ವಿಜಯನಗರ ಪ್ರತ್ಯೇಕ ಜಿಲ್ಲೆ ವಿಚಾರದಲ್ಲಿ ಭಾರೀ ಹಿನ್ನಡೆ; ರಾಜಕೀಯ ನಿವೃತ್ತಿಯ ಶಪಥ ಮಾಡಿದ ಆನಂದ್ ಸಿಂಗ್

ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡುವುದಾಗಿ ನನ್ನ ಕ್ಷೇತ್ರದ ಜನರಿಗೆ ಮಾತು ಕೊಟ್ಟಿದ್ದೇನೆ. ಮುಂದಿನ ಚುನಾವಣೆಗೆ ಯಾವ ಮುಖ ಇಟ್ಟುಕೊಂಡು ಜನರ ಮುಂದೆ ಹೋಗಲಿ? ಎಂದು ಸಿಎಂ ಬಳಿ ಆನಂದ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.

ಸಚಿವ ಆನಂದ್​ ಸಿಂಗ್​

ಸಚಿವ ಆನಂದ್​ ಸಿಂಗ್​

  • Share this:
ಬೆಂಗಳೂರು (ಫೆ. 12): ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸುವ ಭರವಸೆ ನೀಡಿ, ಚುನಾವಣೆಯಲ್ಲಿ ಗೆಲುವು ಕಂಡಿದ್ದ ಆನಂದ್ ಸಿಂಗ್​ಗೆ ಈಗ ಮತದಾರರ ಮುಂದೆ ಕೈಕಟ್ಟಿ ನಿಲ್ಲುವಂತಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪನವರ ಮೇಲೆ ತೀವ್ರ ಅಸಮಾಧಾನಗೊಂಡಿರುವ ಸಚಿವ ಆನಂದ್ ಸಿಂಗ್ "ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ" ಎನ್ನುವ ಮೂಲಕ ಶಾಕ್ ನೀಡಿದ್ದಾರೆ.

ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರ ಮೇಲೆ ಮುನಿಸಿಕೊಂಡು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿದ್ದ ಶಾಸಕರು ಬಿಜೆಪಿ ಸೇರಿದ್ದರು. ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಜಯಭೇರಿ ಬಾರಿಸಿದ್ದ ಶಾಸಕರು ತಾವು ಅರ್ಹರು ಎಂಬುದನ್ನು ಸಾಬೀತುಪಡಿಸಿಕೊಂಡಿದ್ದರು. ಇದೀಗ 10 ವಲಸಿಗ ಶಾಸಕರಿಗೆ ಮಂತ್ರಿಗಿರಿಯನ್ನೂ ನೀಡಿ, ಅವರು ಬಯಸಿದ ಖಾತೆಗಳನ್ನು ಕೂಡ ನೀಡಲಾಗಿದೆ. ಇಷ್ಟಾದರೂ ಅವರಲ್ಲಿ ಕೆಲವರಿಗೆ ಅಸಮಾಧಾನ ಕಡಿಮೆಯಾಗಿಲ್ಲ. ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದ ಬಿ.ಸಿ. ಪಾಟೀಲ್ ಬೇರೆ ಖಾತೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನದ ಬದಲು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದರೂ ಅವರು ಆ ಆಫರ್ ಅನ್ನು ನಿರಾಕರಿಸಿದ್ದರು.

ಇದನ್ನೂ ಓದಿ: ಸಚಿವಗಿರಿ ಸಿಕ್ಕರೂ ಆನಂದ್ ಸಿಂಗ್​ಗೆ ಸಂತಸವಿಲ್ಲ; ಹೊಸ ಜಿಲ್ಲೆ ರಚನೆ ವಿಚಾರದಲ್ಲಿ ರೆಡ್ಡಿ-ರಾಮುಲು ಪಾಳಯದ ಮೇಲುಗೈ

ಇದೀಗ ಸಿಎಂ ಮುಂದೆ ಸಚಿವ ಆನಂದ್ ಸಿಂಗ್ ಕೂಡ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಬಳ್ಳಾರಿಯ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸುವ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿದ್ದಾಗಿನಿಂದಲೂ ಆನಂದ್ ಸಿಂಗ್ ಭರವಸೆ ನೀಡುತ್ತಲೇ ಇದ್ದಾರೆ. ಈ ಬಾರಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿರುವುದರಿಂದ ಪ್ರತ್ಯೇಕ ಜಿಲ್ಲೆಯ ಬೇಡಿಕೆ ಸುಲಭವಾಗಿ ಈಡೇರುತ್ತದೆ ಎಂಬ ಭರವಸೆ ನೀಡಿ ಉಪಚುನಾವಣೆಯಲ್ಲಿ ಮತಯಾಚನೆ ಮಾಡಿದ್ದ ಆನಂದ್​ ಸಿಂಗ್​ಗೆ ಈಗ ಮುಖಭಂಗವಾಗಿದೆ. ವಿಜಯನಗರ ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸುವ ವಿಚಾರದಲ್ಲಿ ಆನಂದ್ ಸಿಂಗ್​ಗೆ ಭಾರೀ ಹಿನ್ನಡೆಯಾಗಿದೆ.

ಆನಂದ್ ಸಿಂಗ್ ಶಪಥ:

ಕಾಂಗ್ರೆಸ್​ಗೆ ರಾಜೀನಾಮೆ ನೀಡಲು ಮತ್ತು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲು ಪ್ರಮುಖ ಅಸ್ತ್ರವಾಗಿದ್ದ ಪ್ರತ್ಯೇಕ ಜಿಲ್ಲೆಯ ಬೇಡಿಕೆಗೆ ಸಿಎಂ ಯಡಿಯೂರಪ್ಪ ಸೊಪ್ಪು ಹಾಕಿಲ್ಲ. ಈ ಕಾರಣಕ್ಕೆ ಅಸಮಾಧಾನಗೊಂಡಿರುವ ಆನಂದ್ ಸಿಂಗ್, ನಾನಿನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಯಡಿಯೂರಪ್ಪನವರ ಎದುರು ಶಪಥ ಮಾಡಿದ್ದಾರೆ!

ಇದನ್ನೂ ಓದಿ: ಬಾಕಿ ವೇತನಕ್ಕೆ ಆಗ್ರಹಿಸಿ ಶ್ರೀರಾಮುಲು ಮನೆಮುಂದೆ ನೌಕರರ ಧರಣಿ; ಇಬ್ಬರು ಪ್ರತಿಭಟನಾಕಾರರು ಆಸ್ಪತ್ರೆಗೆ ದಾಖಲು

ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸದ ಹಿನ್ನೆಲೆಯಲ್ಲಿ ಸಿಎಂ ಬಳಿ ಬೇಸರ ವ್ಯಕ್ತಪಡಿಸಿರುವ ಆನಂದ್ ಸಿಂಗ್, ಪ್ರತ್ಯೇಕ ಜಿಲ್ಲೆ ಮಾಡುವುದಾಗಿ ನನ್ನ ಕ್ಷೇತ್ರದ ಜನರಿಗೆ ಮಾತು ಕೊಟ್ಟಿದ್ದೇನೆ. ಈಗ ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ನಾನು ಮತದಾರರ ಮುಂದೆ ಸುಳ್ಳುಗಾರನಾಗುತ್ತೇನೆ. ಮುಂದಿನ ಚುನಾವಣೆಗೆ ಯಾವ ಮುಖ ಇಟ್ಟುಕೊಂಡು ಜನರ ಮುಂದೆ ಹೋಗಲಿ? ಇದಕ್ಕಿಂತ ಚುನಾವಣೆಗೆ ನಿಲ್ಲದಿರುವ ನಿರ್ಧಾರವೇ ಸೂಕ್ತ ಎಂದು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗೆಲುವಿನ ಸಂಭ್ರಮದಲ್ಲಿದ್ದ ಆಪ್ ಶಾಸಕನ ಕಾರಿನ ಮೇಲೆ ಗುಂಡಿನ ದಾಳಿ; ಕಾರ್ಯಕರ್ತ ಸಾವು

ಆನಂದ್ ಸಿಂಗ್ ಮಾತು ಕೇಳಿ ಶಾಕ್ ಆದ ಸಿಎಂ ಯಡಿಯೂರಪ್ಪ, ನಿಮ್ಮ ನಿರ್ಧಾರವನ್ನು ಬದಲಿಸಿಕೊಳ್ಳಿ, ಬೇಜಾರು ಮಾಡಿಕೊಳ್ಳಬೇಡಿ. ಪ್ರತ್ಯೇಕ ಜಿಲ್ಲೆಯ ಬೇಡಿಕೆ ರಾತ್ರೋರಾತ್ರಿ ಈಡೇರುವಂಥದ್ದಲ್ಲ. ಏಕಾಏಕಿ ಈ ನಿರ್ಧಾರ ಏಕೆ? ಆಕ್ರೋಶದಿಂದ ಮಾತನಾಡಿದರೆ ಏನೂ ಉಪಯೋಗವಿಲ್ಲ. ಬೇಜಾರಾಗಬೇಡಿ, ಸ್ವಲ್ಪ ದಿನ ಕಾಯಿರಿ. ಮುಂದೆ ಎಲ್ಲಾ ಗೊಂದಲ ಬಗೆಹರಿಯುತ್ತದೆ ಎಂದು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
First published: