ಕೊಪ್ಪಳ: ಶಾಸಕರ ಸ್ಥಾನವನ್ನು ವೇಶ್ಯೆಯರ ರೀತಿ ಮಾರಾಟ ಮಾಡಿದ್ದಾರೆ ಎಂಬ ವಿಧಾನ ಪರಿಷತ್ ವಿಪಕ್ಷ ನಾಯಕ (MLC) ಬಿಕೆ ಹರಿಪ್ರಸಾದ್ (BK Hariprasad) ಅವರು ವಲಸಿಗ ಶಾಸಕರ ಕುರಿತು ನೀಡಿರುವ ಹೇಳಿಕೆಗೆ ಸಚಿವ ಬಿ. ಶ್ರೀರಾಮುಲು (B Sriramulu) ಕಿಡಿಕಾರಿದ್ದಾರೆ. ಕೊಪ್ಪಳ (Koppal) ಜಿಲ್ಲೆಯ ಕನಕಗಿರಿ ತಾಲೂಕಿನ ಸಿರಿವಾರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಬಿ ಶ್ರೀರಾಮುಲು, ಹರಿಪ್ರಸಾದ್ ಅವರೇ ನೀವು ಯಾವ ಸೀಮೆಯ ನಾಯಕರು ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
'ನೀವು ಯಾವ ಸೀಮೆ ನಾಯಕರು?'
ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಅವರು ವಲಸಿಗ ಶಾಸಕರ ಕುರಿತು ನೀಡಿರುವ ಹೇಳಿಕೆಯ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಬಿ ಶ್ರೀರಾಮುಲು, ಬಿಕೆ ಹರಿಪ್ರಸಾದ್ ಅವರೇ ನೀವು ಯಾವ ಸೀಮೆ ನಾಯಕರು? ಯಾವತ್ತಾದ್ರು ನೀವು ಗ್ರಾಮ ಪಂಚಾಯತ್ ಎಲೆಕ್ಷನ್ ಆದ್ರೂ ಗೆದ್ದಿದ್ದೀರಾ? ಹಿಂಬಾಗಿಲಿನಿಂದ ರಾಜಕೀಯ ಮಾಡೋರು ನೀವು. ಯಾರದ್ದೋ ಕೈಕಾಲು ಹಿಡಿದು ಪರಿಷತ್ ವಿಪಕ್ಷ ನಾಯಕರಾಗಿದ್ದೀರಿ. ಸಚಿವ ಆನಂದ್ ಸಿಂಗ್ ರಾಜೀನಾಮೆ ಕೊಟ್ಟು ಜನರಿಂದ ಆಯ್ಕೆಯಾದವರು. ದೇಶದಲ್ಲಿ ಕಾಂಗ್ರೆಸ್ ದಿವಾಳಿಯಾಗಿದೆ. ನಮ್ಮದು ರಾಷ್ಟ್ರೀಯ ಪಕ್ಷ. ನಾನು ಆವತ್ತು ಸ್ಪರ್ಧೆ ಮಾಡಿದ್ದು ಆಕಸ್ಮಿಕ. ಮುಂದೆ ನಮ್ಮ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತೆ ಎಂದು ಹೇಳಿದರು.
ಇದನ್ನೂ ಓದಿ: BK Hariprasad: ಯಶವಂತಪುರದಲ್ಲಿ ಚಪ್ಪಲಿ, ಪೊರಕೆ ಸೇವೆ ಮಾಡಿದ್ದು ಯಾಕಂತ ಹೇಳಲಿ: ಬಿ.ಸಿ ಪಾಟೀಲ್ಗೆ ಹರಿಪ್ರಸಾದ್ ಟಾಂಗ್
ಇನ್ನು ಜನಾರ್ದನ ರೆಡ್ಡಿ ಅವರ ನೂತನ ಪಕ್ಷಕ್ಕೆ ಶುಭ ಕೋರಿ ಟ್ವೀಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ಆ ಟ್ವೀಟ್ ನಾನು ಮಾಡಿರೋದಲ್ಲ. ನನ್ನ ಟ್ವಿಟ್ಟರ್ ಅಕೌಂಟ್ ಅನ್ನು ಯಾರೋ ಹ್ಯಾಕ್ ಮಾಡಿದ್ದಾರೆ. ಅದಕ್ಕಾಗಿ ನಾನು ಈಗಾಗಲೇ ದೂರು ನೀಡಿದ್ದೇನೆ. ಆದರೆ ಜನಾರ್ದನ ರೆಡ್ಡಿ ಅವರನ್ನು ನಾನು ಭೇಟಿಯಾಗೋದರಲ್ಲಿ ತಪ್ಪೆನಿಲ್ಲ ಎಂದು ಹೇಳಿದರು.
ಶ್ರೀರಾಮುಲುಗೆ ಗೇಲಿ ಮಾಡಿದ ಕಾಂಗ್ರೆಸ್
ಜನಾರ್ದನ ರೆಡ್ಡಿ ಅವರ ನೂತನ ಪಕ್ಷ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸಚಿವ ಬಿ ಶ್ರೀರಾಮುಲು ಅವರು ಶುಭ ಕೋರಿ ಟ್ವೀಟ್ ಮಾಡಿದ್ದರು. ಸುಮಾರು ಒಂದು ಗಂಟೆಯ ಬಳಿಕ ಆ ಟ್ವೀಟ್ ಅನ್ನು ಶ್ರೀರಾಮುಲು ಟ್ವಿಟ್ಟರ್ ಖಾತೆಯಿಂದ ಡಿಲೀಟ್ ಮಾಡಲಾಗಿತ್ತು. ಇದೀಗ ಇದೇ ವಿಚಾರವನ್ನಿ ಹಿಡಿದುಕೊಂಡು ರಾಜ್ಯ ಕಾಂಗ್ರೆಸ್ ಪಕ್ಷ ಶ್ರೀರಾಮುಲು ಅವರ ಕಾಲೆಳೆದಿದ್ದು, ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಜನಾರ್ದನ ರೆಡ್ಡಿಯವರ ಪಕ್ಷಕ್ಕೆ ಕಾರ್ಯಕರ್ತರನ್ನು ಆಹ್ವಾನಿಸುವ ಟ್ವೀಟ್ ಮಾಡಿ ಡಿಲೀಟ್ ಮಾಡಿದ ಶ್ರೀ ರಾಮುಲು ಅವರೇ, ತಮ್ಮ ಆಪ್ತರ ಮೇಲಿನ ಐಟಿ ದಾಳಿಗೂ, ಈ ಟ್ವೀಟ್ಗೂ ಸಂಬಂಧವಿರುವಂತಿದೆ ಅಲ್ಲವೇ? ಟ್ವೀಟ್ ಮಾಡಿ ಡಿಲೀಟ್ ಮಾಡಿದ್ದೇಕೆ? ದೆಹಲಿಯಿಂದ ನಿಮ್ಮ ಮೇಲೂ ಐಟಿ ದಾಳಿ ಮಾಡುವ ಬೆದರಿಕೆ ಬಂತೇ? ರಾಮುಲು ಬಿಜೆಪಿ ಪಕ್ಷ ಬಿಡುವರೇ? ಎಂದು ಪ್ರಶ್ನಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬಿ.ಸಿ ಪಾಟೀಲ್ ವಿರುದ್ಧವೂ ಕಿಡಿಕಾರಿದ್ದ ಬಿಕೆ ಹರಿಪ್ರಸಾದ್
ವಲಸಿಗ ಶಾಸಕರ ಕುರಿತು ಬಿಕೆ ಹರಿಪ್ರಸಾದ್ ನೀಡಿದ್ದ ಹೇಳಿಕೆಗೆ ಬಿಜೆಪಿ ಪಾಳಯದಿಂದ ಸಾಕಷ್ಟು ವಿರೋಧ ಕೇಳಿಬಂದಿತ್ತು. ಸಚಿವ ಬಿ.ಸಿ ಪಾಟೀಲ್ ಕೂಡ, ಬಿಕೆ ಹರಿಪ್ರಸಾದ್ ಪಿಂಪ್ ಕೆಲಸ ಮಾಡುತ್ತಿದ್ದರೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ‘ಬಿ.ಸಿ ಪಾಟಿಲ್ ಪೊಲೀಸ್ ಅಧಿಕಾರಿ ಇದ್ದಾಗ ಯಶವಂತಪುರದಲ್ಲಿ ಚಪ್ಪಲಿ, ಪೊರಕೆ ಸೇವೆ ಮಾಡಿದ್ದು ಯಾಕೆ ಅಂತ ಹೇಳಲಿ ಎಂದು ಸವಾಲೆಸೆದಿದ್ದರು. ಅಲ್ಲದೇ ಬೋರಿಂಗ್ ಇನ್ಸ್ಟಿಟ್ಯೂಟ್ ಅಲ್ಲಿ ಕಾಲಪತ್ಥರ್ ರೌಡಿಗೆ ಯಾವ ಸೇವೆ ಮಾಡ್ತಿದ್ರು ಗೊತ್ತಿದೆ. ಇಂತಹ ಪೊಲೀಸ್ ಅಧಿಕಾರಿ, ಸಿನಿಮಾ ನಟನ ಹೇಳಿಕೆಗೆ ನಾನು ಉತ್ತರ ಕೊಡಬೇಕಾಗಿಲ್ಲ ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ