LockDown Effect: ನಿರುದ್ಯೋಗಿಗಳ ಕೈ ಹಿಡಿದ ಪಶು ಸಂಗೋಪನೆ; ಹಾಲಿನ ಉತ್ಪಾದನೆಯಲ್ಲಿ ದುಪ್ಪಟ್ಟು ಹೆಚ್ಚಳ

ರಾಜ್ಯದಲ್ಲಿ ಈ ಮೊದಲು 65 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು, ಈಗ ಸುಮಾರು 80 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಪ್ಪಳ (ಜೂ. 7):  ಮಹಾಮಾರಿ ಕೊರೋನಾದಿಂದಾಗಿ  ಅನೇಕ ಜನರು ನಿರುದ್ಯೋಗಿಗಳಾದರು. ನಗರದಲ್ಲಿ ಉದ್ಯೋಗ ಕಳೆದುಕೊಂಡ ಅನೇಕರು ತಮ್ಮ ತಮ್ಮ ಊರಿಗೆ ತೆರಳಿ ಸ್ವವಲಂಬನೆ ಬದುಕು ಪ್ರಾರಂಭಿಸಿದರು. ಅನೇಕರು ಕೃಷಿ, ಪಶು ಸಂಗೋಪನೆ, ಹೈನುಗಾರಿಕೆಯಲ್ಲಿ ತೊಡಗಿದರು. ಇದರ ಪರಿಣಾಮ ಈ ಬಾರಿ ಲಾಕ್​ಡೌನ್​ನಲ್ಲಿ ಹಾಲು ಉತ್ಪಾದಕರ ಘಟಕಗಳಲ್ಲಿ ಹಾಲಿನ ಸಂಗ್ರಹ ದುಪ್ಪಟ್ಟುಗೊಂಡಿದೆ.  ರಾಜ್ಯದಲ್ಲಿ ಈ ಮೊದಲು 65 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು, ಈಗ ಸುಮಾರು 80 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ನಿರೀಕ್ಷೆಗೂ ಮೀರಿ ಹಾಲಿನ ಸಂಗ್ರಹವಾಗುತ್ತಿದೆ. ಅತಿ ಹೆಚ್ಚು ಸಂಗ್ರಹಿತವಾದ ಪರಿಣಾಮ ಈ ಹಾಲುಗಳು ಬಳಕೆಯಾಗುತ್ತಿಲ್ಲ. ಇದಕ್ಕೆ ಪರ್ಯಾಯ ಮಾರ್ಗವಾಗಿ ಈ ಹಾಲುಗಳಿಂದ ಹಾಲಿನ ಪೌಡರ್​ ತಯಾರಿಸಲಾಗುತ್ತಿದ್ದು, ಇದು ಕೂಡ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದನೆಯಾಗುತ್ತಿದೆ. 

ಕೊಪ್ಪಳ, ಬಳ್ಳಾರಿ ಹಾಗು ರಾಯಚೂರು ಜಿಲ್ಲೆಯ ವ್ಯಾಪ್ತಿಯಲ್ಲಿ ರಾಬಕೊ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಈ ಮೊದಲು ನಿತ್ಯ 1. 65 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು, ಈಗ 2. 05 ಲಕ್ಷ ಲೀಟರ್ ಹಾಲು ಒಕ್ಕೂಟಕ್ಕೆ ಬರುತ್ತಿದೆ. ಇದಕ್ಕೆ ಕಾರಣ ಲಾಕ್ ಡೌನ್ ನಿಂದ ಉದ್ಯೋಗ ಕಳೆದುಕೊಂಡವರು ಹೈನುಗಾರಿಕೆ ಮಾಡುತ್ತಿರುವುದು ಒಂದು ಕಡೆಯಾದರೆ ಹೈನುಗಾರಿಕೆ ಮಾಡುತ್ತಿದ್ದವರು ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದರು.  ಆದರೆ ಈಗ ಸ್ಥಳೀಯವಾಗಿ ಹಾಲು ಮಾರಾಟವಾಗದ ಹಿನ್ನಲೆಯಲ್ಲಿ ಒಕ್ಕೂಟಕ್ಕೆ ಹಾಲು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ಒಕ್ಕೂಟದಿಂದ ಈಗ ನಿತ್ಯ 1. 20 ಲಕ್ಷ ಲೀಟರ್ ಗ್ರಾಹಕರು ಖರೀದಿಸುತ್ತಿದ್ದಾರೆ. 65 ಸಾವಿರ ಲೀಟರ್ ಮೊಸರು, ಮಜ್ಜಿಗೆ ಹಾಗು ತುಪ್ಪವಾಗಿ ತಯಾರಾಗುತ್ತಿದೆ. ಉಳಿದಂತೆ ನಿತ್ಯ 25 ಸಾವಿರ ಲೀಟರ್ ಹಾಲು ಪೌಡರ ಆಗುತ್ತಿದೆ. ಈಗ ಒಕ್ಕೂಟದಿಂದ ಹಾಲು ಖರೀದಿಯ ಪ್ರಮಾಣವು ಸಹ ಕಡಿಮೆಯಾಗಿದೆ.

ಇದನ್ನು ಓದಿ: ಅಪ್ಪ ಇಲ್ಲ, ಬದುಕಿಗೆ ಆಸರೆಯಾಗಿದ್ದ ಅಮ್ಮನೂ ಸೋಂಕಿಗೆ ಬಲಿ; ತಬ್ಬಲಿಯಾದ ಕಂದ

ಈ ಮೊದಲು ಹಾಲು ಮೊಸರು ಅಧಿಕ ಪ್ರಮಾಣದಲ್ಲಿ ಖರ್ಚಾಗುತ್ತಿತ್ತು, ಈಗ ಲಾಕ್ ಡೌನ್ ನಿಂದಾಗಿ ಹಾಲು ಮಾರಾಟವಾಗುತ್ತಿಲ್ಲ, ಹೊಟೇಲ್, ಮದುವೆ, ಸಭೆ ಸಮಾರಂಭಗಳಿಲ್ಲ, ಇದರಿಂದ ಒಕ್ಕೂಟವು ಅಧಿಕ ಪ್ರಮಾಣದಲ್ಲಿ ಹಾಲಿನ ಪೌಡರ ತಯಾರಿಸುತ್ತಿದೆ. ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಈ ಹಿಂದೆ ಶಾಲಾ ಮಕ್ಕಳಿಗೆ ಹಾಲು ನೀಡುತ್ತಿದ್ದರು, ಆಗ ಒಕ್ಕೂಟದಿಂದ ಪ್ರತಿ‌ತಿಂಗಳ 200 ಟನ್ ಹಾಲಿನ ಪೌಡರ ಬೇಕಿತ್ತು, ಆಗ ಮತ್ತು ಈಗ ಅಂಗನವಾಡಿಗಳಿಗೆ ಪ್ರತಿತಿಂಗಳು 250 ಟನ್ ಹಾಲಿನ ಪೌಡರ ಬೇಕಿದೆ. ಒಕ್ಕೂಟದಲ್ಲಿ ಹಾಲು ಅಧಿಕ ಸಂಗ್ರಹವಾಗುತ್ತಿರುವದರಿಂದ ಒಕ್ಕೂಟದಿಂದ ಹಾಲಿನ ಪೌಡರ ಅಧಿಕ ಪ್ರಮಾಣದಲ್ಲಿ ತಯಾರಾಗುತ್ತಿದೆ.

ರಾಜ್ಯದಲ್ಲಿ ಹಾಲಿನ ಪ್ರಮಾಣ ಅಧಿಕವಾಗಿರುವದರಿಂದ ಗ್ರಾಹಕರಿಗೆ ನೀಡುವ ಹಾಲಿನ ಪ್ರಮಾಣವನ್ನು ಪ್ರತಿ ಲೀಟರ್ ಹೆಚ್ಚುವರಿ 40 ಎಂಎಲ್ ಹಾಲು ನೀಡಲಾಗುತ್ತಿದೆ, ಈ ಹಿನ್ನೆಲೆಯಲ್ಲಿ ರಾಬಕೊ ಒಕ್ಕೂಟದಿಂದ ನಿತ್ಯ 4000 ಲೀಟರ್ ಅಧಿಕ ಹಾಲು ಗ್ರಾಹಕರಿಗೆ ತಲುಪುತ್ತಿದೆ.ಲಾಕ್ ಡೌನ್ ನಿಂದಾಗಿ ಉದ್ಯೋಗ ಕಳೆದುಕೊಂಡವರು ಈಗ ಕೃಷಿಯ ಉಪಕಸಬು ಆಗಿರುವ ಹಾಲು ಉತ್ಪಾದನೆಗೆ ತೊಡಗಿರುವುದು ಲಾಕ್ ಡೌನ್ ಹೊಸ ಉದ್ಯೋಗವನ್ನು ಸೃಷ್ಠಿಸಿದೆ, ಹಾಲು ಒಕ್ಕೂಟಗಳಲ್ಲಿ ಹಾಲು ಮಾರಾಟ ಮಾಡಿದರೆ ಸರಕಾರದಿಂದ ಪ್ರತಿಲೀಟರ್ ಗೆ ನಾಲ್ಕು ರೂಪಾಯಿ ಸಹಾಯಧನ ಸಿಗುತ್ತಿದ್ದು ಜನರಿಗೆ ಉದ್ಯೋಗಕ್ಕೆ ಹೈನುಗಾರಿಕೆ ಉತ್ತಮ ಉದ್ಯೋಗ ನೀಡುತ್ತಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Seema R
First published: