CP Yogeshwar: ಬಿಜೆಪಿ ಮೂರು ಗುಂಪಿನ ಸರ್ಕಾರ; ಸ್ವಪಕ್ಷದ ಬಗ್ಗೆ ಹೀಗ್ಯಾಂಕದ್ರು ಯೋಗೇಶ್ವರ್ ?

ಇದು ಶುದ್ಧ ಬಿಜೆಪಿ ಸರ್ಕಾರ ಆಗಿ ಉಳಿದಿಲ್ಲ.  ಮೂರು ಗುಂಪಿನ ಸರ್ಕಾರ ಆಗಿದೆ. ಮೂರು ರಾಜಕೀಯ ಪಕ್ಷಗಳು ಹೊಂದಾಣಿಕೆ ಮಾಡ್ಕೊಂಡಿವೆ. ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಜತೆ ಹೊಂದಾಣಿಕೆ ಮಾಡ್ಕೊಂಡಿದೆ ನಮ್ಮ ಸರ್ಕಾರ ಎಂದು ಸಿಪಿವೈ ಕಿಡಿಕಾರಿದರು.

ಸಚಿವ ಸಿ.ಪಿ.ಯೋಗೇಶ್ವರ್​​

ಸಚಿವ ಸಿ.ಪಿ.ಯೋಗೇಶ್ವರ್​​

 • Share this:
  ಬೆಂಗಳೂರು(ಮೇ 27): ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಕಾವೇರಿದ್ದು, ಹೆಚ್ಚು ಚರ್ಚೆಯಾಗುತ್ತಿದೆ.  ಈ ನಡುವೆಯೇ ಸಿಎಂ ಬಿಎಸ್​ ಯಡಿಯೂರಪ್ಪನವರ ವಿರುದ್ಧ ಸಹಿ ಸಂಗ್ರಹಿಸಿ ದೆಹಲಿಗೆ ಹೋಗಿದ್ದ ಬಿಜೆಪಿ ಬಂಡಾಯ ನಾಯಕರಿಗೆ ನಿರಾಸೆಯಾಗಿದೆ. ಕರ್ನಾಟಕದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ. ಈ ಬೆನ್ನಲ್ಲೇ ಇಂದು ವಿಧಾನಸೌಧದಲ್ಲಿ ಸಚಿವ ಸಿ.ಪಿಯೋಗೇಶ್ವರ್​ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

  ನಾನು ದೆಹಲಿಗೆ ಹೋಗ್ತಾ ಇರ್ತೀನಿ, ಬರ್ತಾ ಇರ್ತೀನಿ. ಎಲ್ಲಾನೂ ಮಾಧ್ಯಮಗಳ ಮುಂದೆ ಹೇಳೋಕೆ ಆಗೋದಿಲ್ಲ. ಈ ಚರ್ಚೆ ಯಾಕೆ ಹುಟ್ಟಿತು ಅಂತ ನನಗೆ ಗೊತ್ತಿಲ್ಲ. ನಾನು ದೆಹಲಿಗೆ ಹೋಗೋದು ನಾಯಕತ್ವದ ಬದಲಾವಣೆ ವಿಚಾರಕ್ಕಾಗಿಯೇ ಎಂದು ಯಾಕೆ ತಿಳಿದುಕೊಳ್ಳುತ್ತಿದ್ದಾರೋ ಗೊತ್ತಿಲ್ಲ.  ನನಗೂ ವೈಯಕ್ತಿಕ ಸಮಸ್ಯೆ ಇರುತ್ತೆ. ಅದಕ್ಕಾಗಿ ಹೋಗ್ತಿನಿ, ಬರ್ತೀನಿ. ಕಳೆದ ವಾರ ಕೂಡಾ ಹೋಗಿದ್ದೆ. ಅದನ್ನು ಯಾಕೆ ಕೇಳ್ತಿದ್ದೀರಾ ಎಂದು ಮಾಧ್ಯಮಗಳ ಮೇಲೆ ಹರಿಹಾಯ್ದರು.

  ಮುಂದುವರೆದ ಅವರು, ಆ ತರ ನನ್ನ ಗಮನಕ್ಕೆ ಬಂದಿಲ್ಲ. ನನಗೆ ನಮ್ಮ ಪಕ್ಷ ಎಂಎಲ್ಸಿ ಮಾಡಿದೆ, ಮಂತ್ರಿ ಮಾಡಿದೆ. ಅದರ ಬಗ್ಗೆ ಗೌರವ ಇದೆ. ಮುಂದಿನ ಚುನಾವಣೆಯಲ್ಲಿ ನಾನು ಗೆಲ್ಲಬೇಕು ಎಂದಿದ್ದೇನೆ, ಅದಕ್ಕಾಗಿ ಹೋಗ್ತೇನೆ. ಕೆಲವು ವಿಚಾರಗಳನ್ನು ನಾವು ಮಾಧ್ಯಮಗಳ ಮುಂದೆ ಹಂಚಿಕೊಳ್ಳೋಕೆ ಆಗಲ್ಲ ಎಂದು ಪುನರುಚ್ಛರಿಸಿದರು.

  ನಾನು ಸಚಿವ. ನನ್ನ ಸಚಿವಗಾರಿಕೆಯನ್ನು ನನ್ನ‌ ಮಗ ಮಾಡೋಕೆ ಆಗುತ್ತಾ? ಎಂದು  ಪರೋಕ್ಷವಾಗಿ ವಿಜೇಯೇಂದ್ರ ಹಸ್ತಕ್ಷೇಪಕ್ಕೆ ಯೋಗೇಶ್ವರ್ ಕಿಡಿಕಾರಿದರು. ನನ್ನ ಕೆಲಸದಲ್ಲಿ ಬೇರೆಯವರಯ ಮೂಗು ತೂರಿಸಿದರೆ ಹೇಗೆ? ಎಂದು ಪ್ರಶ್ನಿಸಿದರು.

  ಇದನ್ನೂ ಓದಿ:CM BS Yediyurappa: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ; ನನ್ನ ಮುಂದೆ ಇರೋದು ಕೋವಿಡ್​ ನಿರ್ವಹಣೆ ಮಾತ್ರ ಎಂದ ಸಿಎಂ ಯಡಿಯೂರಪ್ಪ

  ನನ್ನ ವೈಯಕ್ತಿಕ ವಿಚಾರವನ್ನು  ನಮ್ಮ ‌ನಾಯಕರ ಮುಂದೆ ಹೇಳಿಕೊಂಡಿದ್ದೇನೆ. ಸಿಎಂ ಬದಲಾವಣೆ ವಿಚಾರ ಬಂದಾಗ, ನಮ್ಮ ಬೆಂಬಲ ಇದೆಯೋ ಇಲ್ಲವೋ ಅನ್ನೋದನ್ನು ನಾಲ್ಕು ಗೋಡೆ ಮಧ್ಯೆ ತಿಳಿಸುತ್ತೇನೆ ಎಂದು ಹೇಳಿ ಅಂತರ ಕಾಯ್ದುಕೊಂಡರು.

  ಪಕ್ಷದ ಕೆಲವು ಸ್ನೇಹಿತರು ನನ್ನ ಬಗ್ಗೆ ಮಾತಾಡ್ತಿರೋದು ಗೊತ್ತು, ಅದನ್ನ ಯಾರು ಮಾತಾಡಿಸ್ತಿರೋದು ಅಂತಲೂ ಗೊತ್ತು. ಯಾರ ಕುಮ್ಮಕ್ಕಿದೆ ಅಂತಲೂ ಗೊತ್ತು. ಅವರಿಗೆ ಮುಂದಿನ ದಿನಗಳಲ್ಲಿ ಉತ್ತರ ಕೊಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

  ನನ್ನ ದೆಹಲಿ ಭೇಟಿ ಯಾಕೆ ಇಷ್ಟೊಂದು ದೊಡ್ಡ ಸುದ್ದಿಯಾಯ್ತೋ ಗೊತ್ತಿಲ್ಲ. ನಾನು ಬೆಳಗ್ಗೆ ಹೋದೆ ಸಂಜೆ ಬಂದೆ. ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆ. ಅರವಿಂದ ಬೆಲ್ಲದ ಯಾಕೆ ದೆಹಲಿಗೆ ಹೋಗಿದ್ರೋ ಗೊತ್ತಿಲ್ಲ ಎಂದು ಹೇಳುವ ಮೂಲಕ ಜಾರಿಕೊಳ್ಳುವ ಪ್ರಯತ್ನ ಮಾಡಿದರು.

  ಮುಂದುವರೆದ ಸಿಪಿವೈ, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದು ಶುದ್ಧ ಬಿಜೆಪಿ ಸರ್ಕಾರ ಆಗಿ ಉಳಿದಿಲ್ಲ.  ಮೂರು ಗುಂಪಿನ ಸರ್ಕಾರ ಆಗಿದೆ. ಮೂರು ರಾಜಕೀಯ ಪಕ್ಷಗಳು ಹೊಂದಾಣಿಕೆ ಮಾಡ್ಕೊಂಡಿವೆ. ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಜತೆ ಹೊಂದಾಣಿಕೆ ಮಾಡ್ಕೊಂಡಿದೆ ನಮ್ಮ ಸರ್ಕಾರ ಎಂದು ಕಿಡಿಕಾರಿದರು. ಮುಖ್ಯಮಂತ್ರಿಗಳ ಬದಲಾವಣೆ ನನ್ನ ಮೂಲ ಉದ್ದೇಶ ಅಲ್ಲ. ಅಷ್ಟೊಂದು ಶಕ್ತಿ ನನಗೆ ಇಲ್ಲ. ಆ ಅಭಿಪ್ರಾಯವೂ ನನಗೆ ಇಲ್ಲ ಎಂದರು.

  ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ದೆಹಲಿಗೆ ದಂಡಯಾತ್ರೆ ಕೈಗೊಂಡಿದ್ದ ಸಚಿವ ಸಿ.ಪಿ ಯೋಗೇಶ್ವರ್‌, ಶಾಸಕ ಅರವಿಂದ ಬೆಲ್ಲದ್ ಅವರಿಗೆ ಹೈಕಮಾಂಡ್ ನಾಯಕರು ಸಮಯ ನೀಡಿರಲಿಲ್ಲ. ಬಿಜೆಪಿ ನಾಯಕರಾದ ಅರುಣ್ ಸಿಂಗ್, ಜೆಪಿ ನಡ್ಡಾ ಸೇರಿ ಹಲವು ನಾಯಕರ ಭೇಟಿಗೆ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ, ನಿರಾಸೆಯಿಂದ ರಾಜ್ಯ ಬಿಜೆಪಿ ನಾಯಕರು ದೆಹಲಿಯಿಂದ ವಾಪಾಸಾಗಿದ್ದಾರೆ.
  Published by:Latha CG
  First published: