ಕಲಬುರ್ಗಿ (ಅ.07): ಉಪಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಸಿಬಿಐ ಅಸ್ತ್ರ ಪ್ರಯೋಗ ಮಾಡಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಲುಬುರ್ಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಡಿಕೆಶಿ ಪರಿಶುದ್ಧರಿದ್ದರೆ ಸೀತೆಯಂತೆ ಪಾವಿತ್ರ್ಯತೆಯಿಂದ ಹೊರ ಬರಲಿ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು. ಈ ಹಿಂದೆ ಯಡಿಯೂರಪ್ಪನವರ ಮೇಲೆಯೂ ಸಿಬಿಐ ದಾಳಿ ನಡೆದಿತ್ತು. ಆಗ ಕೇಂದ್ರದಲ್ಲಿ ಯುಪಿಎ ಸರ್ಕಾರ ಇತ್ತು. ಆ ವೇಳೆ ರಾಜಕೀಯ ದ್ವೇಷದ ದಾಳಿ ಅಂತ ನಾವು ಹೇಳಲಿಲ್ಲ. ಯಡಿಯೂರಪ್ಪ ಸಿಬಿಐ ತನಿಖೆ ಎದುರಿಸಿ ನಿರಪರಾಧಿಯಾಗಿ ಹೊರಬಂದಿದ್ದಾರೆ. ಅದರಂತೆ ಡಿಕೆಶಿಯೂ ನಿರಪರಾಧಿ ಎಂದು ಸಾಬೀತು ಮಾಡಲಿ ಎಂದು ಈಶ್ವರಪ್ಪ ಸವಾಲು ಹಾಕಿದ್ದಾರೆ.
ಸಿದ್ಧರಾಮಯ್ಯ ವಿರುದ್ಧ ಈಶ್ವರಪ್ಪ ಕಿಡಿ
ಬಿಜೆಪಿ ನಾಯಕರ ಬಗ್ಗೆ ಸಿದ್ದರಾಮಯ್ಯ ಏಕವಚನ ಪ್ರಯೋಗಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ. ಸಿದ್ದರಾಮಯ್ಯನವರ ಮಾತು ಅವರ ನಾಲಿಗೆಯ ಸಂಸ್ಕೃತಿ ಏನು ಅಂತ ತೋರಿಸುತ್ತದೆ. ಯೋಗಿ ಆದಿತ್ಯನಾಥ್, ತೇಜಸ್ವಿ ಸೂರ್ಯ ಬಗ್ಗೆ ಮಾಡಿರುವ ಪದ ಪ್ರಯೋಗ ಸರಿಯಾದುದಲ್ಲ. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಂಥವರ ಘನತೆಗೆ ತಕ್ಕುದಲ್ಲ. ಸಿದ್ಧರಾಮಯ್ಯ ವರ್ತನೆಯಿಂದಾಗಿಯೇ ಕಾಂಗ್ರೆಸ್ ನೆಲಕಚ್ಚಿದೆ ಎಂದು ಕಿಡಿಕಾರಿದರು.
ಸಿಬಿಐ ದಾಳಿ ಬಳಿಕ ಡಿಕೆಶಿ ಭೇಟಿಯಾದ ಜಿಟಿ ದೇವೇಗೌಡ; ರಾಜಕಾರಣವೇ ಬೇರೆ, ಸ್ನೇಹವೇ ಬೇರೆ ಎಂದ ಕೆಪಿಸಿಸಿ ಅಧ್ಯಕ್ಷ
ಸಿದ್ಧರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡರು. ಸಿಎಂ ಹುದ್ದೆಯಿಂದ ಕೆಳಗಿಳಿದು ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಕುಳಿತಿದ್ದಾರೆ . ಈಗಲಾದ್ರೂ ಸಿದ್ಧರಾಮಯ್ಯ ಬುದ್ಧಿ ಕಲಿಯಬೇಕು. ಸಿದ್ಧರಾಮಯ್ಯನವರ ವರ್ತನೆ ಹೀಗೆಯೇ ಮುಂದುವರಿದರೆ ಕಾಂಗ್ರೆಸ್ ಪಕ್ಷ ಸಂಪೂರ್ಣ ನೆಲದಿಂದ ಕೆಳಗೆ ಹೋಗುತ್ತೆ ಎಂದರು.
ವಿಧಾನ ಪರಿಷತ್ ಚುನಾವನಣೆಯ ನಾಲ್ಕೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ. ಶಿರಾ ಹಾಗೂ ಆರ್.ಆರ್.ನಗರ ವಿಧಾನಸಭೆ ಉಪ ಚುನಾವಣೆಯಲ್ಲಿಯೂ ಗೆಲುವು ನಮ್ಮದೇ ಎಂದು ಇದೇ ಸಂದರ್ಭದಲ್ಲಿ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ನಡೆದ ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಧಿಕ ಸ್ಥಾನ ಗಳಿಸಿದೆ. ಅದರಂತೆ ಈಗ ನಡೆಯುತ್ತಿರುವ ಉಪ ಚುನಾವಣೆ, ಎಂ.ಎಲ್.ಸಿ ಚುನಾವಣೆಯಲ್ಲಿ ಬಿಜೆಪಿ ಅಧಿಕ ಸ್ಥಾನ ಗಳಿಸಲಿದೆ. ಆ ಮೂಲಕ ಬಿಜೆಪಿ ಸರ್ಕಾರ ಸದೃಢಗೊಳ್ಳಲಿದೆ. ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ಗೆ ಪೈಪೋಟಿ ಏರ್ಪಟ್ಟಿರೋದೇ ಬಿಜೆಪಿ ಗಾಳಿ ಇರೋದಕ್ಕೆ ಸಾಕ್ಷಿ ಎಂದು ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ