ಎಸ್ಮಾ ಜಾರಿ ಮಾಡಿ, ಸಿಬ್ಬಂದಿಗಳು ಜೈಲಿಗೆ ಹೋದರೆ, ನೌಕರರ ಕುಟುಂಬಕ್ಕೆ ಕೋಡಿಹಳ್ಳಿ ರಕ್ಷಣೆ ಕೊಡ್ತಾರಾ; ಈಶ್ವರಪ್ಪ

ಕೋಡಿಹಳ್ಳಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವೈಯಕ್ತಿಕ ಪ್ರತಿಷ್ಠೆಯನ್ನು ನೌಕರರ ಮೇಲೆ ಹೇರಿ ರಾಜ್ಯದ 6 ಕೋಟಿ ಜನರಿಗೆ ತೊಂದರೆಯನ್ನುಂಟು ಮಾಡಿದ್ದಾರೆ.

ಸಚಿವ ಕೆ ಎಸ್ ಈಶ್ವರಪ್ಪ

ಸಚಿವ ಕೆ ಎಸ್ ಈಶ್ವರಪ್ಪ

  • Share this:
ಶಿವಮೊಗ್ಗ (ಡಿ.14): ಕೋಡಿ ಹಳ್ಳಿ‌ಚಂದ್ರಶೇಖರ್ ಎರಡು ತಲೆ ಹಾವಿದಂತೆ. ರಾಜ್ಯದ ಜನರು ಇಂತಹ ಎರಡು ತಲೆಯ ಹಾವುಗಳನ್ನು ನಂಬಬಾರದು. ಸಮಾಜಘಾತುಕ ಶಕ್ತಿಯ ಉದಾಹರಣೆಯೇ ಈ ಕೋಡಿಹಳ್ಳಿ ಚಂದ್ರಶೇಖರ್. ಅಂತಹ ವ್ಯಕ್ತಿಗಳ ಬಗ್ಗೆ ನೌಕರರು, ರೈತರು ಸಹ ಎಚ್ಚರದಿಂದ ಇರಬೇಕು. ಅವರು, ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವೈಯಕ್ತಿಕ ಪ್ರತಿಷ್ಠೆಯನ್ನು ನೌಕರರ ಮೇಲೆ ಹೇರಿ ರಾಜ್ಯದ 6 ಕೋಟಿ ಜನರಿಗೆ ತೊಂದರೆಯನ್ನುಂಟು ಮಾಡಿದ್ದಾರೆ.  ನಾಯಕರೆಂದು ಕೊಂಡು ಮುಂದೆ ಬಂದು ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಸರ್ಕಾರ ಎಸ್ಮಾ ಜಾರಿ ಮಾಡಿದ್ದರೆ ಗತಿ ಏನು?  ಮುಷ್ಕರ ನಡೆಸುತ್ತಿರುವ ಸಿಬ್ಬಂದಿಗಳು ಜೈಲಿಗೆ ಹೋದರೆ, ನೌಕರರ ಕುಟುಂಬಕ್ಕೆ ಕೋಡಿಹಳ್ಳಿ ರಕ್ಷಣೆ ನೀಡುತ್ತಾರಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,  ಕೋಡಿಹಳ್ಳಿ ಚಂದ್ರಶೇಖರ್ ಬಗ್ಗೆ ರಾಜ್ಯದ ಎಲ್ಲಾ ಸಂಘಟನೆಗಳು ಹುಷಾರಾಗಿರಬೇಕು. ಅವರ ಹಿಂದೆ ಮತ್ತಿನ್ಯಾರು ಇದ್ದಾರೆಂದು ಗೊತ್ತಿಲ್ಲ. ಸಮಾಜದ ಶಾಂತಿ ಕದಡುವ ಕೆಲಸವನ್ನು ಅವರು ಮಾಡುತ್ತಿದ್ದು, ಇದರಿಂದ  ನೌಕರರು , ಸಾರ್ವಜನಿಕರು ಕೂಡ ತೊಂದರೆ ಅನುಭವಿಸುವಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಒಂದಾಗಿದ್ದ ನೌಕರರ ನಡುವೆ  ಕೋಡಿಹಳ್ಳಿ ಚಂದ್ರಶೇಖರ್​​ ಬಿರುಕು ಮೂಡಿಸಿದ್ದಾರೆ. ಸಾರಿಗೆ ಸಿಬ್ಬಂದಿಗಳ  ದಾರಿ ತಪ್ಪಿಸುತ್ತಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ಹತ್ತು ಬೇಡಿಕೆಗಳಲ್ಲಿ 8 ಬೇಡಿಕೆ ಈಡೇರಿಸುವ ಭರವಸೆ ನೀಡಿದೆ. ಆದರೂ ಕೋಡಿಹಳ್ಳಿ ನೌಕರರ ದಾರಿ ತಪ್ಪಿಸಿದ್ದಾರೆ. ಸಮಾಜಘಾತಕ ಶಕ್ತಿಗಳನ್ನು ಯಾವ ರೀತಿ ಬಗ್ಗು ಬಡಿಯಬೇಕು ಎಂಬ ಶಕ್ತಿ  ನಮ್ಮ  ಸರ್ಕಾರಕ್ಕೆ  ಇದೆ. ಸಾರಿಗೆ ಯೂನಿಯನ್ ಗೆ ಸ್ವಂತ ಶಕ್ತಿ ಇಲ್ಲವಾ, ನಿಮಗೆ ಸ್ವತಂತ್ರವಾಗಿ ಯೋಚಿಸುವ ಬುದ್ದಿ ಇಲ್ಲವಾ ಎಂದು ನೌಕರರಿಗೆ ಪ್ರಶ್ನೆ ಮಾಡಿದರು.

ಯಾರದ್ದೋ ಮಾತು ಕೇಳಿ ಪ್ರತಿಭಟನೆ ನಡೆಸುವುದು ಒಳ್ಳೆಯದಲ್ಲ, ನಿಮ್ಮ ನೌಕರರೇ ಯೂನಿಯನ್ ವಿರುದ್ದ ತಿರುಗಿ ಬೀಳುವ ಪ್ರಸಂಗ ಎದುರಾಗುಲಿದೆ.  ಕೋಡಿಹಳ್ಳಿ ಮಾತು ಕೇಳಿದರೆ ಯೂನಿಯನ್ ಜೊತೆಗೆ ನೌಕರರ ನಡುವಿನ ಒಗ್ಗಟ್ಟು  ಒಡೆದು ಹೋಗುವುದರಲ್ಲಿ ಅನುಮಾನವಿಲ್ಲ. ನೌಕರರು ಹಾಳಾಗುತ್ತಾರೆ. 6 ಕೋಟಿ‌ ಜನರಿಗು ತೊಂದರೆ ಆಗುತ್ತದೆ. ನೌಕರರು  ಕೋಡಿಹಳ್ಳಿ ಬಗ್ಗೆ ಜಾಗೃತರಾಗಬೇಕು ಎಂದು ಎಚ್ಚರಿಸಿದರು.
Published by:Seema R
First published: