ಬಾಗಲಕೋಟೆ (ಜ. 09): ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗೆ ಆಗ್ರಹಿಸಿ ಜನವರಿ 14ರಿಂದ ಕೂಡಲ ಸಂಗಮ ಶ್ರೀ ನೇತೃತ್ವದಲ್ಲಿ ಪಾದಯಾತ್ರೆಗೆ ನಿರ್ಧರಿಸಲಾಗಿದೆ. ಈ ಬೆನ್ನಲ್ಲೇ ಪಾದಯಾತ್ರೆ ನಿರ್ಧಾರ ಕೈ ಬಿಡುವಂತೆ ಮನವೊಲಿಸಲು ಕಸರತ್ತು ನಡೆಸಿದೆ. ಸರ್ಕಾರದ ಪ್ರತಿನಿಧಿಯಾಗಿ ಸಚಿವ ಸಿಸಿ ಪಾಟೀಲ್ ಅವರೊಂದಿಗೆ ಕೂಡಲಸಂಗಮದಲ್ಲಿ ಶ್ರೀಗಳ ನೇತೃತ್ವದಲ್ಲಿ ಪಂಚಮಸಾಲಿ ಮುಖಂಡರೊಂದಿಗೆ ಇಂದು ಸಂಧಾನ ಸಭೆ ನಡೆಸಿದರು. ಆದರೆ, ಈ ಸಂಧಾನ ಸಭೆಯ ಮಾತುಕತೆ ವಿಫಲವಾಗಿದೆ. ಸಭೆಯಲ್ಲಿ ಪಾದಯಾತ್ರೆ ಹೋರಾಟ ಬಿಟ್ಟು ಸಮಯ ನೀಡುವಂತೆ ಸಚಿವ ಸಿ.ಸಿ.ಪಾಟೀಲ್ ಮನವಿ ಮಾಡಿದರು. ಆದರೆ, ಸ್ವಾಮೀಜಿಗಳು,ಸಮಾಜದ ಮುಖಂಡರು ಹೋರಾಟದ ಪಟ್ಟು ಸಡಿಲಿಸದೆ ಮತ್ತೇ ಜನವರಿ 14ರ ಗಡುವು ನೀಡಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಜ. 14ರೊಳಗೆ ಸರ್ಕಾರದ ನಿರ್ಧಾರ ಮೇಲೆ ಎಲ್ಲವೂ ನಿಂತಿರುವುದಾಗಿ ಇದೇ ವೇಳೆ ಶ್ರೀಗಳು ತಿಳಿಸಿದ್ದಾರೆ.
ಇಂದಿನ ಸಭೆಯ ತೆಗೆದುಕೊಂಡ ನಿರ್ಣಯಗಳನ್ನು ನಾಳೆ ಸಿಎಂ ಬಿ ಎಸ್ ಯಡಿಯೂರಪ್ಪರ ಮುಂದೆ ಚರ್ಚಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಸಿಎಂ ಕೂಡ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತುಕತೆಗೆ ಆಹ್ವಾನ ನೀಡಿದ್ದಾರೆ ಎಂದು ಸಚಿವ ಸಿಸಿ ಪಾಟೀಲ್ ತಿಳಿಸಿದರು.
ಸಭೆ ಬಳಿಕ ಮಾತನಾಡಿದ ಸಿಸಿ ಪಾಟೀಲ್, ನಾನು ಸಮಾಜದ ವ್ಯಕ್ತಿ, ಸರ್ಕಾರದ ಮಂತ್ರಿ. ಸ್ವಾಮೀಜಿಗೆ ಪಾದಯಾತ್ರೆ ಕೈಬಿಡಿ ಅಂತ ಮನವಿ ಮಾಡಿದ್ದೇನೆ. ಸಿಎಂ ಬಿಎಸ್ ವೈ ಈ ಪ್ರಸ್ತಾವನೆ ಹಿಂದೆ ತಂದಿದ್ದರು. ಆದರೆ, ತಾಂತ್ರಿಕ ಕಾರಣದಿಂದ ಹಿಂಪಡೆಯಲಾಗಿದೆ. ಈಗ ಇಲ್ಲಿ ನಡೆದ ಸಭೆಯ ವಿಚಾರಗಳನ್ನು ಸಿಎಂ ಗಮನಕ್ಕೆ ತರುತ್ತೇನೆ. 2ಎ ಮೀಸಲಾತಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಕುಲಶಾಸ್ತ್ರ ಅಧ್ಯಯನದ ಕಡೆಗೆ ಗಮನ ಹರಿಸುತ್ತೇವೆ. ಸ್ವಾಮೀಜಿ ಹಾಗೂ ಸಿಎಂ ಮಧ್ಯೆ ಸಭೆ ನಡೆಸಲು ಪ್ರಯತ್ನ ಮಾಡುತ್ತೇನೆ. ಸಮಾಜದ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತದೆ ಎಂದರು.
ಸಭೆಯಲ್ಲಿ ಮಾತನಾಡಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಮ್ಮ ಸ್ವಾಮೀಜಿಗಳು ಸಮುದಾಯ ಉದ್ದಾರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಕೆಲವೊಂದಿಷ್ಟು ಸ್ವಾಮೀಜಿಗಳು ತಮ್ಮ ಉದ್ಧಾರ ಮಾಡಿಕೊಂಡಿದ್ದಾರೆ. ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ನೀವು ಉತ್ತಮ ಕೆಲಸ ಮಾಡುತ್ತಿದ್ದಾರೆ. ನಮ್ಮ ಪಾತ್ರ ಜನವರಿ 14ನೇ ತಾರೀಖಿನಿಂದ ಆರಂಭವಾಗುತ್ತದೆ ಎನ್ನುವ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಈ ವಿಚಾರದಲ್ಲಿ ಸಿಎಂ ಜೊತೆ ಮಾತನಾಡಿ ತಾರ್ತಿಕ ಅಂತ್ಯ ಕೊಡಬೇಕು. ಸಮಾಜಕ್ಕೆ ಒಳ್ಳೆಯದಾದರೆ ನಮ್ಮ ಜನರಿಗೆ ಒಳ್ಳೆಯದು. ಕರ್ನಾಟಕದ ಬಿಜೆಪಿಯಲ್ಲಿ ನಾನೂ ದೊಡ್ಡವನು. ಹಿಂದೆ ರಾಜ್ಯ ಬಿಜೆಪಿಯಲ್ಲಿ ನಾನೇ ನಾಲ್ಕದವನಾಗಿ ಸಚಿವರಾಗಿದ್ದೆ.ಆದ್ರೆ ಈಗ ಸಿ.ಸಿ ಪಾಟೀಲ್ ದೊಡ್ಡವರಾಗಿದ್ದಾರೆ. ಸಿ.ಸಿ ಪಾಟೀಲ್ ರಿಗೆ ಮನಸ್ಸಿಗೆ ಕಸಿವಿಸಿ ಆಗತೈತಿ. ಕಸಿವಿಸಿ ಮಾಡ್ಕೊಬ್ಯಾಡ್ರಿ.ವೇದಿಕೆಯಲ್ಲೇ ಸಚಿವ ಸಿಸಿ ಪಾಟೀಲ್ ಗೆ ಯತ್ನಾಳ್ ಟಾಂಗ್ ಕೊಟ್ಟರು.ಇ ದೇ ಸಚಿವ ಸ್ಥಾನ ಸಿಗದಿರೋದಕ್ಕೆ ಯತ್ನಾಳ್ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು
ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಜ.14 ರ ಒಳಗಾಗಿ ಸರ್ಕಾರ ನಮಗೆ ಸಿಹಿ ಸುದ್ದಿ ಕೊಡಲಿ. ಸಚಿವ ಸಿ.ಸಿ.ಪಾಟೀಲ ಹಾಗೂ ಸಂಸದ ಸಂಗಣ್ಣ ಕರಡಿ ಅಭಯ ನೀಡಿದ್ದಾರೆ. ಸಿಎಂ ಜೊತೆ ಮಾತುಕತೆ ನಡೆಸಲಿದ್ದಾರೆ. ಸದ್ಯ ಪಾದಯಾತ್ರೆ ನಡೆಸಲು ಮಾನಸಿಕವಾಗಿ ಸಿದ್ದವಾಗಿರಿ. ಸರ್ಕಾರದ ವಿರುದ್ದ ಟೀಕೆ ಬೇಡ. ಹಳ್ಳಿಗಳಲ್ಲಿ ಜನರ ಸಂಘಟನೆ ಮಾಡಿ. ಸಿಎಂ ಪಂಚಮಸಾಲಿ ಸಮಾಜದ ಋಣಭಾರ ಇದೆ ಅಂತಿದ್ದಾರೆ. ಸಚಿವ ಸಿ.ಸಿ.ಪಾಟೀಲ ಅವರ ಸಿಎಂ ಜೊತೆ ನಡೆಸುವ ಸಭೆಯ ಮೇಲೆ ಎಲ್ಲವೂ ನಿರ್ಣಯ ಆಗಲಿದೆ ಎಂದರು.
ಇದನ್ನು ಓದಿ: ದೇಶದ ಮೊದಲ ಆಟಿಕೆ ಕ್ಲಸ್ಟರ್ಗೆ ಸಿಎಂ ಶಂಕುಸ್ಥಾಪನೆ; 1 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ
ಜ.14 ರ ಒಳಗಾಗಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿ. ಪಾದಯಾತ್ರೆಗೆ ಸಮಾಜ ಬಾಂಧವರು ಮಾನಸಿಕವಾಗಿ ಸಿದ್ದವಾಗಿರಿ. ಸರ್ಕಾರ ಜ 14ರೊಳಗೆ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಸಂಬಂಧ ನಿರ್ಧಾರ ತೆಗೆದುಕೊಳ್ಳದಿದ್ದರೆ ಕೂಡಲಸಂಗಮದಿಂದ ಬೆಂಗಳೂರ ವಿಧಾನಸೌಧದವರೆಗೆ ಪಾದಯಾತ್ರೆ ಮಾಡಲಾಗುವುದು ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದರು.
ಒಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಸೂಚನೆ ಮೇರೆಗೆ ಸಂಧಾನಕ್ಕೆ ಬಂದಿದ್ದ ಸಚಿವ ಸಿ ಸಿ ಪಾಟೀಲ್ ಮಾತಿಗೂ ಒಪ್ಪಿಕೊಂಡಿಲ್ಲ. ಹೀಗಾಗಿ ಮತ್ತೆ ಜ 14ವರೆಗೆ ಕಾದುನೋಡುವ ತಂತ್ರಕ್ಕೆ ಲಿಂಗಾಯತ ಪಂಚಮಸಾಲಿ ಸಮಾಜದ ಸ್ವಾಮೀಜಿ, ಮುಖಂಡರು ಮೊರೆ ಹೋಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ