ಚಿತ್ರದುರ್ಗದ ಪ್ರತಿ ತಾಲ್ಲೂಕಿನಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಿ; ಸಚಿವ ಬಿ.ಶ್ರೀರಾಮುಲು

ಅನೇಕ ಜನರಿಗೆ ರೋಗ ಲಕ್ಷಣಗಳಿದ್ದರೂ RTPCR ಹಾಗೂ ರ್ಯಾಪಿಟ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬರುತ್ತಿದೆ. ಸಿಟಿ ಸ್ಕ್ಯಾನ್‍ನಲ್ಲಿ ಈ ಬಗ್ಗೆ ವರದಿಯಾಗಲಿದ್ದು ಇಂತಹ ರೋಗಿಗಳನ್ನು ಸಾರಿ, ಐಎಲ್‍ಐ ವಾರ್ಡ್‍ಗೆ ದಾಖಲಿಸಿ ಕೋವಿಡ್ ಸೋಂಕಿತರಿಗೆ ನೀಡುವ ಚಿಕಿತ್ಸೆಯನ್ನು ಇವರಿಗೂ ನೀಡಬೇಕು ಎಂದರು.

ಬಿ ಶ್ರೀರಾಮುಲು

ಬಿ ಶ್ರೀರಾಮುಲು

  • Share this:
ಚಿತ್ರದುರ್ಗ(ಏ.30): ಚಿತ್ರದುರ್ಗ ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಆರಂಭ ಮಾಡಲು ಪ್ರಸ್ತಾವನೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೊರೋನಾ ರೋಗ ತಡೆ ಕಾರ್ಯಕ್ರಮಗಳು ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾಗಬಾರದು. ಈ ಹಿನ್ನಲೆಯಲ್ಲಿ ತಾಲ್ಲೂಕುವಾರು ಆಕ್ಸಿಜನ್ ಉತ್ಪಾದನಾ ಘಟಕ ಆರಂಭ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಇನ್ನು  ರೆಮ್ಡಿಸಿವರ್ ಲಸಿಕೆ ಸರಬರಾಜು ವಿಚಾರದಲ್ಲಿ  ತೊಂದರೆ ಉಂಟಾಗುತ್ತಿದೆ. ಇದರಿಂದ ಎಲ್ಲ ಕಡೆಯೂ ದೂರುಗಳು ಬರುತ್ತಿವೆ. ರೆಮ್ಡಿಸಿವರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಗಟ್ಟುವ ಉದ್ದೇಶದಿಂದ ಈಗಾಗಲೇ ಜಿಲ್ಲೆಯಲ್ಲಿ ಪ್ಲೈಯಿಂಗ್ ಸ್ಕ್ವಾಡ್ ನೇಮಕ ಮಾಡಲಾಗಿದ್ದು, ಅಗತ್ಯ ಕ್ರಮವಹಿಸಬೇಕು. ಜಿಲ್ಲೆಯಲ್ಲಿ ರೆಮ್ಡಿಸಿವರ್ ಲಸಿಕೆ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹ ಮಾಡಿಕೊಳ್ಳಬೇಕು. ಕೋವಿಡ್ ಸೋಂಕಿತರಿ ಚಿಕಿತ್ಸೆಗೆ ಬಹಳ ಅಗತ್ಯವಿರುವ ಆಕ್ಸಿಜನ್ ಹಾಗೂ ರೆಮ್ ಡಿಸಿವಿರ್ ಪೂರೈಕೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು  ಹೇಳಿದ್ದಾರೆ.

ಕೊರೋನಾ ಸ್ಫೋಟಕ್ಕೆ ಹೋಂ ಐಸೋಲೇಷನ್ ಕೂಡ ಕಾರಣವಾಗ್ತಾ ಇದೆಯಾ?

ಸಹಾಯಕ ಔಷಧಿ ನಿಯಂತ್ರಕ ಮಾತನಾಡಿ, ಖಾಸಗಿ ಆಸ್ಪತ್ರೆಗಳಿಗೆ ಪ್ರತಿದಿನ 300 ಹಾಗೂ ಸರ್ಕಾರಿ ಆಸ್ಪತ್ರೆಗೆ 200 ಸೇರಿದಂತೆ ಜಿಲ್ಲೆಗೆ ಪ್ರತಿದಿನವೂ ಕನಿಷ್ಠ 500 ರೆಮ್‍ಡಿಸಿವಿರ್ ಅಗತ್ಯವಿದೆ. ಗುರುವಾರ ಜಿಲ್ಲೆಗೆ 480 ರೆಮ್‍ಡಿಸಿವಿರ್ ಸರಬರಾಜಾಗಿದೆ ಎಂದು ತಿಳಿಸಿದರು.
ಬಳಿಕ  ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಸಮರ್ಪಕವಾಗಿ ಸೌಲಭ್ಯ ದೊರೆಯುವಂತಾಗಬೇಕು. ರೋಗಿಗಳು ಯಾವುದೇ ಕಾರಣಕ್ಕೂ ಆಕ್ಸಿಜನ್ ಇಲ್ಲ ಎಂಬ ಸಮಸ್ಯೆ ಹೇಳಬಾರದು. ಸರ್ಕಾರಿ ವೈದ್ಯರು ರೆಮ್ಡಿಸಿವರ್ ಲಸಿಕೆಯನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ತಾಕೀತು ಮಾಡಿದರು.

ಅನೇಕ ಜನರಿಗೆ ರೋಗ ಲಕ್ಷಣಗಳಿದ್ದರೂ RTPCR ಹಾಗೂ ರ್ಯಾಪಿಟ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬರುತ್ತಿದೆ. ಸಿಟಿ ಸ್ಕ್ಯಾನ್‍ನಲ್ಲಿ ಈ ಬಗ್ಗೆ ವರದಿಯಾಗಲಿದ್ದು ಇಂತಹ ರೋಗಿಗಳನ್ನು ಸಾರಿ, ಐಎಲ್‍ಐ ವಾರ್ಡ್‍ಗೆ ದಾಖಲಿಸಿ ಕೋವಿಡ್ ಸೋಂಕಿತರಿಗೆ ನೀಡುವ ಚಿಕಿತ್ಸೆಯನ್ನು ಇವರಿಗೂ ನೀಡಬೇಕು. ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ವೈದ್ಯರು ಸೌಜನ್ಯದಿಂದ ವರ್ತಿಸಬೇಕು. ಅವರೊಂದಿಗೆ ಗೌರವದೊಂದಿಗೆ ನಡೆದುಕೊಳ್ಳಬೇಕು ಎಂದು ತಿಳಿಸಿದರು.

ಕೋವಿಡ್ ಲಸಿಕೆ ಪಡೆಯಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಣೆಯಿಂದ ಬರುತ್ತಿದ್ದಾರೆ. ಆದರೆ ಲಸಿಕೆ ದಾಸ್ತಾನು ಇಲ್ಲವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಲಸಿಕೆ ಸಂಗ್ರಹಿಸಿಕೊಟ್ಟುಕೊಳ್ಳಬೇಕು ಎಂದು ಶಾಸಕಿ ಪೂರ್ಣಿಮಾ ಸೂಚಿಸಿದರು. ಬಳಿಕ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಕೋವಿಡ್ ಹಿನ್ನಲೆಯಲ್ಲಿ ಜನರಿಗೆ ಯಾವುದೇ ಉದ್ಯೋಗವಿಲ್ಲ. ಹಾಗಾಗಿ ಗ್ರಾಮ ಪಂಚಾಯಿತಿವಾರು ಕೂಲಿಗಾಗಿ ಕೆಲಸ ಕಾರ್ಯಕ್ರಮ ಹಮ್ಮಿಕೊಂಡು ದುಡಿಯುವ ಕೈಗಳಿಗೆ ಕೆಲಸ ನೀಡಬೇಕು. ಇದರಿಂದ ದುಡಿದು ತಿನ್ನುವವರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
Published by:Latha CG
First published: