ಕೋಲಾರ(ಅ.01): ಕೋಲಾರ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಎಚ್ ನಾಗೇಶ್ ಅವರು, ಮೊದಲ ಬಾರಿಗೆ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿದ್ದು ಗೊತ್ತಿರುವ ವಿಚಾರ. ಆದರೆ ಕೇವಲ 11 ದಿನಕ್ಕೆ ಕೋಲಾರ ಜಿಲ್ಲೆಯ ಮುಳಬಾಗಿಲು ಮೀಸಲು ಕ್ಷೇತ್ರದಲ್ಲಿ ಶಾಸಕರಾಗಲು, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರ ಪರಿಶ್ರಮವು ಬಹುಪಾಲು ಅಡಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಚುನಾವಣೆ ನಂತರ ಕೊತ್ತೂರು ಮಂಜುನಾಥ್ ಹಾಗೂ ಸಚಿವ ನಾಗೇಶ್ ಅವರ ನಡುವಿನ ಸಂಬಂಧ ಅಷ್ಟಾಗಿ ಚೆನ್ನಾಗಿಲ್ಲ ಎಂದು ತಿಳಿದುಬಂದಿದೆ. ಇತ್ತೀಚೆಗೆ ಕೊತ್ತೂರು ಮಂಜುನಾಥ್ ಅವರೇ ಮಾತನಾಡಿ, ನಾನು ನಾಗೇಶ್ ರನ್ನ ಗೆಲ್ಲಿಸಿ ತಪ್ಪು ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದರು. ಇದೀಗ ಸಚಿವ ನಾಗೇಶ್, ಕೊತ್ತೂರು ಬೆಂಬಲಿಗರ ವಿರುದ್ಧವೇ ಹೊಸ ಬಾಂಬ್ ಸಿಡಿಸಿದ್ದಾರೆ. ಹೌದು, ಮುಳಬಾಗಿಲು ತಾಲೂಕಿನ ಶಾಸಕನಾಗಿದ್ದು ನಾನು ಪಾರ್ಟ್ ಟೈಮ್ ಎಂಎಲ್ಎ ಆಗಲು ಅಲ್ಲ. ನಾನೊಬ್ಬ ಪುಲ್ ಟೈಮ್ ಎಂಎಲ್ಎ ಆಗಲಿಕ್ಕೆ ಎಂದು ಕೆಲ ದಿನಗಳ ಹಿಂದೆ ಮುಳಬಾಗಿಲು ತಾಲೂಕಿನಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು, ಕೊತ್ತೂರು ಮಂಜುನಾಥ್ ಬೆಂಬಲಿಗರ ವಿರುದ್ದವೇ ಕಿಡಿಕಾರಿದ್ದಾರೆ.
ನಾನು ಗೆದ್ದ ಮೊದಲ ದಿನಗಳಲ್ಲಿ ನನ್ನನ್ನ ಕೆಲವರು "ಓವರ್ ಟೇಕ್" ಮಾಡಲು ಮುಂದಾಗಿದ್ದರು. ಜೊತೆಗೆ ಎಲ್ಲಾ ಇಲಾಖೆಯನ್ನು ನೀವು ನೋಡಿಕೊಳ್ಳಲು ಆಗಲ್ಲ, ನಮಗೆ ಕೆಲ ಇಲಾಖೆಗಳನ್ನು ಕೊಡಿ, ಈ ಹಿಂದೆಯು ನಾವು ಇಲಾಖೆಗಳನ್ನ ನಿರ್ವಹಿಸಿದ್ದೇವೆ ಎಂದಿಂದ್ದರು. ಪ್ರಮುಖವಾಗಿ ಪೊಲೀಸ್ ಇಲಾಖೆ, ಸಮಾಜಕಲ್ಯಾಣ ಇಲಾಖೆ, ಲೋಕೋಪಯೋಗಿ, ತಾಲೂಕು ಕಚೇರಿ ಹೀಗೆ ಹಲವು ಇಲಾಖೆಗಳನ್ನು ಉಸ್ತುವಾರಿ ವಹಿಸುವಂತೆ, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರ ಬೆಂಬಲಿಗರು ಬೇಡಿಕೆ ಇಟ್ಟಿದ್ದರು ಎಂದು ಸಚಿವ ನಾಗೇಶ್ ಅವರು ಆರೋಪಿಸಿದ್ದಾರೆ. ಆದರೆ ನಾನು ಇದಕ್ಕೆಲ್ಲ ಒಪ್ಪದಿದ್ದಾಗ, ನನ್ನ ವಿರುದ್ದ ಇಲ್ಲ ಸಲ್ಲದ ದೂರುಗಳನ್ನ ಮಂಜುನಾಥ್ ಅವರ ಬಳಿ ಹೇಳಿ, ನಮ್ಮ ಅವರ ಮಧ್ಯೆ ಭಿನ್ನಾಭಿಪ್ರಾಯ ಬರಲು ಕಾರಣವಾಯಿತು ಎಂದಿದ್ದಾರೆ. ಕೆಲ ಬೆಂಬಲಿಗರ ಸಹವಾಸ ಬಿಡಿ ಎಂದು ಸಲಹೆ ನೀಡಿದ್ದೆ, ಅದಕ್ಕೆ ಅವರು ಒಪ್ಪಲಿಲ್ಲ, ಈಗ ನಾನೇ ಸುಮ್ಮನಾಗಿದ್ದೇನೆ ಎಂದರು.
ಏಕ ಕಾಲಕ್ಕೆ ಪಿಎಚ್.ಡಿ ಪೂರೈಸಿದ ಅಪ್ಪ-ಮಗ : ಅಪರೂಪಕ್ಕೆ ಸಾಕ್ಷಿಯಾಗಲಿದೆ ಮೈಸೂರು ವಿವಿ ಘಟಿಕೋತ್ಸವ
ಕೊತ್ತೂರು ಮಂಜುನಾಥ್ ಅವರೊಂದಿಗಿನ, ಭಿನ್ನಾಭಿಪ್ರಾಯ ಕುರಿತು ಮಾತನಾಡಿದ ಸಚಿವರು, ಅವರ ಮೇಲೆ ನನಗೆ ಒಳ್ಳೆಯ ಅಭಿಪ್ರಾಯ ಇದೆ, ಆದರೆ ಕೆಲ ಬೆಂಬಲಿಗರು ಅವರಿಗೆ ತಪ್ಪು ಮಾಹಿತಿ ನೀಡಿ ನನ್ನ ವಿರುದ್ಧ ಹೇಳಿಕೆಯನ್ನ ಕೊಡಿಸಿದ್ದಾರೆ. ಮಂಜುನಾಥ್ ಅವರು ಒಳ್ಳೆಯ ವ್ಯಕ್ತಿ, ನಾನು ರಾಜಕೀಯ ಮಾಡಿಕೊಂಡೆ ಜೀವನ ನಡೆಸಬೇಕು ಅಂತೇನಿಲ್ಲ, ಆದರೆ ಶಾಸಕರನ್ನೇ ನಂಬಿ ಕೆಲ ನಾಯಕರು ಏನೇನೊ ಮಾಡಿಕೊಂಡು ಜೀವನವನ್ನ ಹೇಗೇಗೊ ಇದ್ದಾರೆ. ಅದನ್ನ ಮಂಜಣ್ಣ ಅವರ ಗಮನಕ್ಕೆ ತಂದಿದ್ದೆ, ಆದರೆ ಬೆಂಬಲಿಗರನ್ನ ಏನೂ ಪ್ರಶ್ನಿಸಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ