ರಾಜ್ಯದ ನಾಲ್ಕು ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್​ ಶಿಕ್ಷಣ; ಸಚಿವ ಅಶ್ವತ್ಥ್​ ನಾರಾಯಣ

ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್.ಬಿ.ಎ.) ಮಾನ್ಯತೆ ಪಡೆದಿರುವ ಕಾಲೇಜುಗಳಿಗೆ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಬೋಧಿಸಲು ಅವಕಾಶ ನೀಡಲಾಗಿದೆ

ಅಶ್ವತ್ಥನಾರಾಯಣ

ಅಶ್ವತ್ಥನಾರಾಯಣ

 • Share this:
  ಬೆಂಗಳೂರು (ಸೆ. 29): ನೆರೆಯ ರಾಜ್ಯಗಳಲ್ಲಿ ಇಂಜಿನಿಯರಿಂಗ್​ ಪದವಿಯನ್ನು ಅಲ್ಲಿನ ಮಾತೃ ಭಾಷೆಯಲ್ಲಿ ನೀಡಲಾಗುತ್ತಿತ್ತು. ಆದರೆ, ರಾಜ್ಯದಲ್ಲಿ ಮಾತ್ರ ಈ ಪ್ರಯೋಗ ನಡೆದಿರಲಿಲ್ಲ. ಈಗ ಮೊದಲ ಬಾರಿಗೆ ರಾಜ್ಯ ಸರ್ಕಾರ ಕೂಡ ಕನ್ನಡ ಮಾತೃಭಾಷೆ ಮೂಲಕ ಇಂಜಿನಿಯರಿಂಗ್​ ವಿಷಯ ಭೋಧನೆ  (Engineering Education in Kannada Medium) ಮಾಡಲು ಮುಂದಾಗಿದೆ. ಈ ಕುರಿತು ಒಂದು ಮಾತನಾಡಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ, ರಾಜ್ಯದ 4 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ಸಾಲಿನಿಂದಲೇ ಕನ್ನಡದಲ್ಲಿ ಬೋಧನೆ- ಕಲಿಕೆ ಆರಂಭವಾಗಲಿದೆ ಎಂದರು

  ಯಾವ ನಾಲ್ಕು ಕಾಲೇಜು

  ಭಾಲ್ಕಿಯ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯ (ಸಿವಿಲ್), ಚಿಕ್ಕಬಳ್ಳಾಪುರದ ಎಸ್.ಜೆ.ಸಿ. ತಾಂತ್ರಿಕ ಮಹಾವಿದ್ಯಾಲಯ (ಸಿವಿಲ್), ಮೈಸೂರಿನ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ (ಮೆಕ್ಯಾನಿಕಲ್) ಮತ್ತು  ವಿಜಯಪುರದ ಬಿ.ಎಲ್.ಡಿ.ಇ.ಎ. ವಿ.ಪಿ.ಡಾ.ಪಿ.ಜಿ.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜು (ಮೆಕ್ಯಾನಿಕಲ್)ಗಳಲ್ಲಿ ಕನ್ನಡದಲ್ಲಿ ಎಂಜಿನಿಯರಿಂಗ್ ಬೋಧನೆಗೆ ತಯಾರಿ ನಡೆದಿದೆ. ಈ ಕಾಲೇಜುಗಳಲ್ಲಿ ತಲಾ 30 ವಿದ್ಯಾರ್ಥಿಗಳನ್ನು ಈ ಕೋರ್ಸ್ ಗಳಿಗೆ ತೆಗೆದುಕೊಳ್ಳಬಹುದು.

  ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್.ಬಿ.ಎ.) ಮಾನ್ಯತೆ ಪಡೆದಿರುವ ಕಾಲೇಜುಗಳಿಗೆ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಬೋಧಿಸಲು ಅವಕಾಶ ನೀಡಲಾಗಿದೆ ಎಂದರು.

  ಶುಲ್ಕ ಹೆಚ್ಚಳ ಇಲ್ಲ

  ಇದೇ ವೇಳೆ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶುಲ್ಕದ ವಿಚಾರವಾಗಿ ಮಾತನಾಡಿದ ಅವರು,  ಕೋವಿಡ್ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜುಗಳ ಎಂಜಿನಿಯರಿಂಗ್ ಕೋರ್ಸಿನ ಶುಲ್ಕದಲ್ಲಿ ಯಾವುದೇ ಹೆಚ್ಚಳ ಮಾಡದೇ ಹಿಂದಿನ ದರವನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ.  ಹೀಗಾಗಿ, ಈ ಮುಂಚಿನಂತೆಯೇ ಸರ್ಕಾರಿ ಕೋಟಾದಡಿ ಪ್ರವೇಶಾತಿ ಪಡೆಯುವವರಿಗೆ ರೂ 65,340, ರೂ 58,806 ಈ ಎರಡು ಸ್ಲ್ಯಾಬ್ ಗಳಲ್ಲಿ ಶುಲ್ಕಗಳು ಮುಂದುವರಿಯಲಿವೆ ಎಂದು ಅವರು ಸ್ಪಷ್ಟಪಡಿಸಿದರು.

  ಇದನ್ನು ಓದಿ: ಕಾಮರ್ಸ್​ ಪದವೀಧರರಿಗೆ ಉದ್ಯೋಗ; ತಿಂಗಳಿಗೆ 85 ಸಾವಿರ ರೂ ವೇತನ

  ದುಬಾರಿ ಶುಲ್ಕಕ್ಕೆ ಕಡಿವಾಣ

  ಇದೇ ವೇಳೆ, ಖಾಸಗಿ ಕಾಲೇಜುಗಳು ‘ಇತರೆ ಶುಲ್ಕ’ ನೆಪದಲ್ಲಿ ಮಿತಿಮೀರಿ ಕಟ್ಟಿಸಿಕೊಳ್ಳುವುದಕ್ಕೂ ಕಡಿವಾಣ ಹಾಕಿ, ಗರಿಷ್ಠ ಮಿತಿಯನ್ನು 20 ಸಾವಿರ ರೂಪಾಯಿಕ್ಕೆ ನಿಗದಿಪಡಿಸಲಾಗಿದೆ. ಹಲವು ಕಾಲೇಜುಗಳು ಇತರೆ ಶುಲ್ಕದ ನೆಪದಲ್ಲಿ 70 ಸಾವಿರದವರೆಗೂ ಶುಲ್ಕ ವಸೂಲಿ ಮಾಡುತ್ತಿವೆ ಎನ್ನುವ ಆರೋಪಗಳ ಹಿನ್ನಲೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಇದಕ್ಕೆ ಕಾಲೇಜು ಸಂಘದ ಪ್ರತಿನಿಧಿಗಳು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಚಿವರು ವಿವರಿಸಿದರು.

  ಇದನ್ನು ಓದಿ: ದಸರಾ ಬಳಿಕ 3ರಿಂದ5ನೇ ತರಗತಿ ಶಾಲೆ ಆರಂಭ; 6ರಿಂದ 12ನೇ ವಿದ್ಯಾರ್ಥಿಗಳಿಗೆ ಪೂರ್ಣಾವಧಿ ತರಗತಿ

  ಇನ್ನು ಮುಂದೆ ಪ್ರವೇಶ ಶುಲ್ಕ, ಇತರೆ ಶುಲ್ಕ, ಕೌಶಲ ಶುಲ್ಕ ಇದ್ಯಾವುದನ್ನೂ ನೇರವಾಗಿ ಕಾಲೇಜಿನಲ್ಲಿ ಕಟ್ಟುವಂತಿಲ್ಲ. ಇವೆಲ್ಲವನ್ನೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದಲ್ಲಿಯೇ ಪಾವತಿಸಬೇಕು.

  ಶುಲ್ಕವನ್ನು ಕೆಇಎಗೆ ಕಟ್ಟಬೇಕು

  ಟೂಷನ್ ಶುಲ್ಕ‌ ಸೇರಿದಂತೆ ಇತರೆ ಶುಲ್ಕವನ್ನು ಕಟ್ಟಿಸಿಕೊಳ್ಳುವ ಮುನ್ನ ಪ್ರತಿಯೊಂದು ಕಾಲೇಜೂ ಯಾವ್ಯಾವ ಉದ್ದೇಶಕ್ಕೆ ಇದನ್ನು ಕಟ್ಟಿಸಿಕೊಳ್ಳಲಾಗುತ್ತದೆ ಎಂಬುದನ್ನು ಕೆಎಇ. ತಾಂತ್ರಿಕ ಶಿಕ್ಷಣ ಇಲಾಖೆ, ವಿಟಿಯು ಗಳಿಗೆ ಮಾಹಿತಿ ಕೊಡಬೇಕು. ಇದನ್ನು ಕಾಲೇಜುಗಳಲ್ಲಿ ಕಟ್ಟಲು ಅವಕಾಶ ಇರುವುದಿಲ್ಲ. ಕೆಇಎ ಗೇ ಕಟ್ಟಬೇಕು. ಜೊತೆಗೆ ವೆಬ್ ಸೈಟ್ ನಲ್ಲಿ ಪ್ರಕಟಿಸಬೇಕು ಎಂದು ಅಶ್ವತ್ಥ ನಾರಾಯಣ ಹೇಳಿದರು.

  ವಿಶ್ವವಿದ್ಯಾಲಯ ಶುಲ್ಕವನ್ನು ಈ ಮುಂಚೆ ಆಯಾ ಕಾಲೇಜಿನಲ್ಲಿ ಕಟ್ಟಬಹುದಿತ್ತು. ಆದರೆ, ಇನ್ನು ಮುಂದೆ ಅದನ್ನು ಕೂಡ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲೇ (ಕೆಇಎ) ಕಟ್ಟಬೇಕು. ಈ ಮುಂಚೆ ಈ ಶುಲ್ಕ ಕಟ್ಟಿಸಿಕೊಳ್ಳುವಲ್ಲಿ ಇದ್ದ ಗೊಂದಲವನ್ನು ನಿವಾರಿಸುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ , ಒಂದೊಂದು ಕಾಲೇಜಿನಲ್ಲಿ ಒಂದೊಂದು ರೀತಿ ಶುಲ್ಕ ಇರುತ್ತಿತ್ತು. ಈಗ ಇದಕ್ಕೆ ಕೂಡ ಗರಿಷ್ಠ ರೂ 20,000 ಮಿತಿ ನಿಗದಿಗೊಳಿಸಲಾಗಿದೆ ಎಂದರು
  Published by:Seema R
  First published: