news18-kannada Updated:March 7, 2021, 1:59 PM IST
ಸಿ.ಪಿ. ಯೋಗೇಶ್ವರ್
ಮೈಸೂರು(ಮಾ.07): ಕರ್ನಾಟಕ ಪ್ರವಾಸೋದ್ಯಮದ ಕೇಂದ್ರಸ್ಥಾನ, ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದೇ ಖ್ಯಾತಿ ಗಳಿಸಿರುವ ಅರಮನೆ ನಗರಿ ಮೈಸೂರಿನ ಪ್ರವಾಸೋದ್ಯಮವನ್ನ ಬ್ರಾಂಡ್ ಮೈಸೂರು ಹೆಸರಿನಲ್ಲಿ ಅಭಿವೃದ್ದಿಗೊಳಿಸುವ ಹೊಸ ಯೋಜನೆಯೊಂದನ್ನ, ನೂತನ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಪ್ರಸ್ತಾಪಿಸಿದ್ದಾರೆ. ಸಚಿವರಾದ ಬಳಿಕ ಎರಡನೆ ಬಾರಿ ಮೈಸೂರಿಗೆ ಭೇಟಿ ನೀಡಿದ್ದ ಸಿ.ಪಿ.ಯೋಗೇಶ್ವರ್ ಈ ಮಾಹಿತಿ ನೀಡಿದ್ದು, ಮೈಸೂರು ಎಂಬ ಹೆಸರಿನಲ್ಲೇ ಹಲವು ಸ್ವಾರಸ್ಯಕರ ಸಂಗತಿಗಳಿವೆ. ಪ್ರವಾಸೋದ್ಯಮಕ್ಕೆ ಮೈಸೂರಿನ ಪರಂಪರೆ ಇತಿಹಾಸ ಪರಿಚಯಿಸಿಲು ಬ್ರ್ಯಾಂಡ್ ಮೈಸೂರು ಹೆಸರಿನಲ್ಲಿ ಹೊಸ ರೀತಿಯ ಮೈಸೂರಿನ ಪ್ರವಾಸೋದ್ಯಮವನ್ನ ಮತ್ತಷ್ಟು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ. ಇದೇ ಕಾರಣಕ್ಕೆ ಈ ಬಾರಿಯ ಬಜೆಟ್ನಲ್ಲೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂದು ಸಿಎಂ ಯಡಿಯೂರಪ್ಪ ಬಳಿಯೂ ಮನವಿ ಮಾಡಿದ್ದೇನೆ ಅಂತ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಇದೇ ಕಾರಣಕ್ಕಾಗಿ ಇಂದು ಮೈಸೂರು ಅರಮನೆಗೆ ಭೇಟಿ ನೀಡಿದ್ದ ಸಿ.ಪಿ.ಯೋಗೇಶ್ವರ್ ಅರಮನೆ ಮಂಡಳಿಯಲ್ಲೇ ಸಭೆ ನಡೆಸಿದರು. ಕಳೆದ ಬಾರಿ ಮೈಸೂರಿಗೆ ಭೇಟಿ ನೀಡಿದ್ದ ಸಿಪಿವೈ, ಹೆಲಿ ಟೂರಿಸಂ ಮಾಡುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದ್ದರು. ಇದೀಗ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಡಿ, ಬ್ರ್ಯಾಂಡ್ ಮೈಸೂರು ಸೃಷ್ಟಿ ಮಾಡಿ, ಮೈಸೂರಿನ ಪ್ರಖ್ಯಾತ ಮೈಸೂರು ಅರಮನೆ, ಮೈಸೂರು ಸಿಲ್ಕ್, ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಮಲ್ಲಿಗೆ, ಮೈಸೂರ್ ಪಾಕ್, ಮೈಸೂರು ಮಸಾಲದೋಸೆ ಹೀಗೆ ಹತ್ತು ಹಲವು ಮೈಸೂರು ಬ್ರಾಂಡ್ನ ಹೆಸರಿನಲ್ಲೇ ಪ್ರವಾಸೋದ್ಯಮದ ಹೊಸ ಆಯಾಮ ನೀಡುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ಮೈಸೂರು ಜಿಲ್ಲಾಡಳಿತ, ಮೈಸೂರು ಅರಮನೆ ಮಂಡಳಿ, ಮೈಸೂರು ಮೃಗಾಲಯದ ಜೊತೆ ಸಭೆ ನಡೆಸಿ ಮುಂದಿನ ಹಂತದ ನಿರ್ಧಾರ ಮಾಡುತ್ತೇವೆ ಎಂದು ಸ್ವತಃ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳನ್ನು GSTಗೆ ಸೇರಿಸಿದರೆ ಅದು ರಾಜ್ಯಗಳ ಪಾಲಿಗೆ ಮರಣಶಾಸನವಾಗಲಿದೆ; ಎಚ್.ಡಿ.ಕುಮಾರಸ್ವಾಮಿ
ಮೈಸೂರು ಪ್ರವಾಸೋದ್ಯಮದ ಅಭಿವೃದ್ದಿಗಾಗಿ ಮೈಸೂರಿನ ಗಣ್ಯರಿಂದಲೇ ಸಲಹೆ ಪಡೆಯಲು ಮುಂದಾಗಿರುವ ಸಚಿವ ಸಿ.ಪಿ.ಯೋಗೇಶ್ವರ್, ಪ್ರವಾಸಿಗರು ಹೆಚ್ಚು ಭೇಟಿ ನೀಡುವ ಸ್ಥಳಗಳಿಗೆ ಖುದ್ದಿ ಭೇಟಿ ನೀಡಿ ಅವರಿಂದಲೇ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇಂದು ಮೈಸೂರು ಅರಮನೆಗೆ ಭೇಟಿ ನೀಡಿ ರಾಜವಂಶಸ್ಥೆ ಪ್ರಮೋದಾದೇವಿಯವರ ಜೊತೆ ಕುಶಾಲೋಪರಿ ಮಾತುಕತೆ ನಡೆಸಿದರು. ಹೆಲಿಟೂರಿಸಂ ವಿಚಾರವಾಗಿ ಹಳೆ ಹೆಲಿಪ್ಯಾಡ್ ಆಗಿದ್ದ ಲಲಿತಮಹಾಲ್ ಹೆಲಿಪ್ಯಾಡ್ ಅನ್ನ ಮತ್ತೆ ಬಳಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದರು.
ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದ ಸಿಪಿವೈ ಗಣಪತಿ ಆಶ್ರಮಕ್ಕೆ ದೇಶವಿದೇಶದಿಂದ ಬರುವ ಪ್ರವಾಸಿಗರ ಬಗ್ಗೆಯೂ ಮಾಹಿತಿ ಪಡೆದರು. ಕಳೆದ ವಾರ ಸುತ್ತೂರು ಮಠಕ್ಕೆ ಭೇಟಿ ನೀಡಿ ನಂತರ ರ್ಯಾಡಿಸನ್ ಬ್ಲೂ ಹೊಟೇಲ್ನಲ್ಲೆ ಸಭೆ ನಡೆಸಿದ್ದ ಸಚಿವರ ಯೋಗೇಶ್ವರ್ ಅಂಬಾರಿ ಹೆಸರಿನ ಡಬಲ್ ಡೆಕ್ಕರ್ ಬಸ್ಗಳಿಗೂ ಚಾಲನೆ ನೀಡಿದ್ದರು. ಇದೀಗ ಬ್ರಾಂಡ್ ಮೈಸೂರು ಹೆಸರಿನ ಈ ಹೊಸ ಪ್ರವಾಸೋಧ್ಯಮದ ಪ್ರಸ್ತಾಪದಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿಯಾಗುವ ಸಾಧ್ಯತೆ ಇದೆ.
ಇದೆ ವೇಳೆ ನಾನು ಮೈಸೂರು ಉಸ್ತುವಾರಿ ಸಚಿವನಾಗುವ ಉದ್ದೇಶದಿಂದ ಮೈಸೂರಿಗೆ ಬರುತ್ತಿಲ್ಲ, ಮೈಸೂರು ಪ್ರವಾಸೋದ್ಯಮವನ್ನ ಬ್ರಾಂಡ್ ಮೈಸೂರು ಹೆಸರಿನಲ್ಲಿ ಮಾಡಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಚರ್ಚೆಗಾಗಿ ಪದೇ ಪದೇ ಮೈಸೂರಿಗೆ ಬರುತ್ತಿದ್ದೇನೆ. ಇದನ್ನ ಹೊರತುಪಡಿಸಿ ಇನ್ಯಾವ ರಾಜಕೀಯ ಉದ್ದೇಶ ಇಲ್ಲ. ನಾನು ರಾಮನಗರ ಉಸ್ತುವಾರಿ ಕೊಡಿ ಎಂದು ಕೇಳಿದ್ದೇನೆ ಆದರೆ ಸಿಎಂ ಈ ಬಗ್ಗೆ ಇನ್ನು ಸ್ಪಷ್ಟಪಡಿಸಿಲ್ಲ ಎಂದು ತಿಳಿಸಿದರು.
Published by:
Latha CG
First published:
March 7, 2021, 1:59 PM IST