news18-kannada Updated:September 29, 2020, 7:38 PM IST
ಸಚಿವ ಕೆ.ಸುಧಾಕರ್
ಬೆಂಗಳೂರು (ಸೆ.29): ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣ ಸಾರ್ವಜನಿಕರ ನಿರ್ಲಕ್ಷ್ಯ ಕೂಡ ಆಗಿದೆ ಎಂದು ವೈದ್ಯಕೀಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ. ರಾಜ್ಯದಲ್ಲಿ ಕೊರೋನಾ ಹೆಚ್ಚಳ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೋನಾ ಸೋಂಕು ನಿಧಾನವಾಗಿ ಏರಿಕೆಯಾಗುತ್ತಿದೆ. ಲಾಕ್ಡೌನ್ ಬಳಿಕ ಜನರು ಕೊರೋನಾ ಹೋಗಿದೆ ಎಂದು ತಿಳಿದುಕೊಂಡಿದ್ದಾರೆ. ಸಾಮಾಜಿಕ ಅಂತರ ಮರೆತಿದ್ದು, ಮಾಸ್ಕ್ ಬಳಕೆಯನ್ನು ಕಡಿಮೆ ಮಾಡಿದ್ದಾರೆ. ಅಲ್ಲದೇ ಜನರು ಸಭೆ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದು, ಕೊರೋನಾ ಕುರಿತ ಜಾಗೃತಿ ಮರೆಯುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಕಂಡು ಬರುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಕೊರೋನಾದಿಂದಾಗಿ ಸಾವಿನ ಸಂಖ್ಯೆ ಕಡಿಮೆ ಎಂಬ ಭಾವನೆ ಜನರಲ್ಲಿದೆ. ಇದರಿಂದಾಗಿ ಈ ಬಗ್ಗೆ ಜನರು ಹೆಚ್ಚು ಕಾಳಜಿವಹಿಸುತ್ತಿಲ್ಲ. ಲಾಕ್ಡೌನ್ವೇಳೆ ರಾಜ್ಯದಲ್ಲಿ ಸೋಂಕಿನ ಸಂಖ್ಯೆ ಕಡಿಮೆ ಇತ್ತು. ಇದಾದ ಬಳಿಕವೇ ಏರಿಕೆ ಕಂಡು ಬಂದಿದೆ. ಇದರ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ಅಗತ್ಯ. ಈ ಕುರಿತು ಈಗಾಗಲೇ ಅಧಿಕಾರಿಗಳು ಸಲಹೆ ನೀಡುತ್ತಿದ್ದು, ಇದರ ಜಾರಿ ಅನಿವಾರ್ಯವಾಗಿದೆ. ಈ ಕುರಿತು ನಾಳೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ, ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಜನರ ಜೀವ ರಕ್ಷಣೆ ನಮಗೆ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ಇನ್ಮುಂದೆ ಸಭೆ, ಸಮಾರಂಭಗಳನ್ನು ಪಡೆಯಲು ಒಪ್ಪಿಗೆ ಪಡೆಯುವುದು ಅನಿವಾರ್ಯವಾಗಿದೆ. ಈ ಕುರಿತು ಚರ್ಚೆ ನಡೆಸಲಾಗುವುದು. ಜನರು ಸೇರಬಾರದು ಎಂಬ ಉದ್ದೇಶದಿಂದಲೇ ಇನ್ನು ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಅವಕಾಶ ನೀಡಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ರಾಜ್ಯದ 11 ಜಿಲ್ಲೆಗಳಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, 7 ಜಿಲ್ಲೆಗಳಲ್ಲಿ ಅತಿ ಹೆಚ್ಚು ಸೋಂಕು ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಜನರು ಮಾರ್ಗಸೂಚಿ ಪಾಲಿಸಬೇಕು. ಅಲ್ಲದೇ ಎಲ್ಲಾ ಕಡೆ ಈಗ ಪರೀಕ್ಷಾ ಕೇಂದ್ರ ಪ್ರಾರಂಭಿಸಿದ್ದು, ರೋಗದ ಲಕ್ಷಣ ಇರುವವರು ಪರೀಕ್ಷೆಗೆ ಒಳಗಾಗಬೇಕು ಎಂದು ಮನವಿ ಮಾಡಿದರು.
ಕೊರೋನಾ ಬಂದಾಕ್ಷಣ ನೀವು ಆಸ್ಪತ್ರೆಗೆ ದಾಖಲಾಗಬೇಕಿಲ್ಲ. ಮನೆಯಲ್ಲೇ ಚಿಕಿತ್ಸೆ ಪಡೆಯಲು ಅವಕಾಶವಿದೆ. ಪಾಸಿಟಿವ್ ಬಂದವರು ಮಾಹಿತಿ ಹಂಚಿಕೊಳ್ಳಿ. ಇದರಿಂದ ನೆರೆಹೊರೆಯವರ ಜೊತೆ ಕೂಡ ಈ ಮಾಹಿತಿ ಹಂಚಿಕೊಳ್ಳಿ. ಇದರಿಂದ ರೋಗ ಲಕ್ಷಣದ ಬಗ್ಗೆ ಅವರಿಗೆ ಅರಿವಾಗುತ್ತದೆ. ಜೊತೆಗೆ ರೋಗ ಎದುರಿಸುವ ಶಕ್ತಿ ಸಿಗುತ್ತದೆ ಎಂದರು.
ಇದನ್ನು ಓದಿ: ಕೊರೋನಾ ಪಾಸಿಟಿವ್ ಬಂದಿದ್ದಕ್ಕೆ ಲ್ಯಾಬ್ ಟೆಕ್ನಿಶಿಯನ್ ಮೇಲೆ ಹಲ್ಲೆ
ರಾಜ್ಯದಲ್ಲಿ ಸಾವಿನ ಪ್ರಮಾಣ 1.5ಕ್ಕೆ ಇಳಿಕೆಯಾಗಿದೆ ಕೋವಿಡ್ನಿಂದ ಮೃತಪಟ್ಟವರು ಸಾವನ್ನಪ್ಪಿದರೆ ಅವರ ಅಂತ್ಯಸಂಸ್ಕಾರಕ್ಕೆ ಮನೆಯವರಿಗೆ ಅವಕಾಶ ನೀಡಲಾಗುವದು. ಪಿಪಿಎ ಕಿಟ್ ಹಾಕಿಕೊಂಡು ಭಾಗವಹಿಸಲು ಅವಕಾಶವಿದ್ದು, ಈ ಬಗ್ಗೆ ನಾಳೆ ಅಂತಿಮ ನಿರ್ಧಾರ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.ನಗರದಲ್ಲಿ ಇದರ ನಿಯಂತ್ರಣಕ್ಕೆ ಇಲಾಖೆ, ಟಾಸ್ಕ್ ಫೋರ್ಸ್ ಕಮಿಟಿ ಸದಸ್ಯರ ಜೊತೆ ಸಭೆ ನಡೆಸಿದ್ದೇನೆ. ಬಿಬಿಎಂಪಿ ಎಂಟು ವಲಯದ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಈಗ ಎಸ್ಕ್ ಫರ್ಟ್ ಕಮಿಟಿ ಸದಸ್ಯರ ಜೊತೆ ಸಭೆ ನಡೆಸಿದ್ದೇನೆ ಎಂದು ಮಾಹಿತಿ ನೀಡಿದರು.
Published by:
Seema R
First published:
September 29, 2020, 7:34 PM IST