news18-kannada Updated:November 12, 2020, 4:21 PM IST
ಮೈಸೂರು ರಸ್ತೆಯ ಹೊಸಗುಡ್ಡದಹಳ್ಳಿಯಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದ ಕಾರ್ಖಾನೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ಕೆ.ಸುಧಾಕರ್.
ಬೆಂಗಳೂರು (ನವೆಂಬರ್ 12); ಹೊಸಗುಡ್ಡದಹಳ್ಳಿಯ ಕಾರ್ಖಾನೆಯಲ್ಲಿ ಕಾನೂನುಬಾಹಿರವಾಗಿ ರಾಸಾಯನಿಕ ದಾಸ್ತಾನು ಮಾಡಿದ್ದು, ತನಿಖಾ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಮೈಸೂರು ರಸ್ತೆಯ ಹೊಸಗುಡ್ಡದಹಳ್ಳಿಯಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದ ಕಾರ್ಖಾನೆಯ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, “ಇಲ್ಲಿ ಕಾನೂನುಬಾಹಿರವಾಗಿ ಸ್ಯಾನಿಟೈಸರ್ ಸೇರಿದಂತೆ ರಾಸಾಯನಿಕ ಸಂಗ್ರಹಿಸಲಾಗಿತ್ತು ಎಂಬ ದೂರು ಇದೆ. ಆಲ್ಕೋಹಾಲ್ ಗೆ ಸಂಬಂಧಿಸಿದ ರಾಸಾಯನಿಕ ಕೂಡ ಇಲ್ಲಿತ್ತು. ಸ್ಯಾನಿಟೈಸರ್ ಸಂಗ್ರಹಿಸಲು ಆರೋಗ್ಯ ಇಲಾಖೆಯಡಿಯ ಡ್ರಗ್ ಕಂಟ್ರೋಲರ್ ಕಡೆಯಿಂದ ಅನುಮತಿ ಪಡೆಯಬೇಕಾಗುತ್ತದೆ. ಕಾನೂನುಬಾಹಿರವಾಗಿ ರಾಸಾಯನಿಕ ಸಂಗ್ರಹ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಇದನ್ನು ಓದಿ: ರೈತರಲ್ಲದವರು ಪಡೆಯುತ್ತಿದ್ದಾರೆ ಕಿಸಾನ್ ಸಮ್ಮಾನ್ ಯೋಜನೆಯ ಫಲ; ಹಣ ಹಿಂದಿರುಗಿಸುವಂತೆ ನೊಟೀಸ್ ನೀಡಿದ ಅಧಿಕಾರಿಗಳು
“ಈ ರಾಸಾಯನಿಕವನ್ನು ಬೇರೆ ಕಂಪನಿಗಳು ಖರೀದಿಸಿದರೂ ಅದು ಕಾನೂನು ಉಲ್ಲಂಘನೆಯಾಗುತ್ತದೆ. ಯಾವುದೇ ದೊಡ್ಡ ಕಂಪನಿಯಾದರೂ ಕ್ರಮ ಜರುಗಿಸಲಾಗುವುದು. ಜೊತೆಗೆ ನಮ್ಮ ಡ್ರಗ್ ಕಂಟ್ರೋಲರ್ ಗಳು ಏಕೆ ಪರಿಶೀಲನೆ ನಡೆಸಿಲ್ಲ ಎಂದು ವಿಚಾರಿಸಿ, ಅಧಿಕಾರಿಗಳ ತಪ್ಪಿದ್ದರೆ ಅವರ ಮೇಲೂ ಕ್ರಮ ಜರುಗಿಸಲಾಗುವುದು” ಎಂದು ಹೇಳಿದರು.
“ಜನವಸತಿ ಪ್ರದೇಶಗಳಲ್ಲಿರುವ ಕಾರ್ಖಾನೆಗಳನ್ನು ಗುರುತಿಸಿ ಸ್ಥಳಾಂತರಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೆಲ ಮನೆ, ಸಾಮಗ್ರಿಗಳು ಹಾನಿಯಾಗಿವೆ. ನಷ್ಟದ ಪ್ರಮಾಣದ ಬಗ್ಗೆ ಬಿಬಿಎಂಪಿ ಜಂಟಿ ಆಯುಕ್ತರು ವರದಿ ನೀಡಲಿದ್ದು, ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ, ಪರಿಹಾರ ನೀಡುವ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು” ಎಂದು ವಿವರಿಸಿದರು.
Published by:
HR Ramesh
First published:
November 12, 2020, 4:21 PM IST