ಮಂಡ್ಯ: ರಾಜ್ಯದ ಬಹುತೇಕ ಕಡೆ ಮಳೆ (Rain) ಸುರಿಯುತ್ತಿದ್ದು, ಜನ ಸಂಕಷ್ಟದಲ್ಲಿದ್ದಾರೆ. ಇಂಥ ಸಮಯದಲ್ಲಿ ಬಿಜೆಪಿ ಸಚಿವರು (BJP Ministers) ಬಿಜೆಪಿ ಜನಸ್ವರಾಜ್ ಯಾತ್ರೆ ನಡೆಸುತ್ತಾ ಬೇಜಾಬ್ದಾರಿತನ ತೋರುತ್ತಿದ್ದಾರೆ. ಅವರದ್ದು ಜನಸ್ವರಾಜ್ ಯಾತ್ರೆ ಅಲ್ಲ ಜನ ಬರ್ಬಾದ್ ಯಾತ್ರೆ ಎಂದು ಟ್ವೀಟ್ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಟೀಕಿಸಿದ್ದಾರೆ. ಇದಕ್ಕೆ ಜಿಲ್ಲೆಯಲ್ಲಿ ನಡೆಯುದ ಜನಸ್ವರಾಜ್ ಯಾತ್ರೆ ಸಮಾವೇಶದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ತಿರುಗೇಟು ನೀಡಿದರು. ಇದು ಕಾಂಗ್ರೆಸ್ (Congress) ಬರ್ಬಾದ್ ಯಾತ್ರೆ. ಕರ್ನಾಟಕದಲ್ಲಿ ಈಗಾಗಲೇ ಕಾಂಗ್ರೆಸ್ ಸರ್ಕಾರವನ್ನ ಕಿತ್ತು ಬಿಸಾಕಿದ್ದೀವಿ. ಲೋಕಸಭೆಯ 28 ಕ್ಷೇತ್ರದಲ್ಲಿ ಕಾಂಗ್ರೆಸ್ ಒಂದೇ ಕ್ಷೇತ್ರ ಗೆದ್ದಿರೋದು. ಕಾಂಗ್ರೆಸ್ ಬರ್ಬಾದ್ ಆಗಿದೆ. ಎಲ್ಲಾ ಕಡೆ ಕಾಂಗ್ರೆಸ್ ಸೋಲುತ್ತಿದೆ ಎಂದು ವ್ಯಂಗ್ಯವಾಡಿದರು.
ಅವರಿಗೆ ಟೀಕೆ ಮಾಡಿ ಮಾಡಿ ಅಭ್ಯಾಸ
ಜನಸ್ವರಾಜ್ ಯಾತ್ರೆ ಮುಗಿದ ನಂತರ ಗೊತ್ತಾಗುತ್ತೆ ಕಾಂಗ್ರೆಸ್ ಬರ್ಬಾದ್ ಆಗುತ್ತಾ? ಅಥವಾ ಜನ ಬರ್ಬಾದ್ ಆಗ್ತಾರಾ ಅಂತ. ನನಗೆ ವಿಶ್ವಾಸ ಇದೆ ವಿಧಾನ ಪರಿಷತ್ನ 25 ಕ್ಷೇತ್ರದಲ್ಲಿ 15 ರಿಂದ 16 ಕ್ಷೇತ್ರ ಗೆದ್ದು ಕಾಂಗ್ರೆಸ್ ಬರ್ಬಾದ್ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅವರಿಗೆ ಟೀಕೆ ಮಾಡಿ ಮಾಡಿ ಅಭ್ಯಾಸ. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ ಸಿದ್ದರಾಮಯ್ಯ ಹಾಗೂ ದೇವೇಗೌಡರ ಕಾಲು ಹಿಡಿದು ಕೇಳಿಕೊಂಡೆ ಪ್ರವಾಸಕ್ಕೆ ಬನ್ನಿ ಅಂತ. ಒಂದು ಕಡೆ ಕೂಡ ಅವರು ಬರಲಿಲ್ಲ ಈಗ ಪುಕಸಟ್ಟೆ ಬಾಷಣ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ಕೃಷಿ ಮಸೂದೆ ಅರ್ಥ ಆಗಿಲ್ಲ
ಕೃಷಿ ಮಸೂದೆ ಹಿಂಪಡೆದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ಕೇಂದ್ರದ ವಿಚಾರ ಬೇರೆ, ರಾಜ್ಯದ ವಿಚಾರ ಬೇರೆ. ಜನರಿಗೆ ಮಸೂದೆ ಬಗ್ಗೆ ಅರ್ಥ ಮಾಡಿಸೋದರಲ್ಲಿ ವಿಫಲವಾದ್ವಿ ಅಂತ ಮೋದಿ ಹೇಳಿದ್ದಾರೆ. ಕರ್ನಾಟಕದ ಜನ ನಾವು ತಂದ ಬಿಲ್ ಅನ್ನು ಒಪ್ಪಿಕೊಂಡಿದ್ದಾರೆ ಎಂದರು.
ಟೀಕಿಸಿದವರೇ ಕದ್ದು ಮುಚ್ಚಿ ಲಸಿಕೆ ಹಾಕಿಸಿಕೊಂಡ್ರು
ಕೋವಿಡ್ ಲಸಿಕೆ ಸಂಬಂಧವೂ ಕಾಂಗ್ರೆಸ್ ವಿರುದ್ಧ ಈಶ್ವರಪ್ಪ ಆಕ್ರೋಶ ಹೊರ ಹಾಕಿದರು. ಕೋವಿಡ್ ಬಂದಾಗ ಮೋದಿ ಸರ್ಕಾರ ಹಳ್ಳಿಗಳಿಗೆ ವ್ಯಾಕ್ಸಿನ್ ಕೊಟ್ಟರು. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಆ ವ್ಯಾಕ್ಸಿನ್ ಮುಟ್ಟಬೇಡಿ ಅದು ಮೋದಿದು. ಆ ವ್ಯಾಕ್ಸಿನ್ ಹಾಕಿಸಿಕೊಂಡ್ರೆ ಗಂಡಸ್ತನ ಹೋಗಿಬಿಡುತ್ತೆ ಎಂದ್ರು. ಕೊನೆಗೆ ಜನ ಜಾಗೃತಿಯಾಗಿ ವ್ಯಾಕ್ಸಿನ್ ಹಾಕಿಸಿಕೊಂಡರು. ಆಗ ಇದೇ ಸಿದ್ದು, ಡಿಕೆ ಬೆಂಬಲಿಗರು ಕದ್ದು ಬಂದು ಲಸಿಕೆ ಪಡೆದರು ಎಂದು ಕುಹಕವಾಡಿದರು.
ಇದನ್ನೂ ಓದಿ: ಸರ್ಕಾರ ಟೂರಿಂಗ್ ಟಾಕೀಸ್ ರೀತಿ ಜನಸ್ವರಾಜ್ ನಾಟಕ ಪ್ರದರ್ಶನ ಮಾಡ್ತಿದೆ: Siddaramaiah
ಸುಳ್ಳು ಹೇಳೋ ಸ್ಪರ್ಧೆ ಮಾಡಿ, ಸಿದ್ದರಾಮಯ್ಯ ಗೆಲ್ತಾರೆ
ಕೊವಿಡ್ ವಿರುದ್ಧ ಹೋರಾಟದಲ್ಲಿ ಭಾರತ ಮೊದಲ ಸ್ಥಾನ. ಭಾರತದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ನೂರು ಕೋಟಿ ಲಸಿಕೆ ಗುರಿಯಾಗಿತ್ತಿದ್ದಂತೆ ಪ್ರಪಂಚ ಮೋದಿಯವರಿಗೆ ಅಭಿನಂದನೆ ಸಲ್ಲಿಸಿತು. ಕಾಂಗ್ರೆಸ್ ನಾಯಕರು ಇವರು ಸುಳ್ಳು ಹೇಳ್ತಿದ್ದಾರೆ ಎಂದರು. ಸುಳ್ಳು ಹೇಳುವುದರಲ್ಲಿ ನೊಬೆಲ್ ಪ್ರಶಸ್ತಿ ಇಟ್ಟು ಡಿಕೆಶಿ, ಸಿದ್ದರಾಮಯ್ಯಗೂ ಪಂದ್ಯ ನಡೆದರೆ ಸಿದ್ದರಾಮಯ್ಯ ಗ್ಯಾರಂಟಿ ಗೆಲ್ಲುತ್ತಾರೆ. ಕಾಂಗ್ರೆಸ್ಸಿನವರು ದೊಡ್ಡ ಸುಳ್ಳುಗಾರರು ಎಂದು ಹಾಸ್ಯ ಚಟಾಕಿ ಹಾರಿಸಿದರು.
ಕಾಂಗ್ರೆಸ್-ಜೆಡಿಎಸ್ ದರಿದ್ರ ಪಕ್ಷಗಳು
ಮೋದಿಯವರನ್ನ ವಿಶ್ವ ನಾಯಕ ಎಂದು ಪ್ರಪಂಚ ಒಪ್ಪಿಕೊಂಡಿದೆ. ಕಾಂಗ್ರೆಸ್ಸಿನವರು ಕೆಟ್ಟ ಪದ ಬಳಸಿ ಏಕವಚನದಲ್ಲಿ ಮೋದಿ ಬಗ್ಗೆ ಮಾತನಾಡುತ್ತಾರೆ. ಬಡವರು, ಸೈನಿಕರು ಮೋದಿ ಅವರನ್ನು ಮೆಚ್ಚಿದ್ದಾರೆ. ಇವರು ಏಕವಚನದಲ್ಲಿ ಮೋದಿಗೆ ಮಾತನಾಡುತ್ತಾರೆ. ಸುಳ್ಳು ಹೇಳಿ ದೇಶವನ್ನ ದಾರಿ ತಪ್ಪಿಸುತ್ತಿದ್ದಾರೆ. ಇವತ್ತು ದೇಶದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ. ದೇವೇಗೌಡರ ರೂಪದಲ್ಲಿ ಪ್ರಾದೇಶಿಕ ಪಕ್ಷವಾಗುತ್ತಿದೆ. ಇಲ್ಲಿ ಕುಳಿತವರು ಮೊದಲು ಬಿಜೆಪಿಯಲ್ಲಿರಲಿಲ್ಲ. ದರಿದ್ರ ಕಾಂಗ್ರೆಸ್ಸು ಬೇಡ, ದರಿದ್ರ ಜೆಡಿಎಸ್ ಬೇಡ ಎಂದು ಬಿಜೆಪಿಗೆ ಬಂದಿದ್ದೀರಿ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ