ಮೃತ ಪಿಎಸ್​​ಐ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಚಿವ ಗೋಪಾಲಯ್ಯ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಮಾತನಾಡಿ ಈಗಾಗಲೇ ತನಿಖೆ ಆರಂಭವಾಗಿದೆ, ದುಃಖವನ್ನು ನಾವು ಭರಿಸಲು ಸಾಧ್ಯವಿಲ್ಲ, ನಿಷ್ಪಕ್ಷಪಾತ ತನಿಖೆ ನಡೆಸಿ ಇಲಾಖೆ ವತಿಯಿಂದ ಅವರ ಕುಟುಂಬಕ್ಕೆ ಬೇಕಾದ ಸಹಾಯ ಮಾಡಲಾಗುವುದು ಎಂದರು.

ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿರುವ ಸಚಿವ ಗೋಪಾಲಯ್ಯ

ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿರುವ ಸಚಿವ ಗೋಪಾಲಯ್ಯ

  • Share this:

ಹಾಸನ(ಆ.04): ಚನ್ನರಾಯಪಟ್ಟಣ ಪಿಎಸ್ ಐ ಕಿರಣ್ ಆತ್ಮಹತ್ಯೆ ಪ್ರಕರಣ ದಿನೇ ದಿನೇ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ. ಎರಡು ದಿನಗಳ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಕೆ. ಕುಮಾರಸ್ವಾಮಿಯವರು ಜಿಲ್ಲಾ ಉಸ್ತುವಾರಿ ಸಚಿವರ ಬೆಂಬಲಿಗರು ಎಲ್ಲೆಡೆ ವರ್ಗಾವಣೆ ದಂಧೆ ಮಾಡುತ್ತಿದ್ದಾರೆ, ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಇಂದು ಸಚಿವ ಗೋಪಾಲಯ್ಯ ಮೃತ ಪಿಎಸ್ ಐ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.


ಈ ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ನಡೆಸಿ ಸತ್ಯವನ್ನ ಹೊರಗೆ ತರುತ್ತೇವೆ. ಅವರ ಕುಟುಂಬಕ್ಕೆ ಸರ್ಕಾರದಿಂದ ಬರುವ ಸವಲತ್ತನ್ನು ಒದಗಿಸುತ್ತೇವೆ. ಶಕ್ತಿಮೀರಿ ವೈಯಕ್ತಿಕವಾಗಿಯೂ ತನ್ನ ಕೈಲಾದ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ ಐ ಕಿರಣ್ ರವರು ನಾಲ್ಕೈದು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಬಳಿಕ ಈ ಪ್ರಕರಣವು ರಾಜಕೀಯ ಬಣ್ಣಕ್ಕೆ  ತಿರುಗಿತ್ತು. ಯಾವಾಗ ರಾಜಕೀಯ ಬಣ್ಣಕ್ಕೆ ಈ ಪ್ರಕರಣ ತಿರುಗಿತೋ ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚೆತ್ತುಕೊಂಡಿದ್ದಾರೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯರವರು ಇಂದು ಮೃತ ಪಿಎಸ್ ಐ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.ಅರಸೀಕೆರೆ ತಾಲೂಕಿನ ಲಾಳನಕೆರೆ ಗ್ರಾಮಕ್ಕೆ ಭೇಟಿ ನೀಡಿ ಇಡೀ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಕಿರಣ್ ಸಾವಿನ ಬಗ್ಗೆ ನಮಗೆ ಅನುಮಾನವಿದ್ದು ಉನ್ನತಮಟ್ಟದ ತನಿಖೆ ನಡೆಸುವಂತೆ ಕುಟುಂಬಸ್ಥರು ಸಚಿವರಲ್ಲಿ ಆಗ್ರಹಿಸಿದ್ದಾರೆ. ಸಾಂತ್ವನ ಹೇಳಿದ ನಂತರ ಮಾತನಾಡಿದ ಸಚಿವ ಗೋಪಾಲಯ್ಯ ಪಿಎಸ್‌ಐ ಕಿರಣ್‌ಕುಮಾರ್ ಕೆಲಸ ಮಾಡಿರುವ ಕಡೆ ಒಳ್ಳೆ ಹೆಸರು ಪಡೆದಿದ್ದಾರೆ. ಏನೇ ಸಮಸ್ಯೆಯಿದ್ದರೂ ನಮ್ಮ‌ಬಳಿ ಹೇಳಿಕೊಳ್ಳಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ, ಈ ಘಟನೆ ನನಗೆ ಬಹಳ ನೋವಾಗಿದ್ದು, ಆಗಿರುವ ನಷ್ಟ ಸರಿದೂಗಿಸಲು ಸಾಧ್ಯವಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ನಾನು ಸಹಾಯ ಮಾಡುತ್ತೇನೆ ಮತ್ತು ಸರ್ಕಾರದಿಂದ ಎಲ್ಲಾ ರೀತಿಯ ಸಹಾಯ ಮಾಡುತ್ತೇವೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಹೇಳಿದ್ದೇನೆ ಎಂದರು.

ಮೃತ ಪಿಎಸ್​​​ ಐರವರ ಮೊಬೈಲ್‌ನಲ್ಲಿ ಇರುವ ಮಾಹಿತಿ ಅಳಿಸಿ ಹಾಕಿಲ್ಲ, ಮೊಬೈಲ್‌ನಲ್ಲಿ ಏನಿತ್ತು ಎಂಬುದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ತನಿಖೆ ಸಂದರ್ಭದಲ್ಲಿ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ, ಆದರೆ ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ ಎಂದು ಭರವಸೆ ನೀಡಿದರು. ಇಬ್ಬರು ಅಧಿಕಾರಿಗಳ ವರ್ಗಾವಣೆ ಬಗ್ಗೆ ಲಂಚ ಕೊಡಬೇಕು ಎಂದು ಮಾತನಾಡಿರುವ ಆಡಿಯೋ ಹರಿದಾಡುತ್ತಿರುವ ವಿಚಾರದ  ಬಗ್ಗೆ ಪ್ರತಿಕ್ರಿಯಿಸಿ ಆ ಆಡಿಯೋ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಎಂದು ಹೇಳಿದರು.

Evening Digest: ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕೊರೋನಾ, UPSC ಫಲಿತಾಂಶ ಪ್ರಕಟ, ಮುಂಬೈನಲ್ಲಿ ರೆಡ್ ಅಲರ್ಟ್​​

ಮೃತ ಪಿಎಸ್ ಐ ಕಿರಣ್ ಕಿರಣ್ ರ ತಂದೆ ನಂಜೇಗೌಡ ಮಾತನಾಡಿ, ನನ್ನ ಮಗನಿಗೆ ಬಹಳ ಧೈರ್ಯ, ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವನಲ್ಲ. ಆದರೂ  ಆತ್ಮಹತ್ಯೆಗೆ ಶರಣಾದ ಎಂದು ನೋವು ತೋಡಿಕೊಂಡಿದ್ದಾರೆ. ನನ್ನ ಮಗ ನೀವು ಚೆನ್ನಾಗಿರಿ, ನಾನು ಚೆನ್ನಾಗಿರುತ್ತೇನೆ ಅಂತಿದ್ದ, ಅವನು ಕೆಲಸ ಮಾಡಿದ ಸ್ಥಳದಲ್ಲೆಲ್ಲ ಒಳ್ಳೆ ಹೆಸರು ಮಾಡಿದ್ದ. ಯಾರ ಮೇಲೆ ಅನುಮಾನ ಪಡುವುದು ಎಂದು ದುಃಖ ತೋಡಿಕೊಂಡರು. ಇದೇ ವೇಳೆ, ಮಗನ ಸಾವಿನ ಬಗ್ಗೆ ತನಿಖೆ ಆಗಬೇಕು, ಏನಾಗಿದೆ ಎಂದು ಗೊತ್ತಾಗುತ್ತಿಲ್ಲ, ನಿಷ್ಪಕ್ಷಪಾತವಾದ ತನಿಖೆ ಆಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಮಾತನಾಡಿ ಈಗಾಗಲೇ ತನಿಖೆ ಆರಂಭವಾಗಿದೆ, ದುಃಖವನ್ನು ನಾವು ಭರಿಸಲು ಸಾಧ್ಯವಿಲ್ಲ, ನಿಷ್ಪಕ್ಷಪಾತ ತನಿಖೆ ನಡೆಸಿ ಇಲಾಖೆ ವತಿಯಿಂದ ಅವರ ಕುಟುಂಬಕ್ಕೆ ಬೇಕಾದ ಸಹಾಯ ಮಾಡಲಾಗುವುದು ಎಂದರು. ಸದ್ಯಕ್ಕೆ ಕುಟುಂಬದವರು ಯಾರ ಮೇಲೂ ಆರೋಪ ಮಾಡುತ್ತಿಲ್ಲ. ಲಂಚ ನೀಡಿದರೆ ಬೇಕಾದ ಸ್ಥಳಕ್ಕೆ ವರ್ಗಾವಣೆ ಮಾಡಿಸಬಹುದು ಎಂದು ಇಬ್ಬರು ಪೊಲೀಸರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸಿ ಆಡಿಯೋ ನನ್ನ ಗಮನಕ್ಕೂ ಬಂದಿದೆ ಈ ಬಗ್ಗೆ ನಾವು ತನಿಖೆ ಮಾಡಲ್ಲ, ಆಡಿಯೋಗೆ ಸಂಬಂಧಿಸಿದಂತೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಇಬ್ಬರು ಸ್ನೇಹಿತರು ಮಾತನಾಡಿದ್ದಾರೆ. ಅವರು ಮಾತನಾಡಬಾರದು ಎಂಬ ನಿಯಮವಿಲ್ಲ, ಆದರೆ ಅವರು ಮಾತನಾಡಿರುವುದರಲ್ಲಿ ಅಬ್ಜಕ್ಷನಲ್ ಕಂಟೆಂಟ್ ಇದೆಯೋ ಅದನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಅವರೇ ಅದರ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಶ್ರೀನಿವಾಸ್ ಗೌಡ ಹೇಳಿದ್ರು.

ನಿಷ್ಠಾವಂತ ಮತ್ತು ಪ್ರಾಮಾಣಿಕ ಪಿಎಸ್ ಐ ಕಿರಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮನೆಯವರು ಹೇಳುವ ಪ್ರಕಾರ ಮತ್ತು ಕೆಲಸ ನಿರ್ವಹಿಸಿದ ಸ್ಥಳಗಳಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಆದರೆ ಪಿಎಸ್ ಐ ಆತ್ಮಹತ್ಯೆ ಪ್ರಕರಣ ಮಾತ್ರ ನಿಗೂಢವಾಗಿದೆ. ಉನ್ನತ ಮಟ್ಟದ ತನಿಖೆ ನಡೆಸಿ ಸರಿಯಾಗಿ ತನಿಖೆಯಾದ್ರೆ ಸತ್ಯ ಹೊರಬೀಳಲಿದೆ.

ಒಟ್ಟಾರೆ ಒಬ್ಬ ಪಿಎಸ್ ಐ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂದರೆ ಅದೆಂತಹ ಒತ್ತಡವಿತ್ತೋ ಅಥವಾ ಏನಾದ್ರೂ ಬೇರೆ ಕಾರಣ ಇದೆಯೋ ಗೊತ್ತಾಗುತ್ತಿಲ್ಲ. ಕೇವಲ ಸಚಿವರು ಭೇಟಿ ನೀಡಿ ಸಾಂತ್ವನ ಹೇಳಿದ್ರೆ ಸಾಲದು, ಆದರೆ ಸರ್ಕಾರದಿಂದ ಬರುವ ಸವಲತ್ತನ್ನು ಮೃತರ ಕುಟುಂಬಕ್ಕೆ ಪ್ರಾಮಾಣಿಕವಾಗಿ ತಲುಪಿಸುವುದು ಸಚಿವರ ಮತ್ತು ಸರ್ಕಾರದ ಜವಾಬ್ದಾರಿಯಾಗಿದೆ.
Published by:Latha CG
First published: