ಬೆಂಗಳೂರು(ಸೆ.04): ಡ್ರಗ್ಸ್ ದಂಧೆಗೆ ಕಡಿವಾಣ ಹಾಕೋವರೆಗೂ ಕಾರ್ಯಾಚರಣೆ ನಿಲ್ಲದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಇಂದು ಆರ್ಟಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಡ್ರಗ್ಸ್ ಜಾಲದ ವಿರುದ್ಧ ನಡೆಯುತ್ತಿರುವ ತನಿಖೆಯಲ್ಲಿ ಪ್ರಗತಿ ಕಾಣುತ್ತಿದೆ. ತನಿಖೆಯಲ್ಲಿ ಹೊಸ ಆಯಾಮಗಳು ಸಿಗುತ್ತಿವೆ. ಡ್ರಗ್ಸ್ ಪೂರೈಕೆಯ ಮೂಲವನ್ನು ಪತ್ತೆ ಹಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಜತೆಗೆ ಎರಡನೇ ಹಂತದ ನಗರಗಳಲ್ಲೂ ಡ್ರಗ್ಸ್ ಜಾಲಗಳಿದ್ದು, ಅಲ್ಲಿಯೂ ನಿಯಂತ್ರಣ ಹೇರುವ ನಿಟ್ಟಿನಲ್ಲಿ ನಾಳೆ ಜಿಲ್ಲೆಗಳ ಎಸ್ಪಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಇನ್ನು, ಎಲ್ಲ ಕಡೆಗಳಲ್ಲೂ ಕಾರ್ಯಾಚರಣೆ ಮುಂದುವರೆಸುತ್ತೇವೆ ಎಂದ ಬಸವರಾಜ ಬೊಮ್ಮಾಯಿ ಅವರು, ಚಿತ್ರನಟಿ ರಾಗಿಣಿ ಮನೆ ಮೇಲೆ ದಾಳಿ ನಡೆದ ಬಗ್ಗೆ ಮಾತನಾಡಿದರು. ರಾಗಿಣಿಯವರ ನಿವಾಸದ ಮೇಲಿನ ದಾಳಿ ಸಿಸಿಬಿ ತನಿಖೆಯ ಒಂದು ಭಾಗವಾಗಿದೆ. ಕಾನೂನು ಪ್ರಕಾರ ಕೈಗೊಳ್ಳಬೇಕಾಗಿರುವ ಕ್ರಮಗಳನ್ನ ಸಿಸಿಬಿ ತೆಗೆದುಕೊಳ್ಳಲಿದೆ. ಸಿಸಿಬಿ ತನಿಖೆಯಲ್ಲಿ ನಾವು ಮಧ್ಯಪ್ರವೇಶ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಅವರನ್ನು ಸಿಸಿಬಿ ವಶಕ್ಕೆ ಪಡೆದಿದೆ. ಇಂದು ಬೆಳಗ್ಗೆಯೇ ಸಿಸಿಬಿ ಇನ್ಸ್ಪೆಕ್ಟರ್ ಅಂಜುಮಾಲಾ ನೇತೃತ್ವದಲ್ಲಿ ರಾಗಿಣಿಯವರ ಯಲಹಂಕದ ಜ್ಯುಡಿಷಿನಲ್ ಲೇಔಟ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಸತತ 3 ಗಂಟೆ ಶೋಧ ಕಾರ್ಯ ಬಳಿಕ ಮನೆ ಕೀ, ಕಾರು ಕೀ, ಮೊಬೈಲ್ ಅನ್ನು ವಶಕ್ಕೆ ಪಡೆದು ರಾಗಿಣಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹಾಗೆಯೇ ಸದ್ಯ ಸಿಸಿಬಿ ಪೊಲೀಸರಿಂದ ರಾಗಿಣಿಯವರ ವಿಚಾರಣೆ ಮುಂದುವರಿದಿದೆ. ಮಾದಕ ವಸ್ತು ಮಾರಾಟ ದಂಧೆ ಪ್ರಕರಣದಲ್ಲಿ ರಾಗಿಣಿ ಆಪ್ತ ರವಿ ಶಂಕರ್ ನನ್ನು ಸಿಸಿಬಿ ಪೊಲೀಸರು ನಿನ್ನೆಯಷ್ಟೇ ಬಂಧಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ