ಬೆಂಗಳೂರು(ಸೆ.01): ದಲ್ಲಾಳಿಗಿರಿ ಮಾಡೋವರಿಗೆ ದಲ್ಲಾಳಿ ವ್ಯಾಪಾರ ಗೊತ್ತು. ದಲ್ಲಾಳಿ ವ್ಯಾಪಾರ ಯಾರು ಮಾಡಿದ್ದಾರೆ ಎಂಬುದನ್ನು ಕುಮಾರಸ್ವಾಮಿಯವರು ಹೇಳಲಿ. ಕುಮಾರಸ್ವಾಮಿ ಈ ರೀತಿ ಹೇಳ್ತಾರೆ ಅಂತಾನೇ ನಾನು ಕಲ್ಪನೆ ಮಾಡಿರಲಿಲ್ಲ. ಸಾರಾ ಮಹೇಶ್ ಮನೆಗೆ ಯಾರು ಹೋಗಬಾರದಾ..? ಕುಮಾರಸ್ವಾಮಿ ಮನೆಗೆ ನಾನು ಹೋಗಬಾರದಾ..? ದಲ್ಲಾಳಿ ಮಾತು ಕುಮಾರಸ್ವಾಮಿ ಬಾಯಲ್ಲೆಲ್ಲಾ ಬರಬಾರದು ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಸಾ.ರಾ.ಮಹೇಶ್ ನನ್ನ ಸ್ನೇಹಿತ, ನಮ್ಮದೂ ಅವರದ್ದು ಸರ್ಕಾರ ಒಟ್ಟಿಗೆ ಇತ್ತು. ಯಾರ ಮನೆಗೆ ಯಾರು ಹೋಗಿದ್ರೂ ಅಂತಾ ಪ್ರಶ್ನೆ ಕೇಳೋದ್ರಲ್ಲಿ ಅರ್ಥ ಇಲ್ಲ. ನನ್ನ ಮನೆಗೆ ಅನೇಕ ಜೆಡಿಎಸ್, ಕಾಂಗ್ರೆಸ್ ನಾಯಕರು ಬಂದಿದ್ದಾರೆ. ಯಾರದ್ದೋ ಮನೆಗೆ ಯಾರೋ ಹೋಗಿದಾಕ್ಷಣ ದಲ್ಲಾಳಿಗಿರಿ ಮಾಡಲು ಹೋಗಲ್ಲ ಎಂದು ಕುಮಾರಸ್ವಾಮಿಗೆ ತಿರುಗೇಟು ಕೊಟ್ಟರು.
ಸಾ.ರಾ.ಮಹೇಶ್ ಮನೆಗೆ ಯಾರೂ ಹೋಗಬಾರ್ದಾ.? ನಾನು ಸಾ.ರಾ.ಮಹೇಶ್ ಸ್ನೇಹಿತರು, ನನ್ನ ಮನೆಗೆ ಅವರು ಬಂದಿದ್ದಾರೆ, ಅವರ ಮನೆಗೆ ನಾನು ಹೋಗಿದ್ದೇನೆ. ನಾನು ಕುಮಾರಸ್ವಾಮಿ ಮನೆಗೆ ಹೋಗಿದ್ದೇನೆ, ಸಿದ್ದರಾಮಯ್ಯ ಕೂಡ ನನ್ನ ಮಗಳ ಮದುವೆಗೆ ಬಂದಿದ್ದಾರೆ. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ. ಮೈಸೂರು ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಸುಮ್ಮನೆ ಇದ್ದಿದ್ದಕ್ಕೆ ಬಿಜೆಪಿ ಮೇಯರ್ ಆಗಿದ್ದು. ದಲ್ಲಾಳಿ ಮಾಡೋರಿಗೆ ದಲ್ಲಾಳಿತನ ಗೊತ್ತಿರುತ್ತೆ ಎಂದು ಎಚ್ಡಿಕೆ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ:ನೋ ವ್ಯಾಕ್ಸಿನೇಷನ್ ನೋ ರೇಷನ್; ವಿವಾದ ಭುಗಿಲೆದ್ದ ಬಳಿಕ ಹೇಳಿಕೆ ಹಿಂಪಡೆದ ಚಾಮರಾಜನಗರ ಡಿಸಿ
ಇದೇ ವೇಳೆ, ಕಾಂಗ್ರೆಸ್ ನಾಯಕರ ವಿರುದ್ದವೂ ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ನವರು ಪಂಚ ಕೌರವರು. ಯಾರು ಯಾರನ್ನ ಕೆಡವುತ್ತಾರೋ ಗೊತ್ತಿಲ್ಲ. ಡಿಕೆಶಿ ಸಿದ್ದರಾಮಯ್ಯ ಅವರನ್ನ ಕೆಡವುತ್ತಾರೋ..? ಸಿದ್ದರಾಮಯ್ಯ ಡಿಕೆಶಿ ಅವರನ್ನ ಕೆಡವುತ್ತಾರೋ..? ಗೊತ್ತಿಲ್ಲ. ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಸಿಎಂ ಆಗುವ ಕನಸು ಕಾಣ್ತಿದ್ದಾರೆ. ಷಡ್ಯಂತ್ರ ಮಾಡಿಕೊಂಡಿದ್ದಾರೆ.
ಮೊದಲು ಇಬ್ಬರು- ಮೂವರು ಇದ್ದರು, ಇವಾಗ ಐವರಾಗಿದ್ದಾರೆ. ಸಿದ್ದರಾಮಯ್ಯ ನೋಡಿದ್ರೆ ನಾನು ಸಿಎಂ ಅಂತಾರೆ. ಡಿಕೆಶಿ ನೋಡಿದ್ರೆ ನಾನು ಸಿಎಂ ಅಂತಾರೆ. ಪರಮೇಶ್ವರ್ ನೋಡಿದ್ರೆ ನಾನು ಸಿಎಂ ಅಂತಾರೆ. ಎಂಬಿ ಪಾಟೀಲ್ ನೋಡಿದ್ರೆ ನಾನು ಸಿಎಂ ಅಂತಾರೆ. ಇತ್ತ ತನ್ವೀರ್ ಸೇಠ್ ನೋಡಿದ್ರೆ ನಾನು ಸಿಎಂ ಅಂತಾರೆ. ಅವರೇ ಕಾಲೆಳೆದುಕೊಳ್ಳುತ್ತಿದ್ದಾರೆ. ಅದಕ್ಕೆ ಪಂಚ ಕೌರವರು ಅಂತ ಹೇಳಿದ್ದೇನೆ ಎಂದು ಕಾಂಗ್ರೆಸ್ ನಾಯಕರಿಗೆ ಈಶ್ವರಪ್ಪ ತಿರುಗೇಟು ನೀಡಿದರು.
ತಿಂಗಳಿಗೆ ಎರಡು ದಿನ ಪಕ್ಷದ ಕಚೇರಿಗೆ ಪಕ್ಷದ ರಾಜ್ಯಾಧ್ಯಕ್ಷರು ಸೂಚನೆ ಕೊಟ್ಟಿದ್ದಾರೆ. ಆ ಕಾರಣಕ್ಕೆ ನಾನು ಇಲ್ಲಿಗೆ ಬಂದು ಕಾರ್ಯಕರ್ತರ ಅಹವಾಲು ಕೇಳಿದ್ದೇನೆ. ಸಿದ್ದರಾಮಯ್ಯ ಅಂದ್ರೆ ಸುಳ್ಳು. ಸುಳ್ಳಿಗೆ ಒಂದು ಇತಿಮಿತಿ ಇರಬೇಕು. ಸುಳ್ಳು ಹೇಳುವ ಅವಶ್ಯಕತೆ ಬಿಜೆಪಿಗೆ ಇಲ್ಲ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:Karnataka Dams Water Level: ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ
ಚಾಮರಾಜನಗರ ಡಿಸಿ ವಿರುದ್ಧ ಕಿಡಿ:
ಇದೇ ವೇಳೆ, ವ್ಯಾಕ್ಸಿನೇಷನ್ ಹಾಕಿಸಿಕೊಳ್ಳದ ಜನರಿಗೆ ರೇಷನ್ ಹಾಗೂ ಪೆನ್ಶನ್ ನೀಡಲ್ಲ ಎಂಬ ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿಗೆ ಈಶ್ವರಪ್ಪ ತರಾಟೆಗೆ ತೆಗೆದುಕೊಂಡರು. ಈ ಜಿಲ್ಲಾಧಿಕಾರಿ ಯಾರ್ರೀ ಹೇಳೋದಕ್ಕೆ..? ಪ್ರಧಾನ ಮಂತ್ರಿಗಳೇ ಹೇಳಿದ್ದಾರೆ. ನವೆಂಬರ್ ತನಕ ವ್ಯಾಕ್ಸಿನೇಶನ್ ವಿಚಾರವಾಗಿ ಮಾತಾಡಿದ್ದಾರೆ. ಈ ಜಿಲ್ಲಾಧಿಕಾರಿ ಆದೇಶ ಉತ್ಪ್ರೇಕ್ಷೆಯಾಗಿದೆ. ನೋ ವ್ಯಾಕ್ಸಿನ್, ನೋ ರೇಶನ್ ..ನೋ ಪೆನ್ಶನ್ ಅನ್ನೋದಕ್ಕೆ ಈ ಜಿಲ್ಲಾಧಿಕಾರಿ ಯಾರು..!? ಎಂದು ಕಿಡಿಕಾರಿದರು. ಈ ರೀತಿ ಆದೇಶ ನೀಡಿ ಅಂತ ಸರ್ಕಾರ ಆ ಜಿಲ್ಲಾಧಿಕಾರಿಗಳಿಗೆ ಹೇಳಿಲ್ಲ. ಇವರ್ಯಾರು ಹೇಳೋದಕ್ಕೆ..? ಯಾವ ಲೆಕ್ಕದಲ್ಲಿ ಹೇಳಿದ್ದಾರೋ ಗೊತ್ತಿಲ್ಲ, ಪ್ರಧಾನ ಮಂತ್ರಿಗಿಂತ ಜಿಲ್ಲಾಧಿಕಾರಿ ದೊಡ್ಡವರಾ..? ಎಂದು ಆಕ್ರೋಶ ವ್ಯಕ್ತಡಿಸಿದರು.
ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆ ಮಾಡಲು ಅವಕಾಶ ನೀಡುವ ವಿಚಾರವಾಗಿ, ಬಿಜೆಪಿಗೆ ರಾಜ್ಯದ ಜನರ ಆರೋಗ್ಯ ಮುಖ್ಯ. ಬಿಜೆಪಿ ಸರ್ಕಾರ ಇದ್ದಂತ ಸಂದರ್ಭದಲ್ಲಿ ಗಣೇಶೋತ್ಸವಕ್ಕೆ ಅಡ್ಡಿ ಇಲ್ಲ. ಆದರೆ ಯಾವ ರೂಪದಲ್ಲಿ ಆಚರಣೆ ಇರಬೇಕು ಎಂದು ಸರ್ಕಾರ ಚರ್ಚಿಸಿ ತೀರ್ಮಾನ ಮಾಡಲಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ