news18-kannada Updated:August 22, 2020, 9:13 AM IST
ಸಚಿವ ಜಗದೀಶ್ ಶೆಟ್ಟರ್
ಆನೇಕಲ್(ಆ.22): ರಾಜ್ಯದ ಕೈಗಾರಿಕಾ ಪ್ರದೇಶಗಳಲ್ಲಿ ಟೌನ್ಶಿಪ್ಗಳ ನಿರ್ಮಾಣ ಮಾಡಬೇಕು ಎನ್ನುವ ಬೇಡಿಕೆ ಬಹುದಿನಗಳಿಂದ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಸ್ತಾವನೆ ಸಿದ್ದವಾಗಿದ್ದು, ಸುಮಾರು 6 ಟೌನ್ಶಿಪ್ಗಳ ನಿರ್ಮಾಣದ ಪ್ರಸ್ತಾಪವನ್ನು ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ತರಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ವೃತ್ತದಲ್ಲಿ ಬೊಮ್ಮಸಂದ್ರ ಕೈಗಾರಿಕಾ ಸಂಘ, ಹೆಬ್ಬಗೋಡಿ ಪೊಲೀಸ್ ಅಧಿಕಾರಿಗಳ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಲಾದ ಟ್ರಾಫಿಕ್ ಸಿಗ್ನಲ್ ಮತ್ತು ಪಾರ್ಕನ್ನು ಶುಕ್ರವಾರ ಉದ್ಘಾಟಿಸಿದ ಅವರು ಮಾತನಾಡಿದ್ದಾರೆ. ಟ್ರಾಫಿಕ್ ಸಿಗ್ನಲ್ ಹಾಗೂ ವೃತ್ತವನ್ನು ಸುಂದರವಾಗಿ ಅಭಿವೃದ್ದಿಗೊಳಿಸಿರುವುದನ್ನ ಸಚಿವರು ಶ್ಲಾಘಿಸಿದರು. ಅಲ್ಲದೆ, ಇದೇ ರೀತಿಯಲ್ಲಿ ಇದನ್ನು ನಿರ್ವಹಣೆ ಮಾಡುವುದು ಅಷ್ಟೇ ಮುಖ್ಯ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.
ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯದ ಬಹುತೇಕ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಎರಡನೇ ವರ್ಷದ ಮೊದಲ ಭೇಟಿ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಕ್ಕೆ ನೀಡಿದ್ದು, ಎಲ್ಲಾ ಕೈಗಾರಿಕಾ ಪ್ರದೇಶಗಳಿಗೂ ಭೇಟಿ ನೀಡುವ ಗುರಿಯನ್ನು ಹೊಂದಿದ್ದೇನೆ ಎಂದರು.
ರಾಜ್ಯವನ್ನು ದೇಶದಲ್ಲಿ ಪ್ರಮುಖ ಕೈಗಾರಿಕಾ ರಾಜ್ಯವನ್ನಾಗಿಸುವ ಉದ್ದೇಶದಿಂದ ಹಲವಾರು ಕ್ರಾಂತಿಕಾರಕ ನೀತಿ ನಿಯಮಗಳನ್ನು ಜಾರಿಗೊಳಿಸಿದ್ದೇವೆ. ಹೊಸ ಕೈಗಾರಿಕಾ ನೀತಿಯ ಮೂಲಕ ಮುಂದಿನ 5 ವರ್ಷಗಳಲ್ಲಿ 5 ಲಕ್ಷ ಕೋಟಿ ಬಂಡವಾಳವನ್ನು ಆಕರ್ಷಿಸುವುದು, ಈ ಮೂಲಕ 20 ಲಕ್ಷ ಉದ್ಯೋಗಾವಕಾಶಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದೇವೆ. ಅಲ್ಲದೆ, 2 ಮತ್ತು 3 ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಆಕರ್ಷಿಸಲು ಹಲವಾರು ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದ್ದೇವೆ ಎಂದರು.
ಚೀನಿಯರ ವೀಸಾ ಮತ್ತು ಭಾರತದಲ್ಲಿನ ಡ್ಯ್ರಾಗನ್ ದೇಶದ ಶಿಕ್ಷಣ ಸಂಸ್ಥೆಗಳ ಪರಿಶೀಲನೆಗೆ ಮುಂದಾದ ಕೇಂದ್ರ ಸರ್ಕಾರ
ರಾಜ್ಯದ ಹಲವಾರು ಕೈಗಾರಿಕಾ ಪ್ರದೇಶಗಳಲ್ಲಿ ಟೌನ್ಶಿಪ್ಗಳಾಗಿ ಘೋಷಿಸಬೇಕು ಎನ್ನುವ ಬೇಡಿಕೆ ಇದೆ. ಪ್ರತಿಯೊಂದು ಕೈಗಾರಿಕಾ ಪ್ರದೇಶಗಳ ಸಂಘಗಳೂ ಇದಕ್ಕೆ ಮನವಿಯನ್ನು ಸಲ್ಲಿಸಿವೆ. ಇದಕ್ಕಾಗಿ ಗ್ರಾಮೀಣಾಭಿವೃದ್ದಿ ಇಲಾಖೆ ಹಾಗೂ ನಗರಾಭಿವೃದ್ದಿ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇವೆ. ಈ ಸಂಬಂಧ ಈಗಾಗಲೇ ಕಾನ್ಸೆಪ್ಟ್ ಸಿದ್ದವಾಗಿದ್ದು ಶೀಘ್ರದಲ್ಲಿಯೇ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದರಿಂದ ಕೈಗಾರಿಕಾ ಟೌನ್ಶಿಪ್ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅವರೇ ಮಾಡಿಕೊಳ್ಳಲು ಸಹಾಯವಾಗಲಿದೆ ಎಂದು ಹೇಳಿದರು.
ಕೌಶಲ್ಯಾಭಿವೃದ್ದಿಗೆ ನಮ್ಮ ಪ್ರದಾನಿಗಳಾದ ನರೇಂದ್ರ ಮೋದಿ ಅವರು ಹೆಚ್ಚಿನ ಒತ್ತು ನೀಡಿದ್ದಾರೆ. ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಕೌಶಲ್ಯಾಭಿವೃದ್ದಿ ಕೇಂದ್ರ ಸ್ಥಾಪನೆಗೆ ಜಾಗ ಮಂಜೂರು ಮಾಡುವ ಸಂಘದ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಈ ಸಂಬಂಧ ತಕ್ಷಣ ಕಾರ್ಯತತ್ಪರರಾಗುವಂತೆ ಕೆಐಎಡಿಬಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ಎಸ್ಟಿಪಿ/ಇಟಿಪಿ ನಿರ್ಮಾಣಕ್ಕೂ ಅಗತ್ಯ ಸಹಕಾರ ನೀಡುವ ಭರವಸೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಅಧ್ಯಕ್ಷ ಎ ಪ್ರಸಾದ್, ಆನೇಕಲ್ ಶಾಸಕ ಶಿವಣ್ಣ, ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ಪರಿಷತ್ ಸದಸ್ಯರಾದ ಲೆಹರ್ ಸಿಂಗ್, ಐಜಿಪಿ ಕೇಂದ್ರ ವಲಯ ಸೀಮಂತ ಕುಮಾರ್ ಸಿಂಗ್, ಕಾಸಿಯಾ ಅಧ್ಯಕ್ಷ ಅರಸಪ್ಪ, ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
Published by:
Latha CG
First published:
August 22, 2020, 9:13 AM IST