ಸಂಘ ಪರಿವಾರ ಜಾತಿವಾದಿಯೂ ಅಲ್ಲ, ದೇಶದ್ರೋಹಿಯೂ ಅಲ್ಲ; ಸಿದ್ದರಾಮಯ್ಯ ಆರೋಪಕ್ಕೆ ಸಿ.ಟಿ. ರವಿ ಆಕ್ರೋಶ
ಸಂಘ ಹೇಳಿಕೊಡೋದು ದೇಶಭಕ್ತಿ ಹಾಗೂ ಸಂಸ್ಕಾರವನ್ನು. ಟೀಕೆ ಮಾಡುವವರನ್ನು ಹತ್ಯೆ ಮಾಡಬೇಕೆಂಬುದು ಸಂಘದ ಮನೋಭಾವವಾಗಿದ್ದರೆ ಬಹಳ ಜನ ಭೂಮಿ ಮೇಲೆ ಇರುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರು: ಸಂಘ ಪರಿವಾರದವರು ಕೊಲೆ ಆರೋಪಿಗಳು ಎಂದು ಟ್ವಿಟ್ ಮಾಡಿರುವ ಸಿದ್ದರಾಮಯ್ಯನವರೇ, ನೀವೇ ಐದು ವರ್ಷ ಅಧಿಕಾರದಲ್ಲಿದ್ದಿರಿ. ಸಂಘ ಪರಿವಾರ ಯಾವುದಾದರೂ ಹತ್ಯೆಯಲ್ಲಿ ಭಾಗಿಯಾಗಿದ್ದರೆ, ಸಂಘವನ್ನು ನಿಷೇಧ ಮಾಡಲು ಶಿಫಾರಸು ಮಾಡಬಹುದಿತ್ತು. ಆಗ ನಿಮಗೆ ಬ್ಯಾಟರಿ ಇರಲಿಲ್ವಾ? ಎಂದು ಸಚಿವ ಸಿ.ಟಿ. ರವಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಟುವಾಗಿ ಟೀಕಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿರೋ ಸಿ.ಟಿ. ರವಿ, ವಯಸ್ಸಾದ ಮೇಲೆ ಪ್ರಬುದ್ಧತೆ ಬರಬೇಕು. ಮನಸ್ಸು ಪಕ್ವ ಆಗಬೇಕು. ಪೂರ್ವಾಗ್ರಹ ಪೀಡಿತ ಮನೋಭಾವನೆಯಿಂದ ಹೊರಬರಬೇಕೆಂದು ಮಾತಿನಲ್ಲಿ ತಿವಿದಿದ್ದಾರೆ. ಸಂಘವನ್ನು ನೀವು ಎಷ್ಟು ಹತ್ತಿರದಿಂದ ನೋಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ನಾನು ಸಂಘದ ಸ್ವಯಂಸೇವಕ. ಹಾಗಾಗಿಯೇ ಶಾಸಕ, ಸಚಿವನಾಗಿರೋದು. ನರೇಂದ್ರ ಮೋದಿಯವರು ಪ್ರಧಾನಿಯಾಗಿರೋದು. ಸಂಘ ಹೇಳಿಕೊಡೋದು ದೇಶಭಕ್ತಿ ಹಾಗೂ ಸಂಸ್ಕಾರವನ್ನು. ಟೀಕೆ ಮಾಡುವವರನ್ನು ಹತ್ಯೆ ಮಾಡಬೇಕೆಂಬುದು ಸಂಘದ ಮನೋಭಾವವಾಗಿದ್ದರೆ ಬಹಳ ಜನ ಭೂಮಿ ಮೇಲೆ ಇರುತ್ತಿರಲಿಲ್ಲ. ಟೀಕಿಸಿಯೂ ಉಳಿದಿದ್ದಾರೆಂದರೆ ಸಂಘ ಹತ್ಯೆ ರಾಜಕಾರಣದ ಮೇಲೆ ನಂಬಿಕೆ ಇಟ್ಟಿಲ್ಲ ಎಂದು ಅರ್ಥ ಎಂದಿದ್ದಾರೆ.
ಗಾಂಧೀಜಿಯ ಹತ್ಯೆ ಆರೋಪವನ್ನು ನಿಮ್ಮ ಕಾಂಗ್ರೆಸ್ ಮುಖಂಡರು ಸಂಘದ ಮೇಲೆ ಹಾಕಿದ್ದರು. ಅಂದಿನ ಸರ್ಕಾರವೇ ನೇಮಕ ಮಾಡಿದ್ದ ಕಪೂರ್ ಕಮಿಷನ್ ಗಾಂಧಿ ಹತ್ಯೆಗೂ ಆರ್.ಎಸ್.ಎಸ್.ಗೂ ಸಂಬಂಧವಿಲ್ಲ ಎಂದಿತ್ತು. ನಿಮ್ಮ ರಾಜಕೀಯ ತೆವಲಿಗೆ ದೇಶಭಕ್ತ ಸಂಘಟನೆ ಮೇಲೆ ಸುಳ್ಳು ಆರೋಪ ಮಾಡುವ ಕೆಲಸ ಮಾಡಬೇಡಿ. ಸಂಘ ಜಾತಿವಾದಿಯೂ ಅಲ್ಲ. ದೇಶದ್ರೋಹಿಯೂ ಅಲ್ಲ. ಸಂಘವನ್ನ ಟೀಕಿಸುವ ಭರದಲ್ಲಿ ದೇಶ ಒಡೆಯುವ ಸಂಚು ರೂಪಿಸುವ ಮನೋಭಾವನೆ ಇರುವವರಿಗೆ ಬೆಂಬಲಿಸುವ ಪಾಪದ ಕೆಲಸಕ್ಕೆ ಹೋಗಬೇಡಿ, ಅದಕ್ಕೆ ಬಲಿಯಾಗಬೇಡಿ ಎಂದು ಸಲಹೆ ನೀಡಿದ್ದಾರೆ.
ನಿಮ್ಮ ಮಾಧ್ಯಮ ನಿರ್ವಹಣೆ ಮಾಡಿಕೊಡುವ ಕೆಲವರು ಹುಟ್ಟುವಾಗಲೇ ಸಂಘ ದ್ವೇಷಿಯಾಗಿ ಹುಟ್ಟಿದ್ದಾರೆ. ಅಂಥವರ ಕೈಗೆ ಟ್ವಿಟರ್ ಕೊಟ್ಟು ನೀವು ಕೆಟ್ಟು ಹೋಗಬೇಡಿ ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ