• Home
  • »
  • News
  • »
  • state
  • »
  • ಶ್ರೀರಾಮುಲು ಹೇಳಿಕೆಗೆ ಖಂಡನೆ; ಮೊಳಕಾಲ್ಮೂರಿಗೆ 371(ಜೆ) ಸ್ಥಾನಮಾನಕ್ಕೆ ಕಲ್ಯಾಣ ಕರ್ನಾಟಕದಲ್ಲಿ ಆಕ್ರೋಶ

ಶ್ರೀರಾಮುಲು ಹೇಳಿಕೆಗೆ ಖಂಡನೆ; ಮೊಳಕಾಲ್ಮೂರಿಗೆ 371(ಜೆ) ಸ್ಥಾನಮಾನಕ್ಕೆ ಕಲ್ಯಾಣ ಕರ್ನಾಟಕದಲ್ಲಿ ಆಕ್ರೋಶ

ಸಚಿವ ಶ್ರೀರಾಮುಲು

ಸಚಿವ ಶ್ರೀರಾಮುಲು

ಮೊಳಕಾಲ್ಮುರು ತಾಲೂಕನ್ನು 371(ಜೆ) ವ್ಯಾಪ್ತಿಗೆ ತರುವ ಕುರಿತು ಚರ್ಚಿಸಲಾಗುವುದೆಂಬ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿದೆ.

  • Share this:

ಕಲಬುರ್ಗಿ (ಡಿ. 2): ಒಂದೊಮ್ಮೆ ಬಳ್ಳಾರಿ ಜಿಲ್ಲೆಯ ಭಾಗವಾಗಿತ್ತು ಎಂಬ ಕಾರಣಕ್ಕೆ ಹರಪನಹಳ್ಳಿ ತಾಲೂಕನ್ನು ಬಳ್ಳಾರಿಗೆ ಸೇರ್ಪಡೆ ಮಾಡುವ ವಿಚಾರದಲ್ಲಿ ಸುಮ್ಮನಿದ್ದ ಜನ, ಈಗ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕು ಸೇರ್ಪಡೆ ಮಾಡುವ ಮಾತು ಬರುತ್ತಿದ್ದಂತೆಯೇ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಒಂದು ವೇಳೆ  ಸೇರ್ಪಡನೆ ಮಾಡಿದರೆ  ಉಗ್ರ ಹೋರಾಟ ಮಾಡುವುದಾಗಿಯೂ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮೊಳಕಾಲ್ಮುರು ತಾಲೂಕನ್ನು 371(ಜೆ) ವ್ಯಾಪ್ತಿಗೆ ತರುವ ಕುರಿತು ಚರ್ಚಿಸಲಾಗುವುದೆಂಬ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿದೆ. ಶ್ರೀರಾಮುಲು ಹೇಳಿಕೆಗೆ ಕಲ್ಯಾಣ ಕರ್ನಾಟಕದ ವಿವಿಧ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಅಹಿಂದ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಸಾಯಿಬಣ್ಣ ಜಮಾದಾರ, ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ ಹೈದರಾಬಾದ್ ಕರ್ನಾಟಕ ತೀರಾ ಹಿಂದುಳಿದ ಹಿನ್ನೆಲೆಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಇತ್ತೀಚೆಗಷ್ಟೇ ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲೂಕನ್ನು ಕಲ್ಯಾಣ ಕರ್ನಾಟಕ್ಕೆ ಸೇರ್ಪಡೆ ಮಾಡಲಾಗಿದೆ. ಇದರ ಬೆನ್ನ ಹಿಂದೆಯೇ ಮೊಳಕಾಲ್ಮುರು ಕ್ಷೇತ್ರದ 371(ಜೆ) ವ್ಯಾಪ್ತಿಗೆ ಸೇರಿಸುವ ಹುನ್ನಾರ ನಡೆದಿದೆ. ಅದೇ ಹಿನ್ನೆಲೆಯಲ್ಲಿಯೇ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ


ಕಲಬುರ್ಗಿ ವಿಭಾಗದಲ್ಲಿತ್ತೆಂಬ ಕಾರಣಕ್ಕೆ ಮದ್ರಾಸ್ ಪ್ರಾಂತ್ಯದಲ್ಲಿದ್ದ ಬಳ್ಳಾರಿಯನ್ನೂ ಕಲ್ಯಾಣ ಕರ್ನಾಟಕದ ವ್ಯಾಪ್ತಿಗೆ ತರಲಾಗಿತ್ತು. ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳನ್ನು ವಿಶೇಷ ಸ್ಥಾನಮಾನದ ವ್ಯಾಪ್ತಿಗೆ ತರಲಾಗಿದೆ. ಬಳ್ಳಾರಿ ಜಿಲ್ಲೆ ಈಗ ಇಬ್ಭಾಗವಾಗಿ ನೂತನ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದಿದೆ. ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿಯನ್ನೂ ವಿಶೇಷ ಸ್ಥಾನಮಾನದ ವ್ಯಾಪ್ತಿಗೆ ತರಲಾಗಿದೆ. ಇದೀಗ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕನ್ನು ಕಲ್ಯಾಣ ಕರ್ನಾಟಕದ ವ್ಯಾಪ್ತಿಗೆ ತರಬೇಕೆಂಬ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿದೆ.


ಆದರೆ ಮೊಳಕಾಲ್ಮುರು ಚಿತ್ರದುರ್ಗ ಜಿಲ್ಲೆಗೆ ಸೇರಿದ್ದು. ಮೊಳಕಾಲ್ಮುರು ತಾಲೂಕಿಗೂ ಕಲ್ಯಾಣ ಕರ್ನಾಟಕಕ್ಕೂ ಸಂಬಂಧವೇ ಇಲ್ಲ. ವಿನಾಕಾರಣ ಶ್ರೀರಾಮುಲುರಿಂದ ಗೊಂದಲ ಸೃಷ್ಟಿ ನಡೆದಿದೆ. ಮೊಳಕಾಲ್ಮುರು ಸೇರಿಸಲು ಮುಂದಾದ್ರೆ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು. ಕೂಡಲೇ ಈ ವಿಚಾರವನ್ನು  ಕೈಬಿಡುವಂತೆ ಆಗ್ರಹಿಸಿದ್ದಾರೆ.


ಇದನ್ನು ಓದಿ: ಈ ಬಾರಿ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ಗೆ ಆಹ್ವಾನ?


ಇದೇ ವೇಳೆ ಕನ್ನಡ ಭೂಮಿ ಸಂಘಟನೆ, ಕನ್ನಡಪರ ಸಂಘಟನೆಗಳೂ ಶ್ರೀರಾಮುಲು ಹೇಳಿಕೆಗೆ ವಿರೋಧ ವ್ಯಕ್ತಪಡಿಸಿವೆ. ಈ ಕುರಿತು ಪ್ರತಿಕ್ರಿಯಿಸಿರುವ, ಕನ್ನಡ ಭೂಮಿ ಸಂಘಟನೆ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪುರ, ಹಾಗೆ ನೋಡಿದರೆ ಬಳ್ಳಾರಿ ಜಿಲ್ಲೆಯೂ ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಬರುವುದಿಲ್ಲ. ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದ ಬಳ್ಳಾರಿಯನ್ನು ತಾಂತ್ರಿಕ ನೆಪವೊಡ್ಡಿ ಸೇರ್ಪಡೆ ಮಾಡಲಾಗಿದೆ. ಹೀಗೆಯೇ ಬಿಟ್ಟರೆ ಅಕ್ಕ-ಪಕ್ಕದ ತಾಲೂಕುಗಳೆಲ್ಲವನ್ನು ಸೇರ್ಪಡೆ ಮಾಡಿ ನಮಗೆ ಅನ್ಯಾಯ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಹೊಸ ತಾಲೂಕುಗಳ ಸೇರ್ಪಡನೆ ಬೇಡ. ಬೇಕಿದ್ದರೆ ಬಳ್ಳಾರಿ ಜಿಲ್ಲೆಯನ್ನೇ ವಿಶೇಷ ಸ್ಥಾನಮಾನದಿಂದ ತೆಗೆದು ಹಾಕಿ ಎಂದಿದ್ದಾರೆ.


ಮೊಳಕಾಲ್ಮುರು ಸೇರ್ಪಡೆ ಪ್ರಶ್ನೆಯೇ ಇಲ್ಲ ಎಂದ ಡಿಸಿಎಂ...


ಕಲ್ಯಾಣ ಕರ್ನಾಟಕಕ್ಕೆ ಮೊಳಕಾಲ್ಮುರು ಸೇರ್ಪಡೆ ವಿಚಾರದ ಕುರಿತು ಕಲಬುರ್ಗಿಯಲ್ಲಿ ಪ್ರತಿಕ್ರಿಯಿಸಿರೋ ಡಿಸಿಎಂ ಲಕ್ಷ್ಮಣ ಸವದಿ, ಮೊಳಕಾಲ್ಮುರು ಕ್ಷೇತ್ರದ ಜನ ಸಚಿವ ಶ್ರೀರಾಮುಲುಗೆ ಮನವಿ ಮಾಡಿದ್ದಾರೆ. ಅದನ್ನು ಪರಿಶೀಲಿಸಿಸುವುದಾಗಿ ಶ್ರೀರಾಮುಲು ಹೇಳಿದ್ದಾರೆ ಅಷ್ಟೆ. ಮೊಳಕಾಲ್ಮುರು ಸೇರಿಸಬೇಕೆಂದರೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಅದು ಕೇಂದ್ರ ಸರ್ಕಾರದಿಂದ ಮಾತ್ರ ಸಾಧ್ಯ. ಸದ್ಯಕ್ಕೆ ಮೊಳಕಾಲ್ಮುರು ಕ್ಷೇತ್ರವನ್ನು ಕಲಂ 371(ಜೆ) ಅಡಿ ಸೇರಿಸಲು ಬರುವುದಿಲ್ಲ. ಈ ಹಿಂದೆ ಸೇರ್ಪಡೆಯಾದ ತಾಲೂಕುಗಳಿಗೆ ಮಾತ್ರ ವಿಶೇಷ ಸ್ಥಾನಮಾನ ಸೀಮಿತವಾಗಲಿದೆ. ರಾಜ್ಯ ಸರ್ಕಾರ ಸಹ ಮೊಳಕಾಲ್ಮುರು ಸೇರಿಸುವು ವಿಚಾರ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Published by:Seema R
First published: