C.P.Yogeshwar: 'ಪರೀಕ್ಷೆ' ಬರೆದು 'ರಿಸಲ್ಟ್' ನೋಡಲು ದೆಹಲಿಗೆ ಬಂದ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್

ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಬಗ್ಗೆ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸಚಿವ ಸಿ.ಪಿ.ಯೋಗೇಶ್ವರ್​​

ಸಚಿವ ಸಿ.ಪಿ.ಯೋಗೇಶ್ವರ್​​

  • Share this:
ನವದೆಹಲಿ(ಜೂ. 26): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುತ್ತ ನಡೆಯುತ್ತಿರುವ ಬೆಳವಣಿಗೆಗಳಲ್ಲಿ ಕೇಳಿ ಬರುತ್ತಿರುವ ಬಹಳ ಮುಖ್ಯವಾದ ಹೆಸರು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್​ ಹೆಸರು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚಿಸುವ ವಿಷಯದಲ್ಲೂ ಕೇಳಿಬಂದಿತ್ತು. ಸರ್ಕಾರದ ಭಾಗವಾಗಿರುವ ಅವರು ಇತ್ತೀಚೆಗೆ ಹಸ್ತಕ್ಷೇಪದ ಬಗ್ಗೆ ಮಾತನಾಡಿ ನೇರವಾಗಿ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ಬಾಣ ಬಿಟ್ಟಿದ್ದರು. ಈಗ 'ಪರೀಕ್ಷೆ ಬರೆದಿದ್ದೇವೆ, ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ' ಎಂದು ಹೇಳುವ ಮೂಲಕ ನಾಯಕತ್ವ ಬದಲಾವಣೆಯನ್ನು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.

ಇಂಥ ಸಿ.ಪಿ. ಯೋಗೇಶ್ವರ್ ನಿನ್ನೆ (ಜೂನ್ 25) ಬೆಳಿಗ್ಗೆ ಬೆಂಗಳೂರಿನಲ್ಲಿ 'ಪರೀಕ್ಷೆ ಬರೆದಿದ್ದೇವೆ ರಿಸಲ್ಟ್ ಗಾಗಿ ಕಾಯುತ್ತಿದ್ದೇವೆ ಎಂದು ಹೇಳಿಕೆ ಕೊಟ್ಟು ರಾತ್ರಿ ದಿಢೀರನೆ ದೆಹಲಿಗೆ ಬಂದಿದ್ದಾರೆ. ಇತ್ತೀಚಿಗೆ ಉಸ್ತುವಾರಿ ಅರುಣ್ ಸಿಂಗ್ ಅವರು ಕರ್ನಾಟಕಕ್ಕೆ ನೀಡಿದ್ದ ಭೇಟಿಯನ್ನು ಪರೀಕ್ಷೆಗೆ ಹೋಲಿಕೆ ಮಾಡಿದ್ದಾರೆ.  ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವೇ ರಿಸಲ್ಟ್ ಎಂದು ಭಾವಿಸಿದ್ದಾರೆ. ಅಂಥ ರಿಸಲ್ಟ್ ನೋಡಲೆಂದು ದೊಡ್ಡ ಕುತೂಹಲದೊಂದಿಗೆ ದೆಹಲಿಗೆ ಧಾವಿಸಿದ್ದಾರೆ.

ಇದನ್ನೂ ಓದಿ:Astrology: ಧನು ರಾಶಿಯವರಿಗೆ ವ್ಯಾಪಾರದಲ್ಲಿ ಹಿನ್ನಡೆ ಸಾಧ್ಯತೆ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

ಎಷ್ಟೇ ಮುಚ್ಚಿಟ್ಟುಕೊಂಡರೂ ಅವರು ದೆಹಲಿಗೆ ಬಂದಿರುವುದು ಹೈಕಮಾಂಡ್ ನಾಯಕರ ಭೇಟಿಗಾಗಿ ಎಂಬುದು ಸುಳ್ಳಲ್ಲ. ಇದೇ ಪ್ರಯತ್ನದ ಭಾಗವಾಗಿ ಕಳೆದ ಬಾರಿ ಅವರು ದೆಹಲಿಗೆ ಬಂದಿದ್ದಾಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿಗೆ ಪ್ರಯತ್ನ ಮಾಡಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಈಗ ಮತ್ತೆ ಪ್ರಯತ್ನ ಮಾಡಲಿದ್ದಾರೆ. ಭೇಟಿ ವೇಳೆ ನಾಯಕತ್ವ ಬದಲಾವಣೆ ಬಗ್ಗೆ ಚರ್ಚಿಸಲಿದ್ದಾರೆ. ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಬಗ್ಗೆ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ನಿನ್ನೆ ಬೆಂಗಳೂರಿನಲ್ಲಿ ಮಾತನಾಡಿದ್ದ ಸಿ.ಪಿ. ಯೋಗೇಶ್ವರ್, ನಮ್ಮ‌ ನೋವುಗಳನ್ನು ನಾಲ್ಕು‌ ಗೋಡೆಗಳ ಮಧ್ಯೆ ಹೇಳಿದ್ದೇವೆ. ನಾವು ಎಕ್ಸಾಮ್ ಬರೆದಿದ್ದೇವೆ. ರಿಸಲ್ಟ್ ಗೋಸ್ಕರ ಕಾಯುತ್ತಿದ್ದೇವೆ. ಉಸ್ತುವಾರಿ ಅರುಣ್ ಸಿಂಗ್ ಅವರು ಬಂದಾಗ ಎಕ್ಸಾಮ್ ಬರೆದಿದ್ದೆವು. ಆ ರಿಸಲ್ಟ್ ಬರಬೇಕಲ್ಲ, ಬಂದಾಗ ನೋಡೋಣ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ನನಗೆ ಗೌರವವಿದೆ. ಅವರು ಇನ್ನೂ ಎರಡು ವರ್ಷ ಇರಲಿ, ತಪ್ಪೇನೂ ಇಲ್ಲ. ನಮ್ಮ ನೋವು, ಸಮಸ್ಯೆ ಮೊದಲೇ ಹೇಳಿದ್ದೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟಿಸಬೇಕು. ಇದನ್ನು ನಾವು ಎಲ್ಲಿ ಹೇಳಬೇಕೋ ಹೇಳಿದ್ದೇವೆ. ಅವರು ಇದರ ಬಗ್ಗೆ ನಿರ್ಧಾರ ಮಾಡುತ್ತಾರೆ. ನಮ್ಮ ಹಿರಿಯರು ತೀರ್ಮಾನ ಮಾಡ್ತೇವೆ ಎಂದು ತಿಳಿಸಿದ್ದಾರೆ. ಅವರ ನಿರ್ಧಾರವನ್ನು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದರು.
Published by:Latha CG
First published: