HOME » NEWS » State » MINISTER K SUDHAKAR REACTS ON MINISTRY POST CHANGE BY CM BS YEDIYURAPPA NKCKB LG

ಎರಡೂ ಇಲಾಖೆಗಳ ನಡುವೆ ಸಮನ್ವಯತೆ ತರಲು ಸಿಎಂ ಸೂಚಿಸಿದ್ದಾರೆ; ಸಚಿವ ಡಾ.ಕೆ. ಸುಧಾಕರ್

ನಾನು ಹಾಗೂ ಸಚಿವ ಶ್ರೀ ರಾಮುಲು ಇಬ್ಬರೂ ಕಳೆದ ಆರು ತಿಂಗಳಿಂದ ಪರಿಶ್ರಮದಿಂದ ಕೆಲಸ ಮಾಡಿದ್ದೇವೆ. ಇದರಲ್ಲಿ ಯಾರು ಹೆಚ್ಚು, ಯಾರು ಕಡಿಮೆ ಎನ್ನುವ ಪ್ರಶ್ನೆಯೇ ಇಲ್ಲ. ಇದು ರಾಜ್ಯದ ಜನರ ಆರೋಗ್ಯದ ಪ್ರಶ್ನೆ ಎಂದು ಹೇಳಿದರು.

news18-kannada
Updated:October 14, 2020, 1:24 PM IST
ಎರಡೂ ಇಲಾಖೆಗಳ ನಡುವೆ ಸಮನ್ವಯತೆ ತರಲು ಸಿಎಂ ಸೂಚಿಸಿದ್ದಾರೆ; ಸಚಿವ ಡಾ.ಕೆ. ಸುಧಾಕರ್
ಸಚಿವ ಕೆ.ಸುಧಾಕರ್
  • Share this:
ಬೆಂಗಳೂರು(ಅ.14): ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಎರಡೂ ಇಲಾಖೆಗಳಲ್ಲಿನ ಸಮನ್ವಯದ ಕೊರತೆಯನ್ನು ನೀಗಿಸಿ, ಕೊರೋನಾ ಸೋಂಕನ್ನು ನಿಯಂತ್ರಣಕ್ಕೆ ತರುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸಚಿವ ಡಾ.ಕೆ.ಸುಧಾಕರ್ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅವರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿ, ಇಬ್ಬರ ಸಹಕಾರಕ್ಕೆ ಧನ್ಯವಾದ ತಿಳಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, "ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕೆಳಹಂತದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಜಿಲ್ಲಾಮಟ್ಟದಲ್ಲಿ ಆರೋಗ್ಯಾಧಿಕಾರಿಗಳು ಆರೋಗ್ಯ ಸಚಿವರಿಗೆ ಹಾಗೂ ಮೆಡಿಕಲ್ ಕಾಲೇಜಿನ ಮುಖ್ಯಸ್ಥರು ವೈದ್ಯಕೀಯ ಶಿಕ್ಷಣ ಸಚಿವರಿಗೆ ವರದಿ ಮಾಡಬೇಕಾಗುತ್ತದೆ. ಅಲ್ಲಿ ಸಮನ್ವಯದ ಕೊರತೆ ಉಂಟಾಗಿದೆ. ಬೇರೆ ರಾಜ್ಯಗಳಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಬೇರೆಬೇರೆಯಾಗಿಲ್ಲ. ಈ ಸಮಸ್ಯೆಯನ್ನು ಸರಿಪಡಿಸಿ ಕೊರೊನಾ ನಿಯಂತ್ರಿಸಬೇಕು. ರಾಜ್ಯದ ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ದೊರೆಯಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ" ಎಂದು ತಿಳಿಸಿದರು.

"ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆ ಮಾಡುವ ಉದ್ದೇಶ ಹೊಂದಿದ್ದರು. ಆದರೆ ಅದನ್ನು ಮುಂದೂಡುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಎರಡು ಇಲಾಖೆಗಳಲ್ಲಿ ಸಮನ್ವಯ ಸಾಧಿಸುವ ಉದ್ದೇಶದಿಂದ ಖಾತೆ ಬದಲಿಸಲಾಗಿದೆ. ಎರಡೂ ಇಲಾಖೆಗಳಲ್ಲಿನ ಸಮನ್ವಯವನ್ನು ಸರಿ ಮಾಡಿ, ಕೊರೊನಾ ಸೋಂಕನ್ನು ನಿಯಂತ್ರಣಕ್ಕೆ ತರಬೇಕು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ'' ಎಂದು ವಿವರಿಸಿದರು."ನಾನು ಹಾಗೂ ಸಚಿವ ಶ್ರೀ ರಾಮುಲು ಇಬ್ಬರೂ ಕಳೆದ ಆರು ತಿಂಗಳಿಂದ ಪರಿಶ್ರಮದಿಂದ ಕೆಲಸ ಮಾಡಿದ್ದೇವೆ. ಇದರಲ್ಲಿ ಯಾರು ಹೆಚ್ಚು, ಯಾರು ಕಡಿಮೆ ಎನ್ನುವ ಪ್ರಶ್ನೆಯೇ ಇಲ್ಲ. ಇದು ರಾಜ್ಯದ ಜನರ ಆರೋಗ್ಯದ ಪ್ರಶ್ನೆ'' ಎಂದು ಹೇಳಿದರು.

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ; ಎನ್​​ಐಎ ಅಧಿಕಾರಿಗಳಿಂದ ಇಬ್ಬರು ಶಾಸಕರ ವಿಚಾರಣೆ

ರಾಮನಗರದಲ್ಲಿ ರಾಜೀವ್ ಗಾಂಧಿ ವಿವಿ

ರಾಮನಗರದಲ್ಲಿ ಶೀಘ್ರದಲ್ಲೇ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಿರ್ಮಾಣವಾಗಲು ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಕುಮಾರಕೃಪಾ ಅತಿಥಿಗೃಹದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, "ರಾಮನಗರ ಜಿಲ್ಲಾ ಕೇಂದ್ರದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ನಿರ್ಮಾಣ ಆಗಬೇಕೆಂದು 2007 ರಲ್ಲೇ ತೀರ್ಮಾನ ಆಗಿತ್ತು. 2019 ರಲ್ಲಿ ಟೆಂಡರ್ ಗೆ ಅನುಮೋದನೆ ಆಗಿತ್ತು. ಆದರೆ ಜಮೀನು ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರಿಂದ ತಡವಾಯಿತು. ಅದಕ್ಕೆ ಮತ್ತೆ ಜೀವ ನೀಡಲಾಗಿದೆ. ಮುಖ್ಯಮಂತ್ರಿಗಳು ಎಲ್ಲ ಜಿಲ್ಲೆಗಳಲ್ಲಿ ಉತ್ತಮ ಆರೋಗ್ಯ ಸೇವೆ ನೀಡಬೇಕೆಂಬ ಉದ್ದೇಶ ಹೊಂದಿದ್ದಾರೆ" ಎಂದು ತಿಳಿಸಿದರು."ರಾಜೀವ್ ಗಾಂಧಿ ವಿವಿಯ 25 ನೇ ವರ್ಷದ ಬೆಳ್ಳಿ ಹಬ್ಬವನ್ನು ಆಚರಿಸಲಾಗಿದೆ. ಆದರೆ ವಿವಿಗೆ ಪ್ರತ್ಯೇಕ ಆಡಳಿತ ಕಟ್ಟಡ ಇಲ್ಲ ಎಂಬುದು ವಿಪರ್ಯಾಸ. ಶೀಘ್ರದಲ್ಲೇ ರಾಮನಗರದಲ್ಲಿ ವಿಶ್ವವಿದ್ಯಾಲಯ ಆರಂಭವಾಗಲಿದೆ" ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಎಸ್.ಡಿ.ಎಸ್ ಕ್ಷಯ ರೋಗ ಸಂಶೋಧನಾ ಕೇಂದ್ರ, ರಾಜೀವ್‍ಗಾಂಧಿ ಎದೆರೋಗಗಳ ಸಂಸ್ಥೆ ಹಾಗೂ ಜಯದೇವ ಹೃದ್ರೋಗ ಸಂಸ್ಥೆಯ ಆಡಳಿತ‌ ಮಂಡಳಿ ಸಭೆಯಲ್ಲಿ ಸಚಿವ ಡಾ.ಕೆ.ಸುಧಾಕರ್ ಪಾಲ್ಗೊಂಡರು.
Published by: Latha CG
First published: October 14, 2020, 1:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories