ಕೋಲಾರ (ಸೆ. 22): ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆ ವಿಚಾರದಲ್ಲಿ ಸಚಿವ ಡಾ ಕೆ ಸುಧಾಕರ್ ಹಾಗು ಕಾಂಗ್ರೆಸ್ ಶಾಸಕರ ಮಧ್ಯೆ ರಾಜಕೀಯ ಜೋರಾಗಿದೆ. ಎರಡು ಜಿಲ್ಲೆಗಳ ಕಾಂಗ್ರೆಸ್ ಶಾಸಕರು ಕೋಮುಲ್ ಒಕ್ಕೂಟ ವಿಭಜನೆ ಬೇಡವೇ ಬೇಡವೆಂದು ಪಟ್ಟು ಹಿಡಿದಿದ್ದು, ಇತ್ತ ಸಚಿವ ಸುಧಾಕರ್ ವಿಭಜನೆ ಆಗಲೇಬೇಕು ಎಂದು ಹಠ ಮಾಡುತ್ತಿದ್ದಾರೆ. ವಿಭಜನೆಯ ಆಡಳಿತಾತ್ಮಕ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿ ಆರಂಭವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮತ್ತಷ್ಟು ಹಿಡಿತ ಸಾಧಿಸಲು ಈ ವಿಚಾರವನ್ನ ಸಚಿವ ಸುಧಾಕರ್ ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ, ಇನ್ನು ಒಕ್ಕೂಟ ವಿಭಜನೆಯಾದಲ್ಲಿ ಕೋಲಾರ ಹಾಲು ಒಕ್ಕೂಟದ ಮೇಲೆ ಕೋಟಿ ಕೋಟಿ ಸಾಲದ ಹೊರೆ ಬೀಳಲಿದೆ, ಈ ಹಿಂದೆ ವಿಭಜನೆಗೆ ಕೋಲಾರ ಒಕ್ಕೂಟದಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದರು ಈಗ ಬೇಡ ಅಂತಿದ್ದಾರೆ ಒಕ್ಕೂಟದ ಅಧ್ಯಕ್ಷ್ಯ ಶಾಸಕ ನಂಜೇಗೌಡ.
ಈ ಬಗ್ಗೆ ಎರಡು ಜಿಲ್ಲೆಗಳ ಕಾಂಗ್ರೆಸ್ ಶಾಸಕರ ಜೊತೆಗೂಡಿ, ಮಾಜಿ ಸಿಎಂ ಸಿದ್ದರಾಮಯ್ಯ ಜೊತೆಗೆ ಚರ್ಚೆ ನಡೆಸಿದ್ದು, ಸಿಎಂ ಬಸವರಾಜ್ ಬೊಮ್ಮಾಯಿರಿಗು ವಿಚಾರ ತಿಳಿಸುವಂತೆಯೂ ಮನವಿ ಮಾಡಿದ್ದಾರೆ, ಹಾಲು ಒಕ್ಕೂಟ ವಿಭಜನೆ ಮಾಡದಂತೆಯೂ ಸಿಎಂ ಬಸವರಾಜ್ ಬೊಮ್ಮಾಯಿರಿಗು ಮನವಿ ನೀಡಿರುವ ಅಧ್ಯಕ್ಷ್ಯ ನಂಜೇಗೌಡ ಹಾಗು ಎರಡು ಜಿಲ್ಲೆಗಳ ಕಾಂಗ್ರೆಸ್ ಶಾಸಕರು, ಕೋಲಾರದಲ್ಲಿ ಗುದ್ದಲಿ ಪೂಜೆ ನೆರವೇರಿಸಿರುವ ಎಂವಿಕೆ ಗೋಲ್ಡನ್ ಡೈರಿ ಕಾಮಗಾರಿಗೆ ಆರ್ಥಿಕ ಸಹಕಾರ ನೀಡುವಂತೆ ಸಿಎಂಗೆ ಮನವಿ ಸಲ್ಲಿಸಿದ್ದಾರೆ.
ಇನ್ನು ವಿಭಜನೆ ಬೇಡ ಎನ್ನುವುದಕ್ಕೆ ಹಾಲಿ ಅಧ್ಯಕ್ಷ್ಯ, ಶಾಸಕ ನಂಜೇಗೌಡ ಕಾರಣವನ್ನು ನೀಡಿದ್ದು, ಸಚಿವ ಸುಧಾಕರ್ ರಾಜಕೀಯ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೆಗಾಡೈರಿ ನಿರ್ಮಾಣಕ್ಕೆ 80 ಕೋಟಿ ಸಾಲ ಮಾಡಲಾಗಿದೆ, ಜೊತೆಗೆ ಕೋಲಾರ ಒಕ್ಕೂಟವೂ ವಿವಿಧ ಬ್ಯಾಂಕ್ಗಳಲ್ಲಿ 70 ಕೋಟಿ ಸಾಲ ತೆಗೆದುಕೊಂಡಿದೆ. ಈ ಮಧ್ಯೆ ಕೊಲಾರದಲ್ಲಿ ಎಂವಿಕೆ ಗೋಲ್ಡರ್ ಡೈರಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿದೆ, ಡೈರಿ ನಿರ್ಮಾಣ ಆರಂಭಕ್ಕೂ ಮೊದಲೇ ಸಚಿವ ಸುಧಾಕರ್ ಸರ್ಕಾರದ ಮಟ್ಟದಲ್ಲಿ ಕಾಮಗಾರಿ ಆಗದಂತೆ ತಡೆಹಾಕಿದ್ದಾರೆ ಎಂದು ನಂಜೇಗೌಡ ಆರೋಪಿಸಿದ್ದಾರೆ.
ಇದನ್ನು ಓದಿ: ಕಿಯಾರಾ ಜೊತೆ ಡೇಟಿಂಗ್ ಕಡೆಗೂ ಸ್ಪಷ್ಟನೆ ನೀಡಿದ ಸಿದ್ದಾರ್ಥ್ ಮಲ್ಹೋತ್ರಾ
ಕೋಲಾರದಿಂದ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆ ಆದರೆ, ಕೋಲಾರ ವಿಭಾಗ ಸಾಲದ ಸುಳಿಯಲ್ಲಿ ಸಿಲುಕುವ ಭೀತಿಯನ್ನ ಎದುರಿಸುತ್ತಿದೆ, ಎರಡೂ ಜಿಲ್ಲೆಗಳಿಂದ ಪ್ರತಿನಿತ್ಯ ಸುಮಾರು 9 ಲಕ್ಷ ಲೀಟರ್ಗೂ ಹೆಚ್ಚು ಹಾಲು ಉತ್ಪಾದನೆ ಆಗುತ್ತಿದೆ, ಇದು ಅರ್ಧಕ್ಕೆ ಇಳಿದಲ್ಲಿ ಆರ್ಥಿಕವಾಗಿ ಹಿನ್ನಡೆಯಾಗಿ, ಕಡೆಗೆ ಹಾಲು ಉತ್ಪಾದಕರಿಗೂ ಹಣ ನೀಡಲಾಗದ ಸಂಕಷ್ಟಕ್ಕೆ ಸಿಲುಕಬಹುದು ಎಂದು ಅಂದಾಜಿಸಲಾಗಿದೆ, ಈ ಬಗ್ಗೆ ಮಾತನಾಡಿರುವ ಸಚಿವ ಸುಧಾಕರ್, ಎರಡು ಜಿಲ್ಲೆಗಳು ಪ್ರತ್ಯೇಕ ಆಗಿ 14 ವರ್ಷವಾಗಿದೆ, ಅವಳಿ ಜಿಲ್ಲೆಗಳಿಗು ಬೇರೆ ಬೇರೆ ಒಕ್ಕೂಟ ಆದರೆ ಆರ್ಥಿಕವಾಗಿ ಮುನ್ನಡೆಯಲು ಸಹಕಾರಿ, ಎಲ್ಲವನ್ನು ರಾಜಕೀಯ ಕಣ್ಣಿಂದ ನೋಡುವುದು ಬೇಡ ಎಂದಿದ್ದಾರೆ, ಆದರೆ ಈ ಬಗ್ಗೆ ಮಾತನಾಡಿರೊ ಕೋಮುಲ್ ಅಧ್ಯಕ್ಷ್ಯ ಶಾಸಕ ನಂಜೇಗೌಡ, ಒಕ್ಕೂಟ ವಿಭಜನೆ ಆದರಲ್ಲಿ ಆರ್ಥಿಕ ಸಂಕಷ್ಟ ಕೋಲಾರಕ್ಕೆ ಆಗಲಿದೆ. ಈ ಸಂಧರ್ಭದಲ್ಲಿ ವಿಭಜನೆ ಮಾತು ರಾಜಕೀಯದ ತೀರ್ಮಾನ ಎಂದು ಕಿಡಿಕಾರಿದ್ದಾರೆ.
ಇದನ್ನು ಓದಿ: ಬೆಂಗಳೂರು ವಿವಿಯಲ್ಲಿ ಅತಿಥಿ ಉಪನ್ಯಾ ಸಕ ಹುದ್ದೆಗೆ ಅರ್ಜಿ ಆಹ್ವಾನ
ಒಟ್ಟಿನಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳು ಬೇರ್ಪಟ್ಟು 14 ವರ್ಷಗಳಾಗಿದ್ದು, ಹಾಲು ಒಕ್ಕೂಟ ಹಾಗು ಡಿಸಿಸಿ ಬ್ಯಾಂಕ್ ಪ್ರತ್ಯೇಕಿಸುವ ಕಾರ್ಯ ಇತ್ತೀಚೆಗಷ್ಟೆ ಆರಂಭವಾಗಿದೆ, ಎರಡು ವಿಭಾಗವು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆರಂಭವಾದರೆ ವೇಗವಾಗಿ ಪ್ರಗತಿ ಸಾಧಿಸುವ ಜೊತೆಗೆ, ಅಭಿವೃದ್ಧಿ ಮಾಡಲು ಸಹಕಾರಿ ಎಂದು ಸಚಿವ ಸುಧಾಕರ್ ಹೇಳುತ್ತಿದ್ದು, ನಾವು ಸಾಲದ ಸುಳಿಯಲ್ಲಿ ಸುಲುಕಿರುವ ಕಾರಣ, ಹಾಲು ಡೈರಿಯಲ್ಲಿ ಉತ್ಪಾದನೆಯಿಂದ ಬರುತ್ತಿರುವ ಲಾಭದಿಂದ ಇರುವ ಸಾಲದ ಪ್ರಮಾಣವನ್ನ ಇಳಿಸಲು ಸಹಾಯಕಾರಿ ಎಂದು ನಂಜೇಗೌಡ ತಿಳಿಸಿದ್ದಾರೆ.
ಕೋಮುಲ್ ಒಕ್ಕೂಟದಲ್ಲಿ ವಾರ್ಷಿಕ 1200 ಕೋಟಿ ವಹಿವಾಟು ನಡೆಯುತ್ತಿದ್ದು, ಕೋಲಾರ ಡೈರಿಯಲ್ಲಿ ಇನ್ನು ಹಳೆಯ ಸಂಸ್ಕರಣಾ ಘಟಕಗಳೇ ಇದೆ, ಎರಡು ಜಿಲ್ಲೆಗಳ ಹಾಲು ಉತ್ಪಾದನೆಯಲ್ಲಿ ಕೋಲಾರ ಮುಂಚೂಣಿಯಲ್ಲಿದೆ, ಡೈರಿ ಪ್ರತ್ಯೇಕವಾದಲ್ಲಿ ಹಣಕಾಸು ಸಮಸ್ಯೆ ಎದುರಾಗಿ ಕಡೆಗೆ ಹಾಲು ಉತ್ಪಾದಕರಿಗು ಹಣ ನೀಡಲಾಗದ ಪರಿಸ್ತಿತಿ ಎದುರಹಬಹುದು ಎಂದು, ಕೋಮುಲ್ ಅಧ್ಯಕ್ಷ್ಯ, ಶಾಸಕ ನಂಜೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ