ಸಿಎಂ ವಿರುದ್ಧ ಸಿಡಿದೆದ್ದ ಸಚಿವ ಈಶ್ವರಪ್ಪ; ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ರಾಜ್ಯಪಾಲರಿಗೆ ದೂರು

ಸಿಎಂ ವಿರುದ್ಧ ಲಿಖಿತ ರೂಪದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ‌ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ದೂರಿನ ಪತ್ರ ಬರೆದಿದ್ದಾರೆ.

ಕೆಎಸ್ ಈಶ್ವರಪ್ಪ

ಕೆಎಸ್ ಈಶ್ವರಪ್ಪ

 • Share this:
  ಬೆಂಗಳೂರು; ರಾಜ್ಯದಲ್ಲಿ ಸಿಡಿ ಪ್ರಕರಣ ಭಾರೀ ಸದ್ದು ಮಾಡುತ್ತಿರುವ ನಡುವೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಸಚಿವರು ಹಾಗೂ ಸಿಎಂ ಮಧ್ಯೆ ದೊಡ್ಡ ಕಲಹ ಏರ್ಪಟ್ಟಿದೆ. ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಸಿಡಿದೆದ್ದಿದ್ದು, ತಮ್ಮ ಇಲಾಖೆಯಲ್ಲಿ ಮುಖ್ಯಮಂತ್ರಿಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ, ರಾಜ್ಯಪಾಲರು ಸೇರಿದಂತೆ ಬಿಜೆಪಿ ಹೈಕಮಾಂಡ್ ನಾಯಕರಿಗೆ ಸಿಎಂ ಬಿಎಸ್​ವೈ ವಿರುದ್ಧ ದೂರು ನೀಡಿದ್ದಾರೆ. ರಾಜ್ಯಪಾಲರ ಜೊತೆಗೆ  ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಗೃಹ ಸಚಿವ ಅಮಿತ್ ಶಾ ಅವರಿಗೂ ಸಿಎಂ ವಿರುದ್ಧ ಈಶ್ವರಪ್ಪ ದೂರು ನೀಡಿದ್ದಾರೆ.

   ಸಿಎಂ ಯಡಿಯೂರಪ್ಪ ಅವರು ಸಚಿವರ ಅಧಿಕಾರ ಮೊಟಕುಗೊಳಿಸಿ ಹಸ್ತಕ್ಷೇಪ ‌ಮಾಡ್ತಿದ್ದಾರೆ. ಕೂಡಲೇ ಮಧ್ಯಪ್ರವೇಶ ಮಾಡಿ ಇದಕ್ಕೆ ತಡೆ ಹಾಕಬೇಕು ಎಂದು ಇಂದು ಮಧ್ಯಾಹ್ನ ರಾಜ್ಯಪಾಲರಿಗೆ ಈಶ್ವರಪ್ಪ ದೂರು ನೀಡಿದ್ದಾರೆ. ಆರ್ಥಿಕ ಇಲಾಖೆ ಮುಖ್ಯಮಂತ್ರಿಗಳ ಬಳಿಯೇ ಇದೆ. ಆದರೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಮಹತ್ವದ ಯೋಜನೆಗಳಿಗೆ ಒಪ್ಪಿಗೆ ಕೊಡ್ತಿಲ್ಲ. ತಮ್ಮ ಇಲಾಖೆಯಲ್ಲಿ ಮಿತಿ ಮೀರಿದ ಹಸ್ತಕ್ಷೇಪ ಆಗುತ್ತಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಬಿಡುಗಡೆಯಾಗಿರುವ 1200 ಕೋಟಿಗೆ ಸಂಬಂಧಿಸಿದಂತೆ ಕಾನೂನು ಮೀರಿ ಸುಖಾಸುಮ್ಮನೆ ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ದೂರು ದಾಖಲಿಸಿದ್ದಾರೆ.

  ಈಶ್ವರಪ್ಪ ಮಾಡಿರುವ ಆರೋಪಗಳು

  1. ಗ್ರಾಮೀಣ ಸುಮಾರ್ಗ ಯೋಜನೆಗೆ ಪದೇ ಪದೇ ಮನವಿ ಮಾಡ್ತಿದ್ದೇನೆ‌. ಆದ್ರೆ ಇನ್ನೂ ಆಡಳಿತಾತ್ಮಕ ಅನುಮೋದನೆ ಕೊಟ್ಟಿಲ್ಲ

  2. ಯಡಿಯೂರಪ್ಪನವರು 32 ಬಿಜೆಪಿ ಶಾಸಕರಿಗೆ ತಲಾ 20 ರಿಂದ 23 ಕೋಟಿ ರೂಪಾಯಿಗಳನ್ನು,‌ 42 ಬಿಜೆಪಿ ಶಾಸಕರಿಗೆ ತಲಾ 10 ಕೋಟಿ ರೂಪಾಯಿಗಳನ್ನು, ಕಾಂಗ್ರೆಸ್‌ನ 30 ಮಂದಿ ಶಾಸಕರಿಗೆ 5 ಕೋಟಿ ರೂಪಾಯಿಗಳನ್ನು ಹಾಗೂ ಜೆಡಿಎಸ್‌‌ನ 18 ಮಂದಿ ಶಾಸಕರಿಗೆ ತಲಾ 5 ಕೋಟಿ ರೂಪಾಯಿಗಳನ್ನು ನೀಡುವಂತೆ ಆದೇಶ ಹೊರಡಿಸಿದ್ದಾರೆ.

  4. ಹೀಗೆ ತಮ್ಮ ಇಲಾಖೆಗೆ ನೀಡಿದ ಅನುದಾನದಲ್ಲಿ, ತಮ್ಮ ಗಮನಕ್ಕೆ ಬಾರದೇ ಅನುದಾನ ಹಂಚಿಕೆ ಮಾಡಿದ್ದಾರೆ.

  5. ಬೆಂಗಳೂರು ನಗರ ಜಿ.ಪಂ ಅಧ್ಯಕ್ಷ ಮರಿಸ್ವಾಮಿ, ಸಿಎಂ ಯಡಿಯೂರಪ್ಪರಿಗೆ ಬೀಗರೂ ಹೌದು. ಹಣಕಾಸು ಇಲಾಖೆಯ ಪತ್ರದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮರಿಸ್ವಾಮಿ ಪ್ರತಿನಿಧಿಸುವ ದಾಸರಹಳ್ಳಿ ಜಿಲ್ಲಾ ಪಂಚಾಯತ್‌ಗೆ 65 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.

  5. ಇದನ್ನು ಸಚಿವರ ಗಮನಕ್ಕೆ ತರವುದು ಎಂದು ಸರ್ಕಾರದ ಆದೇಶ‌ ಮಾಡಿಸಿಕೊಂಡಿದ್ದಾರೆ ಮರಿಸ್ವಾಮಿ. ಜೊತೆಗೆ ಮರೀಸ್ವಾಮಿ ತಮ್ಮ ಸಂಬಂಧಿ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂಬ ಕಾರಣಕ್ಕೆ ಇಷ್ಟು ದೊಡ್ಡ ಪ್ರಮಾಣದ ಹಣ ಅನುದಾನದ ರೂಪದಲ್ಲಿ ಬಿಡುಗಡೆಯಾಗಿದೆ.

  6. ಜಿ.ಪಂ.ಗಳಿಗೆ 2019-20 ರಲ್ಲೇ 1 ಅಥವಾ 2 ಕೋಟಿ ಅನುದಾನ ಬಿಡುಗಡೆಗೆಯಾಗಿತ್ತು. ಆದರೆ ಈಗ ರಾಜ್ಯದ ಯಾವುದೇ ಜಿಲ್ಲಾ ಪಂಚಾಯತ್‌ಗೂ ಬಿಡುಗಡೆಯಾಗದ ದೊಡ್ಡ ಪ್ರಮಾಣದ ಅನುದಾನದ ಕೇವಲ ಇದೊಂದೇ ಜಿಲ್ಲಾ ಪಂಚಾಯತ್‌ಗೆ ಬಿಡುಗಡೆಯಾಗಿದೆ.

  ಇದನ್ನು ಓದಿ: Farm Laws | ಕೃಷಿ ಕಾನೂನುಗಳ ಸಂಬಂಧ ವರದಿ ಸಲ್ಲಿಸಿದ ಸುಪ್ರೀಂಕೋರ್ಟ್ ನೇಮಿಸಿದ ಮೂವರು ಸದಸ್ಯರ ಸಮಿತಿ

  ಹೀಗೆ ಸಾಲು ಸಾಲು ವಿಚಾರಗಳಲ್ಲಿ ಸಿಎಂ ಯಡಿಯೂರಪ್ಪ ನಮ್ಮ ಇಲಾಖೆಯ ಕೆಲಸ ಕಾರ್ಯಗಳಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಆರೋಪಿಸಿ ಸಚಿವ ಕೆ.ಎಸ್. ಈಶ್ವರಪ್ಪ  ಹೈಕಮಾಂಡ್ ನಾಯಕರ ಗಮನ ಸೆಳೆದಿದ್ದಾರೆ.

  ಸಿಎಂ ವಿರುದ್ಧ ಲಿಖಿತ ರೂಪದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ‌ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ದೂರಿನ ಪತ್ರ ಬರೆದಿದ್ದಾರೆ.
  Published by:HR Ramesh
  First published: