ಜಾತಿ ಆಧಾರದಲ್ಲಿ ಮೀಸಲಾತಿ ಕೇಳುವುದಕ್ಕೆ ನನ್ನ ವಿರೋಧವಿದೆ; ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

ಮೀಸಲು ಪಡೆದು ಉನ್ನತ‌ ಸ್ಥಾನಕ್ಕೆ ತಲುಪಿದವರು ತನ್ನ ಸಮಾಜದ ಏಳಿಗೆಯನ್ನು ಮರೆಯುತ್ತಾರೆ. ಸಮಾಜ ಹಿಂದೆ ಬಿದ್ದು, ವ್ಯಕ್ತಿ ಮಾತ್ರ ಮುಂದೆ ಹೋಗುವಂತಹ ವ್ಯವಸ್ಥೆಗಳು ಆಗುತ್ತಿವೆ

ಡಿ ವಿ ಸದಾನಂದ ಗೌಡ

ಡಿ ವಿ ಸದಾನಂದ ಗೌಡ

  • Share this:
ಪುತ್ತೂರು (ಫೆ. 20):  ಪಂಚಮಸಾಲಿ ಸಮಾಜಕ್ಕೆ‌ ಮೀಸಲಾತಿ ನೀಡುವ ವಿಚಾರ  ಈವರೆಗೆ ಕೇಂದ್ರದ ಗಮನಕ್ಕೆ ಬಂದಿಲ್ಲ. ಅಲ್ಲದೇ ಈ ವಿಚಾರದ ಬಗ್ಗೆ ಕೇಂದ್ರ ನಾಯಕರು ಈವರೆಗೂ ಚರ್ಚೆಯನ್ನೂ ನಡೆಸಿಲ್ಲ. ಜಾತಿ ಆಧಾರದಲ್ಲಿ ಮೀಸಲಾತಿ ಕೊಡುವುದಕ್ಕೆ  ವೈಯಕ್ತಿಕವಾಗಿ ನನ್ನ ವಿರೋಧವಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಯಾರು ಆರ್ಥಿಕವಾಗಿ ಹಿಂದುಳಿದಿದ್ದಾರೋ ಅವರಿಗೆ ಅವಕಾಶಗಳು ದೊರೆಯಬೇಕಿದೆ ಎನ್ನುವುದು ನನ್ನ ಅಪೇಕ್ಷೆಯಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಜಾತಿ ಆಧಾರದಲ್ಲಿ ಮೀಸಲಾತಿ ನೀಡಿದಲ್ಲಿ ಸಾಮಾಜಿಕ ಪರಿವರ್ತನೆ ಕಷ್ಟಸಾಧ್ಯ. ಇತ್ತೀಚಿನ ದಿನಗಳಲ್ಲಿ ಜಾತಿ ಆಧಾರಿತ ಮೀಸಲು ಕೇಳುವ ಹೊಸ ಪ್ರಕ್ರಿಯೆ ಶುರುವಾಗಿದ್ದು, ಈ ವ್ಯವಸ್ಥೆ ಸಾಮಾಜಿಕ ಪರಿವರ್ತನೆಗೆ ಮಾರಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಮೀಸಲು ಪಡೆದು ಉನ್ನತ‌ ಸ್ಥಾನಕ್ಕೆ ತಲುಪಿದವರು ತನ್ನ ಸಮಾಜದ ಏಳಿಗೆಯನ್ನು ಮರೆಯುತ್ತಾರೆ. ಸಮಾಜ ಹಿಂದೆ ಬಿದ್ದು, ವ್ಯಕ್ತಿ ಮಾತ್ರ ಮುಂದೆ ಹೋಗುವಂತಹ ವ್ಯವಸ್ಥೆಗಳು ಆಗುತ್ತಿವೆ. ಇಂಥ ಘಟನೆಗಳು ಸಾಕಷ್ಟು ನಮ್ಮ ಮುಂದಿದೆ. ಮೀಸಲಾತಿ ವಿಚಾರಕ್ಕೆ‌ ಸಂಬಂಧಿಸಿದಂತೆ ಕೇಂದ್ರದ ಹಿರಿಯರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ನನ್ನ ಅಭಿಪ್ರಾಯವನ್ನು ಕೇಂದ್ರ ನಾಯಕರ ಗಮನಕ್ಕೂ ತರಲಿದ್ದೇನೆ ಎಂದರು.

ಇದನ್ನು ಓದಿ: ನಮ್ಮೂರಿನಲ್ಲೂ ರಾಮ ಮಂದಿರ ಕಟ್ಟಿಸುತ್ತಿದ್ದೇನೆ; ಮಾಜಿ ಸಿಎಂ ಸಿದ್ದರಾಮಯ್ಯ

ದೇಶದಲ್ಲಿ ಇಂಧನ ಬೆಲೆ ಹೆಚ್ಚುತ್ತಿದೆ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಕೆಲವೊಂದು ವ್ಯವಸ್ಥೆಗಳನ್ನು ಕಲ್ಪಿಸಲು ಈ ರೀತಿಯ ಹೆಚ್ಚಳ ಅನಿವಾರ್ಯವಾಗಿದೆ. ದೇಶದ 8 ಕೋಟಿ ಬಡ ಕುಟುಂಬಗಳಿಗೆ ಕೇಂದ್ರ ಉಚಿತವಾಗಿ ಗ್ಯಾಸ್ ವಿತರಿಸುತ್ತಿದೆ.ಈ ವ್ಯವಸ್ಥೆಗೆ ಹಣ ಹೊಂದಿಸುವ ಅಗತ್ಯವಿದೆ. ಈ ಕಾರಣಕ್ಕಾಗಿ ಇದ್ದವರಿಂದ ಇಲ್ಲದವರಿಗೆ ಕೊಡುವ ಪ್ರಯತ್ನ ಮಾಡಲಾಗುತ್ತಿದೆ. ಇಂಧನ ಬೆಲೆ ಹೆಚ್ಚಳ ವಿಚಾರವನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಿದೆ. ಎಕ್ಸೈಸ್ ಡ್ಯೂಡಿ ಸೇರಿದಂತೆ ಇತರ ಮೂಲಗಳ ಮೂಲಕ ಬೆಲೆ ಏರಿಕೆ ತಡೆಗೆ ಪ್ರಯತ್ನ ನಡೆಯಲಿದೆ. ಕೇಂದ್ರ‌ ಸರಕಾರ ಈಗಾಗಲೇ ಈ ಬಗ್ಗೆ ಕಾರ್ಯಪ್ರವೃತ್ತವಾಗಿದೆ ಎಂದರು.

ಬ್ಯಾಂಕ್ ಗಳಲ್ಲಿ ಎನ್.ಪಿಎ ಅಕೌಂಟ್ ರಿಸ್ಟ್ರಚರ್ ಮಾಡುವಂತೆ ಆರ್.ಬಿ.ಐ ಆದೇಶ. ಬ್ಯಾಂಕ್ ಗಳ ಕಡೆಗಣನೆಗೆ ಪ್ರತಿಕ್ರಿಯಿಸಿ, ಸಾಲ ಪಡೆದು ಕಟ್ಟಲಾಗದೆ ಆತ್ಮಹತ್ಯೆ ಮಾಡುವುದು ಒಳ್ಳೆಯ ನಿರ್ಧಾರವಲ್ಲ. ಕೊಟ್ಟ ಸಾಲವನ್ನು ಹಿಂದಿರುಗಿಸುವಂತೆ ಕೇಳುವುದು ಬ್ಯಾಂಕ್ ಗಳ ಜವಾಬ್ದಾರಿ. ಪುತ್ತೂರಿನ ಘಟನೆಯಲ್ಲೂ ಇದೇ ಆಗಿದೆ. ಮಹಿಳೆ ಆತ್ಮಹತ್ಯೆ ವಿಚಾರದಲ್ಲಿ ಯಾವುದು ನ್ಯಾಯ, ಯಾವುದು ಸರಿ ಎನ್ನುವ ಬಗ್ಗೆ ನನಗೆ ಮಾಹಿತಿಯಿಲ್ಲ. ಅವರು ಸಾಲಪಡೆದ ವ್ಯಕ್ತಿ ಉದ್ಯಮ‌ ಮಾಡಿ ಅಭಿವೃದ್ಧಿ ಹೊಂದುವಂತೆ ಮಾಡಲು ಬ್ಯಾಂಕ್ ಸಾಲ ನೀಡುತ್ತದೆ. ಅದನ್ನು ಸರಿಯಾಗಿ ಕಟ್ಟದೇ ಹೋದಲ್ಲಿ ಬ್ಯಾಂಕುಗಳು ದಿವಾಳಿಯಾಗುತ್ತದೆ. ಪುತ್ತೂರಿನಂತ ಘಟನೆ ನಡೆದ ಬಳಿಕ ಬ್ಯಾಂಕ್ ಗಳು ಸಾಲವನ್ನು ಕೊಡಲು ಹಿಂದೇಟು ಹಾಕುವ ಸಾಧ್ಯತೆಯೂ ಇದೆ. ಸಾಲ ಪಡೆದವನ ಸಾಲಕ್ಕೆ ರಿಲ್ಯಾಕ್ಷೇಷನ್ ಹಾಗೂ ಒನ್ ಟೈಂ ಸೆಟಲ್ಮೆಂಟ್ ಬಗ್ಗೆ ಕೇಂದ್ರ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
Published by:Seema R
First published: