ಚಿತ್ರದುರ್ಗ(ಫೆ.21): ನಾನು ಬಾದಾಮಿಯಲ್ಲಿ ಸೋತಿದ್ದು ಜನರಿಂದ ಅಲ್ಲ, ನಮ್ಮ ಪಕ್ಷದ ವ್ಯಕ್ತಿಗಳಿಂದ. ನಮ್ಮ ಪಕ್ಷದ ನಾಯಕರೆಲ್ಲರೂ ಸೇರಿ ನನ್ನನ್ನು ಸೋಲಿಸಿದರು. ಶ್ರೀರಾಮುಲು ಬೇಡರ ಕುಲದವನು, ದಲಿತ, ನಾಯಕ ಜನಾಂಗದವನು ಎರಡು ಕಡೆ ನಿಂತಿದ್ದಾನೆ. ಗೆದ್ದರೆ ನಮಗೆ ಮುಳ್ಳಾಗುತ್ತಾನೆ ಎಂದು ಸೋಲಿಸಿದರು ಎಂದು ಕೊಂಡ್ಲಹಳ್ಳಿಯಲ್ಲಿ ಸಮಾಜಕಲ್ಯಾಣ ಸಚಿವ ಬಿ.ಶ್ರೀರಾಮುಲು ಬಾದಾಮಿ ಸೋಲನ್ನ ನೆನೆದು ಬೇಸರ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ನೂತನ ಗ್ರಾಮ ಪಂಚಾಯ್ತಿ,ಸದಸ್ಯರು,ಅಧ್ಯಕ್ಷರುಗಳಿಗೆ ಕೊಂಡ್ಲಹಳ್ಳಿ ಬಿಳಿನೀರು ಚಿಲುಮೆ ಬಳಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಸಚಿವ ಬಿ.ಶ್ರೀರಾಮುಲು, ಕಳೆದ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನನಗೆ ಹಾಗೂ ಯಡಿಯೂರಪ್ಪನವರಿಗೆ ದೆಹಲಿಯಲ್ಲಿ ಅಮಿತ್ ಶಾ ಸೂಚಿಸಿದ್ದರು. ಅದರಂತೆ ಶಿಕಾರಿಪುರದಲ್ಲಿ ಯಡಿಯೂರಪ್ಪ, ಮೊಳಕಾಲ್ಮೂರು ಹಾಗೂ ಬಾದಾಮಿಯಲ್ಲಿ ನಾನು ಸ್ಪರ್ಧೆ ಮಾಡಿದ್ದೆ. ಆಗ ಮೊಳಕಾಲ್ಮೂರು ಕ್ಷೇತ್ರದ ಜನ ಕೈ ಬಿಡಲ್ಲ ಎಂದು ಯಡಿಯೂರಪ್ಪ ಬಳಿ ಹೇಳಿದ್ದೆ. ಬಾದಾಮಿಯಲ್ಲಿ ಲಿಂಗಾಯತ, ಕುರುಬ ಸಮುದಾಯದವರು ಹೆಚ್ಚಿದ್ದರು. ನಮ್ಮ ವಾಲ್ಮೀಕಿ ಸಮುದಾಯ ಕೆಲವೇ ಮತದಾರರು ಮಾತ್ರ ಇದ್ದರು. ದಿವಂಗತ ಆನಂತ್ ಕುಮಾರ್ ಹೆಲಿಕಾಪ್ಟರ್ ಕೊಟ್ಟು ರಾಜ್ಯದ ಹಲವು ಕ್ಷೇತ್ರಗಳ ಜವಾಬ್ದಾರಿ ವಹಿಸಿದ್ದರು.
ಮಂಗಳನ ಅಂಗಳದಲ್ಲಿ ನಾಸಾ ರೋವರ್; ಪರ್ಸಿವಿಯರೆನ್ಸ್ ಹಂಚಿಕೊಂಡಿರುವ ಈ ಅದ್ಭುತ ಚಿತ್ರಗಳನ್ನು ನೋಡಿ..!
ಬಾದಾಮಿ, ಮೊಳಕಾಲ್ಮೂರು ಕ್ಷೇತ್ರದಲ್ಲಿ 3-4 ದಿನ ಕೆಲಸ ಮಾಡಿದ್ದೆ, ರಾಜ್ಯದ 170 ಕ್ಷೇತ್ರದಲ್ಲಿ ನಾನು ಸುತ್ತಾಟ ನಡೆಸಿದ್ದೆ. ಆದರೆ ಬಾದಾಮಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ 1400 ಮತಗಳಿಂದ ಸೋಲು ಅನುಭವಿಸಿದೆ. ನಾನು ಬಾದಾಮಿಯಲ್ಲಿ ಸೋತಿದ್ದು, ಜನರಿಂದ ಅಲ್ಲ ನಮ್ಮ ಪಕ್ಷದ ವ್ಯಕ್ತಿಗಳಿಂದ ನಮ್ಮ ಪಕ್ಷದ ನಾಯಕರೆಲ್ಲರೂ ಸೇರಿ ನನ್ನ ಸೋಲಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು, ಶ್ರೀರಾಮುಲು ಬೇಡರ ಕುಲದವನು, ದಲಿತ. ಅಮಿತ್ ಷಾ, ಮೋದಿ ಎರಡು ಕಡೆ ನಿಂತಿದ್ದಾರೆ. ಶ್ರೀರಾಮುಲು ಒಬ್ಬ ನಾಯಕ ಜನಾಂಗದವನು ಎರಡು ಕಡೆ ನಿಂತಿದ್ದಾನೆ. ಎರಡು ಕಡೆ ಗೆದ್ದರೆ ನಮಗೆ ಮುಳ್ಳಾಗುತ್ತಾನೆ ಎಂದು ಸಂಚು ಮಾಡಿ ಸೋಲಿಸಿದರು. ಆದರೆ ಮೊಳಕಾಲ್ಮೂರು ಕ್ಷೇತ್ರದ ಜನತೆ ನನ್ನ ಕೈಹಿಡಿದಿಲ್ಲ ಎಂದಿದ್ದರೆ, ನನ್ನ ರಾಜಕೀಯ ಭವಿಷ್ಯ ಜೀವನ ಕತ್ತಲಾಗುತ್ತಿತ್ತು ಎಂದಿದ್ದಾರೆ. ಇನ್ನೂ ಚುನಾವಣೆ ವೇಳೆ ಬಾದಾಮಿಯಲ್ಲಿ ಏನಾಯ್ತು ಎಲ್ಲರಿಗೂ ಗೊತ್ತಿದೆ ಎಂದರು.
ಎಲ್ಲೋ ಒಂದು ಕಡೆ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ. ರಾಮುಲುಗೆ ಭಯ ,ಹೆದರಿಕೆ ಎಂಬುದು ಇಲ್ಲ. ರಾಜಕಾರಣದಲ್ಲಿ ಈವತ್ತಿನ ತನಕ ಹೆದರಿಲ್ಲ, ಮುಂದೆಯೂ ಹೆದರುವುದಿಲ್ಲ. ಬಾದಾಮಿಯಲ್ಲಿ ಸೋತ ಸಂದರ್ಭ ಮೊಳಕಾಲ್ಮೂರು ಜನ ನನ್ನ ಕೈ ಹಿಡಿದರು. ಈ ಜನರನ್ನ ನನ್ನ ಕೊನೆಯ ಉಸಿರು ಇರುವವರೆಗೂ ಮರೆಯಲ್ಲ, ನಿಮ್ಮ ಜೊತೆಗೆ ಇರುತ್ತೇನೆ ಎಂದು ಭರವಸೆ ನೀಡಿದರು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ