ಆನೇಕಲ್(ಫೆ.16): ಗ್ರಾನೈಟ್ ವಹಿವಾಟಿನಲ್ಲಿ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಕೈಗಾರಿಕಾ ಏಷ್ಯಾದಲ್ಲಿಯೇ ದ್ವಿತೀಯ ಸ್ಥಾನದಲ್ಲಿದೆ. ಆದರೆ ಗ್ರಾನೈಟ್ ತಯಾರಿಕೆ ವೇಳೆ ಉತ್ಪತ್ತಿಯಾಗುವ ತ್ಯಾಜ್ಯದಿಂದ ಸುತ್ತಮುತ್ತಲಿನ ಪರಿಸರ ಹಾಳಾಗುತ್ತಿದೆ ಎಂಬ ದೂರು ಕೇಳಿಬಂದಿದ್ದು, ಅವೈಜ್ಞಾನಿಕವಾಗಿ ಗ್ರಾನೈಟ್ ಸ್ಲರಿ ಸುರಿದಿರುವ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಹೌದು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತಿರುವ ಕೃಷ್ಣದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಪಾಳು ಬಿದ್ದ ಜಮೀನುಗಳು ಮತ್ತು ಸರ್ಕಾರಿ ಹಳ್ಳ ಕೊಳ್ಳಗಳಲ್ಲಿ ರಾತ್ರೋರಾತ್ರಿ ಗ್ರಾನೈಟ್ ಸ್ಲರಿ ಸುರಿಯಲಾಗುತ್ತಿತ್ತು. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ದೂರು ನೀಡಿದ್ರು ಪ್ರಯೋಜನವಾಗಿರಲಿಲ್ಲ. ನಿನ್ನೆ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಆಗಮಿಸಿದ್ದ ಅರಣ್ಯ ಸಚಿವರಿಗೆ ಸ್ಥಳೀಯರು ಗಮನ ಸೆಳೆದಿದ್ದೆವು. ಇಂದು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದು ಕೇವಲ ಕಾಟಚಾರಕ್ಕೆ ಆಗಬಾರದು. ತಪ್ಪಿತಸ್ಥರ ಮೇಲೆ ಕ್ರಮವಾಗಬೇಕು ಎಂದು ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶಂಕರ್ ಒತ್ತಾಯಿಸಿದ್ದಾರೆ.
ಇನ್ನು, ಕಳೆದ ಹಲವು ವರ್ಷಗಳಿಂದ ಅಕ್ರಮವಾಗಿ ಗ್ರಾನೈಟ್ ಸ್ಲರಿಯನ್ನು ಸರ್ಕಾರಿ ಕೆರೆ ಕುಂಟೆ, ರಸ್ತೆ ಹೀಗೆ ಸಿಕ್ಕ ಸಿಕ್ಕ ಕಡೆ ಸುರಿಯಲಾಗುತ್ತಿದ್ದು, ಪರಿಸರ ಹಾಳಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಮೇಲ್ನೋಟಕ್ಕೆ ಅವೈಜ್ಞಾನಿಕವಾಗಿ ಗ್ರಾನೈಟ್ ಸ್ಲರಿ ಸುರಿದಿರುವುದು ತಪ್ಪು. ಸಾರ್ವಜನಿಕ ಸ್ಥಳಗಳಲ್ಲಿ ಅವೈಜ್ಞಾನಿಕವಾಗಿ ಸ್ಲರಿ ವಿಲೇವಾರಿ ಮಾಡುವ ಗ್ರಾನೈಟ್ ಕಾರ್ಖಾನೆಗಳನ್ನು ಗುರುತಿಸಿ ನೋಟೀಸ್ ನೀಡುವಂತೆ, ಸಮರ್ಪಕ ಸಮಜಾಯಿಷಿ ನೀಡದಿದ್ದಾರೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೆನೆ. ಅಧಿಕಾರಿಗಳ ವರದಿ ಆಧರಿಸಿ ಕ್ರಮಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಪೊಲೀಸರು ನಿಮ್ಮ ಶತ್ರುಗಳಲ್ಲ; ಬೇಕಾದರೆ ಟೀಕಿಸಿ, ಆದರೆ ಗೌರವಿಸಲು ಮರೆಯದಿರಿ: ಅಮಿತ್ ಶಾ
ಅಂದಹಾಗೆ ಗ್ರಾನೈಟ್ ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕವಾಗಿ ಜಾಗ ಮೀಸಲಿಡಲಾಗಿದೆ. ಆದ್ರು ಕೆಲವರು ಅಕ್ರಮವಾಗಿ ಸ್ಲರಿ ವಿಲೇವಾರಿ ಮಾಡಿ ಪರಿಸರವನ್ನು ಕಲುಷಿತಗೊಳಿಸುತ್ತಿರುವುದು ಕಂಡುಬಂದಿದೆ. ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 150 ಕ್ಕು ಅಧಿಕ ಗ್ರಾನೈಟ್ ಕಾರ್ಖಾನೆಗಳು ಇದ್ದು, ಸ್ಲರಿ ವಿಲೇವಾರಿ ಬಗ್ಗೆ ಕಾರಣ ಕೇಳಿ ನೋಟೀಸ್ ನೀಡಲಾಗುವುದು. ಜೊತೆಗೆ ಪರಿಶೀಲನೆ ಸಹ ನಡೆಸಲಾಗುವುದು. ಪರಿಶೀಲನೆ ವೇಳೆ ಅಕ್ರಮ ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಬಸವರಾಜ್ ಪಾಟೀಲ್ ತಿಳಿಸಿದ್ದಾರೆ.
ಒಟ್ನಲ್ಲಿ ಅರಣ್ಯ ಸಚಿವರಾದ ಬಳಿಕ ಮೊದಲ ಬಾರಿಗೆ ನಿನ್ನೆ ಬನ್ನೇರುಘಟ್ಟ ಜೈವಿಕ ಉದ್ಯಾನವಕ್ಕೆ ಆಗಮಿಸಿದ್ದ ಆನಂದ್ ಸಿಂಗ್ ಗ್ರಾನೈಟ್ ಸ್ಲರಿ ಸಮಸ್ಯೆ ಬಗ್ಗೆ ತಿಳಿದು ಇಂದು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುವುದರ ಜೊತೆಗೆ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದು, ಇದು ಆರಂಭ ಶೂರತ್ವ ಆಗದೇ ತಪ್ಪಿತಸ್ಥರ ಮೇಲೆ ಕ್ರಮವಾಗಬೇಕಿದೆ.
(ವರದಿ : ಆದೂರು ಚಂದ್ರು)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ