Education Department: 60 ವರ್ಷ ಮೀರಿದ ಬಿಸಿಯೂಟ ಅಡುಗೆ ಸಿಬ್ಬಂದಿಯನ್ನು ತೆಗೆದು ಹಾಕುವಂತೆ ಆದೇಶ

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಏ.1 ರಿಂದ ಪ್ರಾರಂಭಿಸಿ ಮುಂದಿನ ಯಾವುದೇ ತಿಂಗಳಲ್ಲಿ ಅಡುಗೆ ಸಿಬ್ಬಂದಿಗೆ 60 ವರ್ಷ ವಯಸ್ಸು ತುಂಬಿದರೆ, ಅದೇ ತಿಂಗಳ ಅಂತಿಮ ದಿನಾಂಕದಂದೇ  ಅವರನ್ನು ಮುಕ್ತಗೊಳಿಸಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯದಲ್ಲಿ ಅಕ್ಷರ ದಾಸೋಹ (Akshara Dasoha) ಮಧ್ಯಾಹ್ನದ ಬಿಸಿಯೂಟ (Mid Day Meal) ಯೋಜನೆಯಡಿ ಶಾಲಾ ಅಡುಗೆ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ 60 ವರ್ಷ ಮೇಲ್ಪಟ್ಟ ಅಡುಗೆ ಸಿಬ್ಬಂದಿಗಳನ್ನು (Workers ) ಕಡ್ಡಾಯವಾಗಿ ಕೆಲಸದಿಂದ ತೆಗೆಯಲು ಸಾರ್ವಜನಿಕ ಶಿಕ್ಷಣ ಇಲಾಖೆ (Education Department) ಮುಂದಾಗಿದೆ. ಬಿಸಿಯೂಟ ಯೋಜನೆ ಆರಂಭವಾದಾಗಿನಿಂದ ಅಂದರೆ 2003-04ರಿಂದ ಇಲ್ಲಿಯವರೆಗೂ ವಯೋಮಾನ 60 ಮೀರಿದ್ದರೂ ಆರೋಗ್ಯವಂತರಾಗಿರುವ ಅಡುಗೆ ಸಿಬ್ಬಂದಿಯನ್ನು ಮಾನವೀಯತೆ ದೃಷ್ಟಿಯಿಂದ ಕೆಲಸದಲ್ಲಿ ಮುಂದುವರಿಸಿಕೊಂಡು ಬರಲಾಗಿತ್ತು. ಆದರೆ, ಇದೇ ವರ್ಷ ಪ್ರಥಮ ಬಾರಿಗೆ ಇಲಾಖೆ ಈ ಕುರಿತು ಅಧಿಕೃತ ಆದೇಶ (Order) ಹೊರಡಿಸಿ, 60 ವರ್ಷ ಪೂರ್ಣಗೊಳಿಸಿದವರನ್ನು ಕಡ್ಡಾಯವಾಗಿ ಅಡುಗೆ ಕರ್ತವ್ಯದಿಂದ ತೆಗೆಯುವಂತೆ ಆದೇಶ ಹೊರಡಿಸಿದೆ.

ಕೆಲಸ ಕಳೆದು ಕೊಳ್ಳಲಿದ್ದಾರೆ 3 ಸಾವಿರ ಮಂದಿ

ಇಲಾಖೆಯ ಈ ಕ್ರಮದಿಂದ  ಅಂದಾಜು ಮೂರು ಸಾವಿರ ಮಂದಿ ಕೆಲಸ ಬಿಡಬೇಕಾಗಿದೆ. ಹಲವು ವರ್ಷ ಕೇವಲ ಗೌರವ ಸಂಭಾವನೆಯಲ್ಲೇ ಕೆಲಸ ಮಾಡಿದ್ದ ಇವರು ಯಾವುದೇ ನಿವೃತ್ತಿ ಸೌಲಭ್ಯವಿಲ್ಲದೇ ಕೆಲಸ ಬಿಡುವಂತಾಗಿದೆ. 2022ರ ಮಾ.31ಕ್ಕೆ 60 ವರ್ಷ ಪೂರ್ಣಗೊಳಿಸಿರುವ ಅಡುಗೆ ಸಿಬ್ಬಂದಿಯನ್ನು ವಯೋಸಹಜ ಕಾರಣ ಹಾಗೂ ಇತರ ಇಲಾಖೆಗಳಲ್ಲಿ ಗೌರವ ಸಂಭಾವನೆ ಪಡೆಯುತ್ತಿರುವವರನ್ನು 60 ವರ್ಷಕ್ಕೆ ಕೈಬಿಡುವ ಪದ್ಧತಿಯಂತೆ  ಕರ್ತವ್ಯದಿಂದ ಕೈಬಿಡಲು ಕ್ರಮ ಕೈಗೊಳ್ಳಬೇಕು. ಸೂಕ್ತ ದಾಖಲೆ, ವೈದ್ಯಕೀಯ ದೃಢೀಕರಣದ ವಿಧಾನದ ಮೂಲಕ ಪ್ರಸಕ್ತ ಮಾ.31ಕ್ಕೆ 60 ವರ್ಷ ತುಂಬಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಇಲಾಖೆ ಆಯುಕ್ತರು ಎಲ್ಲ ಶಾಲಾ ಮುಖ್ಯ ಶಿಕ್ಷಕರಿಗೆ ಆದೇಶಿಸಿದ್ದಾರೆ.

ಸೇವೆಯಿಂದ ಮುಕ್ತಗೊಳಿಸುವಂತೆ ಆದೇಶ

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಏ.1 ರಿಂದ ಪ್ರಾರಂಭಿಸಿ ಮುಂದಿನ ಯಾವುದೇ ತಿಂಗಳಲ್ಲಿ ಅಡುಗೆ ಸಿಬ್ಬಂದಿಗೆ 60 ವರ್ಷ ವಯಸ್ಸು ತುಂಬಿದರೆ, ಅದೇ ತಿಂಗಳ ಅಂತಿಮ ದಿನಾಂಕದಂದೇ  ಅವರನ್ನು ಮುಕ್ತಗೊಳಿಸಬೇಕು. ಜತೆಗೆ 60 ವರ್ಷ ತುಂಬದಿದ್ದರೂ ಅನಾರೋಗ್ಯ ಹಾಗೂ ಇತರ ಕಾರಣದಿಂದ  ಅಡುಗೆ ಕೆಲಸದಲ್ಲಿ ಮುಂದುವರಿಯಲು ಇಚ್ಛಿಸದಿದ್ದಲ್ಲಿ ಅವರಿಂದ ಲಿಖಿತ ಪತ್ರ ಪಡೆದು ಸೇವೆಯಿಂದ ಮುಕ್ತಗೊಳಿಸಬೇಕು ಎಂದು ಆಯುಕ್ತರು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: Electricity Rate rise: ಕರ್ನಾಟಕದ ಜನರಿಗೆ ‘ವಿದ್ಯುತ್’ ಶಾಕ್ ; ಪ್ರತಿ ಯೂನಿಟ್​ಗೆ ಎಷ್ಟು ಪೈಸೆ ಹೆಚ್ಚಳವಾಗಿದೆ ಗೊತ್ತಾ?

ಪಿಂಚಣಿ ಸೌಲಭ್ಯಕ್ಕೆ ಆಗ್ರಹ

ಶಾಲಾ ಅಡುಗೆ ಕೇಂದ್ರಗಳ ಸಿಬಂದಿಗೆ 60 ವರ್ಷ ತುಂಬಿದಾಗ ಅವರಿಗೆ ಇಡುಗಂಟು ಹಾಗೂ ಪಿಂಚಣಿ ಕೊಟ್ಟು ಕೆಲಸದಿಂದ ಕೈಬಿಡಬೇಕೆಂದು ಬಿಸಿಯೂಟ ಅಡುಗೆ ಸಿಬ್ಬಂದಿ ಹಾಗೂ ಅಸಂಘಟಿತ ಕಾರ್ಮಿಕ ಸಂಘಟನೆಗಳು ಮೊದಲಿನಿಂದಲೂ ಆಗ್ರಹಿಸುತ್ತಲೇ ಬಂದಿವೆ. 13-2-2020ರಂದು ಅಂದಿನ ಶಿಕ್ಷಣ ಸಚಿವ ಸುರೇಶಕುಮಾರ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ  ಚರ್ಚಿಸಲಾಗಿತ್ತು.

ಆಗ 60 ವರ್ಷ ತುಂಬಿ ನಿವೃತ್ತಿಯಾಗುವ ಅಡುಗೆ ಸಿಬಂದಿಗೆ 60:40 ಅನುಪಾತದಲ್ಲಿ (ಕೇಂದ್ರ ಶೇ.60, ರಾಜ್ಯ ಶೇ.40) ಇಡುಗಂಟು, ಪಿಂಚಣಿ ಕೊಡಲು ಸರಕಾರ ಬದ್ಧವಾಗಿದೆ. ಆದರೆ ಇದಕ್ಕೆ ಕೇಂದ್ರದ ಸಹಕಾರ ಬೇಕು. ಈ ಕುರಿತು ಕೇಂದ್ರಕ್ಕೆ ನಿಯೋಗ ಒಯ್ಯುವುದಾಗಿ ಹೇಳಿದ್ದರು. ಅಲ್ಲಿಯವರೆಗೆ 60 ವರ್ಷ ಮೀರಿದ ಯಾರನ್ನೂ ಕೆಲಸದಿಂದ ತೆಗೆಯುವುದಿಲ್ಲ ಎಂಬ ಭರವಸೆ ನೀಡಿದ್ದರು. ಸಮಸ್ಯೆ ಬಗೆಹರಿಯುವ ಮೊದಲೇ ಇಲಾಖೆ ಈ ವರ್ಷ ಕಡ್ಡಾಯವಾಗಿದೆ. 60 ವರ್ಷ ಮೀರಿದವರನ್ನು ಹೊರಹಾಕಲು ಅಧಿಕೃತ ಆದೇಶ ಹೊರಡಿಸಿದೆ

ಇದನ್ನೂ ಓದಿ: ಹಿಜಾಬ್​, ಹಲಾಲ್ ಆಯ್ತು ಇದೀಗ ಮಸೀದಿ ಮೈಕ್​ ನಿಷೇಧಕ್ಕೆ ಆಗ್ರಹ; ನಿಮ್ಮ ಅಲ್ಲಾ ಕಿವುಡಾನಾ ಅಂದ್ರು ಈ ಸ್ವಾಮೀಜಿ

ಅಧಿಕೃತ ಆದೇಶ ಹೊರಡಿಸಲಾಗಿದೆ

60 ವರ್ಷ ಮೀರಿದವರನ್ನು ಸೇವಾಮುಕ್ತಗೊಳಿಸುವ ಬಗ್ಗೆ ವಿರೋಧವಿಲ್ಲ. ಆದರೆ ಇವರಂತೆ ಗೌರವ ಸಂಭಾವನೆಯಲ್ಲಿ ದುಡಿಯುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಡುವ ರೀತಿಯಲ್ಲಿ ಕನಿಷ್ಠ 30 ಸಾವಿರ ಇಡುಗಂಟು ಕೊಡಬೇಕು. ಜತೆಗೆ 3000 ರೂ. ಪಿಂಚಣಿ ಕೊಡಲು ಸರಕಾರ ಕ್ರಮ ವಹಿಸಬೇಕು. ಅಲ್ಲಿವರೆಗೆ ಇವರನ್ನು ಕೆಲಸದಿಂದ ತೆಗೆಯಬಾರದು ಎಂದು ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್‌ ಅಧ್ಯಕ್ಷ, ಹೊನ್ನಪ್ಪ ಮರೆಮ್ಮನವರ ಹೇಳಿದ್ದಾರೆ.
Published by:Pavana HS
First published: