ಚಿತ್ರದುರ್ಗ ತಾಲೂಕು ಕೋವಿಡ್ ಆಸ್ಪತ್ರೆಗಳಿಗೆ ಸಚಿವ ಶ್ರೀರಾಮುಲು ಭೇಟಿ; ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಟೆಸ್ಟ್ ಹೆಚ್ಚಿಸಲು‌ ಸೂಚನೆ

ಸೋಂಕಿತರಿಗೆ ಸಮಯಕ್ಕೆ ಸರಿಯಾಗಿ  ಚಿಕಿತ್ಸೆ ಒದಗಿಸದರೆ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಸೋಂಕಿತರು ಅಲೆದಾಡುವುದು ತಪ್ಪಲಿದೆ. ಜೊತೆಗೆ ಸೋಂಕಿನ ತೀವ್ರತೆಯ ಪ್ರಮಾಣವೂ ತಗ್ಗಲಿದೆ ಎಂದು ಹೇಳಿದರು.

ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಶ್ರೀರಾಮುಲು

ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಶ್ರೀರಾಮುಲು

  • Share this:
ಚಿತ್ರದುರ್ಗ(ಮೇ 16): ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್, ಬೆಡ್, ರೆಮ್‍ಡೆಸಿವಿರ್ ಚುಚ್ಚುಮದ್ದು, ಔಷಧಿಗಳು ಯಾವುದೇ ರೀತಿಯಲ್ಲಿ ಕೊರತೆಯಾಗದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮವಹಿಸಬೇಕು. ಸಿಟಿ ಸ್ಕ್ಯಾನ್‍ಗೆ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿ ಹಣ ಪಡೆಯುವ ಖಾಸಗಿ ಪ್ರಯೋಗಾಲಯಗಳ ಲೈಸನ್ಸ್ ರದ್ದು ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ ಹಾಗೂ ಹಿರಿಯೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ  ಸಚಿವ ಶ್ರೀರಾಮುಲು, ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ, ಆಕ್ಸಿಜನ್ ಸಮಸ್ಯೆಯಾಗದ ರೀತಿಯಲ್ಲಿ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲೆಯ ಶಾಸಕರೊಟ್ಟಿಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿದ್ದು, ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ರೆಮ್‍ಡಿಸಿವಿರ್ ಚುಚ್ಚುಮದ್ದು ಹಾಗೂ ವ್ಯಾಕ್ಸಿನ್‍ಗಳು ಕೊರತೆಯಾಗದಂತೆ ಚರ್ಚಿಸಿ ಕ್ರಮವಹಿಸಲಾಗಿದೆ. ಯಾವುದೇ ರೀತಿಯಿಂದಲೂ ಜನರ ಜೀವಕ್ಕೆ ತೊಂದರೆಯಾಗದಂತೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಫೇಕ್​​ ಕೊರೋನಾ ನೆಗೆಟಿವ್ ರಿಪೋರ್ಟ್‌ಗಾಗಿ 200 ರೂ. ಲಂಚ;ವಿಡಿಯೋ ವೈರಲ್‌ ಬಳಿಕ ಯುಪಿ ಆರೋಗ್ಯಾಧಿಕಾರಿ ವಜಾ

ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ  ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಟೆಸ್ಟ್ ಪ್ರಮಾಣ ಹೆಚ್ಚಿಸಿ, ಗ್ರಾಮೀಣ ಪ್ರದೇಶದಲ್ಲಿಯೇ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಬೇಕು. ಸೋಂಕಿತರಿಗೆ ಸಮಯಕ್ಕೆ ಸರಿಯಾಗಿ  ಚಿಕಿತ್ಸೆ ಒದಗಿಸದರೆ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಸೋಂಕಿತರು ಅಲೆದಾಡುವುದು ತಪ್ಪಲಿದೆ. ಜೊತೆಗೆ ಸೋಂಕಿನ ತೀವ್ರತೆಯ ಪ್ರಮಾಣವೂ ತಗ್ಗಲಿದೆ ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಆಕ್ಸಿಜನ್ ಕೊರತೆಯಿಂದಾಗಿ ಸೋಂಕಿತರು ಸಾವಿಗೀಡಾಗಬಾರದು. ಆಕ್ಸಿಜನ್ ಹಾಗೂ ರೆಮ್‍ಡಿಸಿವಿರ್ ಚುಚ್ಚುಮದ್ದು ಕೊರತೆಯಾಗದಂತೆ ಆಯಾ ತಾಲ್ಲೂಕಿನ ತಹಶೀಲ್ದಾರ್ ಹಾಗೂ ನೋಡಲ್ ಅಧಿಕಾರಿಗಳು ನೋಡಿಕೊಳ್ಳಬೇಕು. ಆಕ್ಸಿಜನ್ ಹಾಗೂ ರೆಮ್‍ಡಿಸಿವಿರ್ ಕೊರತೆಯಾದರೆ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಶಾಸಕರ ಗಮನಕ್ಕೆ ತಂದರೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ ಅವರು, ನಗರ ಪ್ರದೇಶ ಮಾತ್ರವಲ್ಲದೇ ಗ್ರಾಮೀಣ ಪ್ರದೇಶಗಳಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಿ ಪ್ರತಿ ಹಳ್ಳಿಗಳನ್ನು  ಸ್ಯಾನಿಟೈಸ್ ಮಾಡಲು ತಾಕೀತು ಮಾಡಿದರು.ಬಳಿಕ ಹೊಳಲ್ಕೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ನಿರ್ಮಿಸಿರುವ 50 ಹಾಸಿಗೆ ಸಾಮಥ್ರ್ಯದ ಕೋವಿಡ್ ಕೇಂದ್ರವನ್ನು  ಉದ್ಘಾಟಿಸಿದರು.

ಮೊದಲ ಹಂತದಲ್ಲಿ ಚಿತ್ರದುರ್ಗ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಆಕ್ಸಿಜನ್ ಪ್ಲಾಂಟ್ ಲಭ್ಯವಾಗಿಲ್ಲ ಎಂಬ ವರದಿ ಬಂದಿದೆ. ಈ ಕುರಿತು ಈಗಾಗಲೇ ಸಂಬಂಧಪಟ್ಟ ಆಯುಕ್ತರ ಬಳಿ ಮಾತನಾಡಿದ್ದು, ಎರಡನೇ ಹಂತದಲ್ಲಿ ಜಿಲ್ಲೆಗೆ ಆಕ್ಸಿಜನ್ ಪ್ಲಾಂಟ್ ಲಭ್ಯವಾಗಲಿದೆ ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಹೆಚ್.ಆರ್.ಸಿ.ಟಿ. ಹಾಗೂ ಡಿಜಿಟಲ್ ಎಕ್ಸರೇಗಳಿಗೆ ಸರ್ಕಾರದ ನಿಗಧಿಪಡಿಸಿರುವ ದರ ಮೀರಿ ಕೆಲವು ಖಾಸಗಿ ಪ್ರಯೋಗಾಲಯಗಳು ಸಿಟಿ ಸ್ಕ್ಯಾನ್‍ಗಾಗಿ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಇದರಿಂದ  ರೋಗಿಗಳಿಗೆ ಅನಾವಶ್ಯಕವಾಗಿ ಆರ್ಥಿಕ ಹೊರೆಯಾಗುತ್ತಿದೆ. ಸಿಟಿ ಸ್ಕ್ಯಾನ್‍ಗೆ ಸರ್ಕಾರ ನಿಗಧಿಪಡಿಸಿರುವ ದರಕ್ಕಿಂತ ಹೆಚ್ಚುವರಿ ಹಣ ಪಡೆಯುವ ಖಾಸಗಿ ಪ್ರಯೋಗಾಲಯಗಳ ಲೈಸನ್ಸ್ ರದ್ದು ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Published by:Latha CG
First published: