ನವದೆಹಲಿ(ಆ.27): ಕರ್ನಾಟಕದಲ್ಲಿ ವ್ಯಾಪಕವಾದ ಪ್ರವಾಹದ ನಡುವೆಯೂ ಕೃಷಿ ಚಟುವಟಿಕೆ ಆರಂಭವಾಗಿದ್ದು, ರಸಗೊಬ್ಬರದ ಕೊರತೆ ನಿರ್ಮಾಣವಾಗಿದೆ. ಹೀಗಾಗಿ ರಸಗೊಬ್ಬರದ ಕೊರತೆ ನೀಗಿಸುವಂತೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಗುರುವಾರ ದೆಹಲಿಯಲ್ಲಿ ಕರ್ನಾಟಕದವರೇ ಆದ ಕೇಂದ್ರ ರಸಗೊಬ್ಬರ ಮತ್ತು ರಸಾಯನಿಕ ಖಾತೆ ಸಚಿವ ಡಿ.ವಿ. ಸದಾನಂದಗೌಡ ಅವರನ್ನು ಭೇಟಿ ಮಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್, ರಾಜ್ಯದಲ್ಲಿ ಉಂಟಾಗಿರುವ ರಸಗೊಬ್ಬರದ ಕೊರತೆ ನೀಗಿಸುವಂತೆ ವಿನಂತಿಸಿದರು.
ಇದೇ ವೇಳೆ ಕೇಂದ್ರ ಸಚಿವ ಸದಾನಂದಗೌಡರು ಕೇಂದ್ರದಿಂದ ರಾಜ್ಯಕ್ಕೆ ಸರಬರಾಜು ಮಾಡಲಾಗುತ್ತಿರುವ ರಸಗೊಬ್ಬರಗಳ ಸಂಪೂರ್ಣ ಮಾಹಿತಿಯನ್ನು ರಾಜ್ಯದ ಕೃಷಿ ಸಚಿವ ಬಿ.ಸಿ. ಪಾಟೀಲರಿಗೆ ಓದಗಿಸಿದರು. ಅಲ್ಲದೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾಜ್ಯಕ್ಕೆ ಅವಶ್ಯಕ ಗೊಬ್ಬರವನ್ನು ಪೂರೈಸಲು ಕ್ರಮ ಜರುಗಿಸಲಾಗುವುದು ಎಂದರು.
ಆದಾಗ್ಯೂ ಕೇಂದ್ರ ಸರ್ಕಾರ ರಾಜ್ಯದ ಅವಶ್ಯಕತೆಗಿಂತಲೂ ಹೆಚ್ಚಿನ ರಸಗೊಬ್ಬರವನ್ನು ಪೂರೈಸಿದ್ದು, ಮುಂದಿನ ದಿನಗಳಲ್ಲೂ ಸಹ ರಸಗೊಬ್ಬರದ ಕೊರತೆ ಆಗುವುದಿಲ್ಲವೆಂದು ಕೇಂದ್ರ ಸಚಿವರು ಭರವಸೆ ನೀಡಿದರು. ಇದಲ್ಲದೆ ಕೇಂದ್ರ ಸರ್ಕಾರ ನೀಡುವ ರಸಗೊಬ್ಬರವನ್ನು ರಾಜ್ಯದ ಎಲ್ಲಾ ಭಾಗಗಳಿಗೂ ಸಮರ್ಪಕವಾಗಿ ತಲುಪಿಸುವಂತೆ ಕಾಳಜಿವಹಿಸಬೇಕೆಂದು ಸಲಹೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ