ಹುಬ್ಬಳ್ಳಿ (ಜ. 7): ಇನ್ನು ಎರಡೂವರೆ ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಯಾವುದೇ ಕಾರಣಕ್ಕೂ ಸಿಎಂ ಸ್ಥಾನದಲ್ಲಿ ಬದಲಾವಣೆ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಖಂಡಿತ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸಿದ್ಧರಾಮಯ್ಯನವರು ಯಾವಾಗ ಜ್ಯೋತಿಷಿಯಾದರೂ ಎಂದು ನನಗೆ ಗೊತ್ತಿಲ್ಲ. ಬಿ.ಎಸ್. ಯಡಿಯೂರಪ್ಪ ನವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಸದ್ಯಕ್ಕೆ ಸಿಎಂ ಖುರ್ಚಿ ಖಾಲಿ ಇಲ್ಲ ಎಂದರು. ಕಾಂಗ್ರೆಸ್ ಬಿಟ್ಟು ಹೋದವರು ಮರಳಿ ಬರುತ್ತಾರೆ ಎಂಭ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ಅ ಹೇಳಿಕೆ ಕೇವಲ ಭ್ರಮೆ. ನಾವು ಯಾರೂ ಮರಳಿ ಕಾಂಗ್ರೆಸ್ ಗೆ ಹೋಗಲ್ಲ. ಬಿಜೆಪಿಯ ತತ್ವ ಸಿದ್ಧಾಂತಗಳನ್ನ ಒಪ್ಪಿ ನಾವೆಲ್ಲ ಬಿಜೆಪಿ ಸೇರಿದ್ದೇವೆ. ಜೀವನ ಪರ್ಯಂತ ಬಿಜೆಪಿಯಲ್ಲೇ ಇರುತ್ತೇವೆ. ಇನ್ನು ಸಚಿವ ಸಂಪುಟ ವಿಸ್ತರಣೆ ಯಾವಾಗ ಬೇಕಾದರೂ ಆಗಬಹುದು. ಸಂಕ್ರಮಣದ ಒಳಗೆ ಮಾಡಬಹುದು. ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ಸಚಿವ ಸಂಪುಟ ವಿಸ್ತರಣೆ ಮಾಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ನಮ್ಮ ಜೊತೆಗೆ ಬಂದವರಿಗೆಲ್ಲಾ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೇವೆ. ಅವರಿಗೂ ಸಚಿವ ಸ್ಥಾನ ಸಿಗಲಿದೆ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ನಾಲ್ಕು ದಿನಗಳ ಹಿಂದೆ ಮಾತನಾಡಿದ್ದ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ಅವರ ಸ್ಥಾನ ಬದಲಾವಣೆ ನಿಶ್ಚಿತ. ಮತ್ತೋರ್ವ ಬಿಜೆಪಿ ನಾಯಕರು ಮುಖ್ಯಮಂತ್ರಿಯಾಗಿ ಅಧಿಕಾರ ಪೂರ್ಣಗೊಳಿಸುವರು. ಮಧ್ಯಂತರ ಚುನಾವಣೆ ನಡೆಯುವುದಿಲ್ಲ ಎಂದು ತಿಳಿಸಿದ್ದರು.
ನಗರ ಅಭಿವೃದ್ಧಿ ಕುರಿತು ಮಾತನಾಡಿದ ಅವರು, ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ವೇಗ ಪಡೆದುಕೊಂಡಿದೆ. 77 ಕೋಟಿ ವೆಚ್ಚದಲ್ಲಿ ಎಲ್ ಇಡಿ ಬೀದಿ ದೀಪಗಳ ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ. ಅವಳಿ ನಗರದಾದ್ಯಂತ 64 ಸಾವಿರ ಬೀದಿ ದೀಪಗಳ ಅಳವಡಿಕೆಗೆ ಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಎನ್ನುವ ವಿಚಾರ ಇಲ್ಲವೇ ಇಲ್ಲ:
ಇದೇ ವೇಳೆ ನಗರದಲ್ಲಿ ಮಾತನಾಡಿ ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅನ್ನೋದು ಕೇವಲ ಗಾಳಿಸುದ್ದಿ ಅಷ್ಟೇ. ಬಿಜೆಪಿ ಜೊತೆ ಜೆಡಿಎಸ್ ವಿಲೀನವಾಗಲಿ, ಮೈತ್ರಿಯಾಗುವ ವಿಚಾರವೇ ಇಲ್ಲ ಎಂದರು.
ಪರಿಷತ್ ಸಭಾಪತಿಯನ್ನು ಕೆಳಗಿಳಿಸುವಾಗ ಬಿಜೆಪಿ ಜೊತೆಗೆ ಹೊಂದಾಣಿಕೆ ಆಗಿತ್ತು ಎಂದಿದ್ದಾರೆ. ಜೆಡಿಎಸ್ ಬಿಟ್ಟು ಪರಿಷತ್ ಸಭಾಪತಿ ಆಯ್ಕೆ ಮಾಡಲು ಸಾಧ್ಯವಿಲ್ಲ. ನಾನು ಪರಿಷತ್ ಸಭಾಪತಿ ಆಗುವುದಕ್ಕೆ ಮೂರೂ ಪಕ್ಷಗಳಿಂದ ಸಹಮತವಿದೆ. ನಾನು ಹಿರಿಯ ಸದಸ್ಯ ಎನ್ನುವ ಕಾರಣಕ್ಕೆ ಅವಿರೋಧ ಆಯ್ಕೆಗೆ ಮೂರು ಪಕ್ಷಗಳ ಮುಖಂಡರು ಸಹಮತ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ನನ್ನನ್ನು ಸಭಾಪತಿ ಮಾಡಲು ಮಾತುಕತೆ ನಡೆಸಿದ್ದಾರೆ ಎನ್ನುವುದನ್ನ ಕೇಳಿದ್ದೇನೆ. ನಾನು ಸಭಾಪತಿಯಾಗುವುದಕ್ಕೆ ಶೇ 90 ರಷ್ಟು ಸದಸ್ಯರ ಸಹಮತವಿದೆ. ಇದು ನನ್ನ ಕೊನೆಯ ಅವಧಿ ಅಲ್ಲಾ. ಮತ್ತೆ ಮುಂದೆಯೂ ಚುನಾವಣೆಗೆ ಸ್ಪರ್ಧೆ ಮಾಡಲಿದ್ದೇನೆ. ಹೆರಿಗೆ ಆದಾಗ ಮಕ್ಕಳು ಸಾಕು ಅನ್ನೋ ಭಾವನೆ ಬರುತ್ತೆ. ನಂತರ ಮತ್ತೆ ಮಕ್ಕಳನ್ನು ಮಾಡಲ್ಲವೇ ಎನ್ನುವ ಮೂಲಕ ರಾಜಕೀಯ ನಿವೃತ್ತಿ ಚರ್ಚೆಗೆ ತೆರೆ ಎಳೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ