ಬೆಂಗಳೂರು(ಫೆ.03): ಪೊಲೀಸರ ನಿಷೇಧಾಜ್ಞೆ ನಡುವೆಯೂ ಸಾವಿರಾರು ಬಿಸಿಯೂಟ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳಲು ಮುಂದಾಗಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಉಪ್ಪಾರಪೇಟೆ ಪೊಲೀಸರು ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿ ಮಾಡಿ ಬಿಸಿಯೂಟ ಕಾರ್ಯಕರ್ತೆಯರಿಗೆ ಪ್ರತಿಭಟನೆ ನಡೆಸಲು ಅವಕಾಶ ಕೊಟ್ಟಿಲ್ಲ. ಆದರೆ ಮಾಹಿತಿ ತಿಳಿಯದೇ ಪೊಲೀಸರ ನಿಷೇಧಾಜ್ಞೆ ನಡುವೆಯೂ ಬಿಸಿಯೂಟ ಕಾರ್ಯಕರ್ತೆಯರು ಅಹೋರಾತ್ರಿ ಧರಣಿ ನಡೆಸಲು ಮುಂದಾಗಿದ್ದರು.
ಬಿಸಿಯೂಟ ಕಾರ್ಯಕರ್ತೆಯರು ಸಿಎಂ ಜಿಲ್ಲೆ ಶಿಕಾರಿಪುರದಲ್ಲೇ ದಂಗೆ ಎದ್ದಿದ್ದಾರೆ. ಶಿಕಾರಿಪುರದಿಂದ 300ಕ್ಕೂ ಹೆಚ್ಚು ಬಿಸಿಯೂಟ ಕಾರ್ಯಕರ್ತೆಯರು ಆಗಮಿಸಿದ್ದಾರೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಬಿಸಿಯೂಟ ಕಾರ್ಯಕರ್ತೆಯರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಸಿಐಟಿಯು ಮುಖಂಡೆ ವರಲಕ್ಷ್ಮೀ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಸಿಲಿಕಾನ್ ಸಿಟಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು.
ದೆಹಲಿ ವಿಧಾನಸಭಾ ಚುನಾವಣೆ: ಇಂದಿನಿಂದ ಪ್ರಧಾನಿ ಮೋದಿ ಬಿಜೆಪಿ ಪರ ಮತಬೇಟೆ
ಬೆಳಗ್ಗೆ 10 ಗಂಟೆಗೆ ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ಗೆ ರ್ಯಾಲಿ ನಡೆಸಲು ಮುಂದಾಗಿದ್ದರು. ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ನಡೆಸಲು ನಿರ್ಧಾರ ಮಾಡಿದ್ದರು. ಆದರೆ ಫ್ರೀಡಂ ಪಾರ್ಕ್ನತ್ತ ಬರದಂತೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿಯೇ ಪೊಲೀಸರು ಬಿಸಿಯೂಟ ಕಾರ್ಯಕರ್ತೆಯರನ್ನು ತಡೆದಿದ್ದಾರೆ. ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿಯನ್ನು ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಪೀಣ್ಯದ ಬಳಿಯೂ ಪ್ರತಿಭಟನೆಗಾಗಿ ಬರುತ್ತಿದ್ದ ಬಿಸಿಯೂಟ ಕಾರ್ಯಕರ್ತೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ. 7 ವಾಹನಗಳಲ್ಲಿ ಬಂದಿದ್ದ 50 ಕಾರ್ಯಕರ್ತೆಯರನ್ನು ಫ್ರೀಡಂಪಾರ್ಕ್ಗೆ ಬರದಂತೆ ಬಾಗಲಗುಂಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು, ಪ್ರತಿಭಟನೆ ಹಿನ್ನೆಲೆ, ಭದ್ರತೆಗೆ ಒಂದು ಕೆಎಸ್ಆರ್ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ. ಉಪ್ಪಾರಪೇಟೆ ಇನ್ಸ್ ಪೆಕ್ಟರ್ , ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಬೇಡಿಕೆಗಳು
- ಖಾಸಗೀಕರಣ ಕೈ ಬಿಡಬೇಕು
- ಕನಿಷ್ಟ ಕೂಲಿ ಹೆಚ್ಚಳ ಮಾಡಬೇಕು
- ನಿವೃತ್ತಿ ವೇತನ ನೀಡಬೇಕು
ಹೀಗೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಇಂದು ಬಿಸಿಯೂಟ ಕಾರ್ಯಕರ್ತೆಯರು ಹೋರಾಟ ನಡೆಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ