕೊಟ್ಟಿದ್ದಾರೆ.
Published by:Latha CG
First published: